ADVERTISEMENT

ಟ್ಯಾಗೋರ್ ದಿಸೆಯಲ್ಲಿ ಚಿಂತಿಸಲು ಯುವಜನಾಂಗಕ್ಕೆ ಕಂಬಾರ ಕರೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 20:15 IST
Last Updated 21 ಫೆಬ್ರುವರಿ 2011, 20:15 IST

ಬೆಂಗಳೂರು: ‘ಟ್ಯಾಗೋರ್ ಅವರು ದೇಶದ ಕಲ್ಪನೆಗಿಂತ ಸದೃಢ ಸಮಾಜ ಕಟ್ಟುವ ಕುರಿತು ಚಿಂತಿಸುತ್ತಿದ್ದರು. ಈ ದಿಸೆಯಲ್ಲೇ ಇಂದಿನ ಯುವ ಜನಾಂಗ ಯೋಚಿಸಬೇಕಿದೆ’ ಎಂದು ನಾಟಕಕಾರ ಡಾ. ಚಂದ್ರಶೇಖರ ಕಂಬಾರ ತಿಳಿಸಿದರು.

ಎಂಇಎಸ್ ಪದವಿ ಕಾಲೇಜು ನಗರದಲ್ಲಿ ಸೋಮವಾರ ರವೀಂದ್ರನಾಥ ಟ್ಯಾಗೋರ್ ಅವರ 150ನೇ ಜನ್ಮದಿನೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ‘ಟ್ಯಾಗೋರ್ ವ್ಯಕ್ತಿತ್ವ ಮತ್ತು ಸಾಹಿತ್ಯ’ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗಾಂಧಿ ಮತ್ತು ಟ್ಯಾಗೋರ್ ಎಂಬ ಎರಡು ಶ್ರೇಷ್ಠ ಪ್ರತಿಭೆಗಳು ಬೆಳಕಿಗೆ ಬಂದರು. ಸ್ವಾತಂತ್ರ್ಯ ಪಡೆಯುವಲ್ಲಿ ವಿಶೇಷ ಪಾತ್ರ ವಹಿಸಿದರು. ಗಾಂಧೀಜಿ ಅವರನ್ನು ‘ಮಹಾತ್ಮ’ ಎಂದು ಕರೆದ ಮೊದಲ ವ್ಯಕ್ತಿಯೇ ಟ್ಯಾಗೋರ್’ ಎಂದು ತಿಳಿಸಿದರು. ‘ವಿವಿಧತೆಯಲ್ಲಿ ಏಕತೆಯೇ ಭಾರತದ ದೊಡ್ಡ ಶಕ್ತಿ.

ವಿವಿಧ ಧರ್ಮಗಳ, ಜಾತಿಯ, ಸಂಸ್ಕೃತಿಯ ಜನ ಒಂದಾಗಿ ಸಹಿಷ್ಣುತೆಯಿಂದ ಸಮಾಜದಲ್ಲಿ ಜೀವಿಸುತ್ತಿರುವುದೇ ದೊಡ್ಡ ಪವಾಡ’ ಎಂದು ಬಣ್ಣಿಸಿದರು. ‘ರಾಮಾಯಣ, ಮಹಾಭಾರತ ಮತ್ತು ಪುರಾಣಗಳನ್ನೇ ಇತಿಹಾಸವೆಂದು ನಂಬಿದ್ದ ಕಾಲದಲ್ಲಿ ಪಾಶ್ಚಿಮಾತ್ಯ ಇತಿಹಾಸಕಾರರಿಂದ ಇತಿಹಾಸ ಪ್ರಜ್ಞೆ ಬೆಳೆಯಿತು’ ಎಂದು ತಿಳಿಸಿದರು.

ಎಂಇಎಸ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ವಿಮಲಾ ರಂಗಾಚಾರ್, ಪ್ರಾಚಾರ್ಯ ಪ್ರೊ.ರವೀಂದ್ರ ರೇಶ್ಮೆ, ಪ್ರಾಧ್ಯಾಪಕಿ ಡಾ.ಆರ್.ವಿ.ಶೀಲಾ, ಡಾ. ಪುಟ್ಟಸ್ವಾಮಿ ಕಲ್ಲುದೇವರಹಳ್ಳಿ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.