ADVERTISEMENT

ಠಾಕ್ರೆ ವಿರುದ್ಧ ವಾಟಾಳ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2012, 19:30 IST
Last Updated 18 ಏಪ್ರಿಲ್ 2012, 19:30 IST

ಬೆಂಗಳೂರು: ಕರ್ನಾಟಕ ರಾಜ್ಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಶಿವಸೇನೆಯ ಮುಖ್ಯಸ್ಥ ಬಾಳಾಠಾಕ್ರೆ ಅವರ ವಿರುದ್ಧ ಕನ್ನಡ ಚಳವಳಿ ವಾಟಾಳ್ ಪಕ್ಷದ ಕಾರ್ಯಕರ್ತರು ನಗರದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಬುಧವಾರ ಬಾಳಾಠಾಕ್ರೆ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.

`ರಾಜ್ಯದ ಬಗ್ಗೆ ಯಾವುದಾದರೂ ತಗಾದೆ ತೆಗೆಯುತ್ತಲೇ ಇರುವುದು ಬಾಳಾಠಾಕ್ರೆ ಅವರ ಅಭ್ಯಾಸವಾಗಿದೆ. ಕರ್ನಾಟಕ ರಾಜ್ಯ ವಿಷದ ಹಾವು ಇದ್ದಂತೆ ಎಂದು ಹೇಳಿರುವ ಠಾಕ್ರೆ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು. ಮಹಾರಾಷ್ಟ್ರ ಸರ್ಕಾರ, ಠಾಕ್ರೆ ಅವರನ್ನು ಕೂಡಲೇ ಆ ರಾಜ್ಯದಿಂದ ಗಡಿಪಾರು ಮಾಡಬೇಕು. ಮಾನಸಿಕವಾಗಿ ಅಸ್ವಸ್ಥರಾಗಿರುವ ಅವರನ್ನು ಮನೋರೋಗಿಗಳ ಆಸ್ಪತ್ರೆಗೆ ಸೇರಿಸಬೇಕು~ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಆಗ್ರಹಿಸಿದರು.

`ಸುಮ್ಮನಿರುವ ಕನ್ನಡಿಗರನ್ನು ಕೆಣಕುವುದೇ ಠಾಕ್ರೆ ಕೆಲಸವಾಗಿದೆ. ಠಾಕ್ರೆ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದು ಸಾರ್ವಜನಿಕವಾಗಿ ಕ್ಷಮಾಪಣೆ ಕೇಳದೇ ಹೋದರೆ ಮಹಾರಾಷ್ಟ್ರದ ಗಡಿಭಾಗದಲ್ಲಿ ಗಡಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು~ ಎಂದು ಅವರು ಎಚ್ಚರಿಸಿದರು.

`ರಾಜ್ಯ ಸರ್ಕಾರ ಈ ಹೇಳಿಕೆಯನ್ನು ವಿರೋಧಿಸಿ ಕೇಂದ್ರ ಹಾಗೂ ಮಹಾರಾಷ್ಟ್ರ ಸರ್ಕಾರಗಳಿಗೆ ಪತ್ರ ಬರೆಯಬೇಕು. ಬಾಯಿಗೆ ಬಂದಂತೆ ಮಾತನಾಡುತ್ತಿರುವ ಠಾಕ್ರೆ ನಿಯಂತ್ರಣಕ್ಕೆ ಮಹಾರಾಷ್ಟ್ರ ಸರ್ಕಾರ ಮುಂದಾಗಬೇಕು~ ಎಂದು ಅವರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.