ADVERTISEMENT

ಡಾನ್ನಂತೆ ಮೆರೆದವ ಬೀದಿ ಹೆಣವಾದ...

​ಪ್ರಜಾವಾಣಿ ವಾರ್ತೆ
Published 16 ಜನವರಿ 2011, 19:30 IST
Last Updated 16 ಜನವರಿ 2011, 19:30 IST

ಬೆಂಗಳೂರು: ರೌಡಿಗಳು ಒಂದಲ್ಲ ಒಂದು ದಿನ ಭೀಕರವಾಗಿ ಕೊಲೆಯಾಗುತ್ತಾರೆ ಎಂಬುದನ್ನು ರೌಡಿ ದಿವಾನ್ ಅಲಿ ಕೊಲೆ ಪ್ರಕರಣ ಮತ್ತೊಮ್ಮೆ ಸಾಬೀತು ಮಾಡಿದೆ.  ಕೊಲೆ, ಕೊಲೆ ಯತ್ನ, ಅಪಹರಣ, ಬೆದರಿಕೆ ಅಂತಹ 36 ಪ್ರಕರಣಗಳಲ್ಲಿ ಭಾಗಿಯಾಗಿ ‘ಡಾನ್’ನಂತೆ ಮೆರೆದ ದಿವಾನ್ ಮೂರೇ ನಿಮಿಷದಲ್ಲಿ ಬೀದಿ ಹೆಣವಾಗಿ ಹೋಗಿದ್ದ. ಬಿಬಿಎಂಪಿ ಸದಸ್ಯನಾಗುವ ಮೂಲಕ ಸಮಾಜ ಸೇವಕನ ಸೋಗು ಹಾಕಿದರೂ ಸಾವು ಮಾತ್ರ ಆತನನ್ನು ಬಿಡಲೇ ಇಲ್ಲ.

ಅಲಿ ಎಂಟನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿ ಶಾಲೆ ಬಿಟ್ಟ ನಂತರ ಆಟೊ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಯಾರಬ್‌ನಗರದ ಮುನೀರ್ ಎಂಬಾತನ ಅಂಗಡಿಗೆ ನುಗ್ಗಿ ದಾಂದಲೆ ಮಾಡಿದ್ದ ಆತ ಜೀವ ಬೆದರಿಕೆ ಹಾಕುವ ಮೂಲಕ ಅಪರಾಧ ಚಟುವಟಿಕೆ ಆರಂಭಿಸಿದ್ದ. ಹತ್ತಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆತನನ್ನು 1996ರಲ್ಲೇ ಬನಶಂಕರಿ ಠಾಣೆಯ ರೌಡಿ ಪಟ್ಟಿಗೆ ಸೇರಿಸಲಾಗಿತ್ತು.

ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಆತ 2010ರ ಮೇ ತಿಂಗಳವರೆಗೆ ಜೈಲಿನಲ್ಲೇ ಇದ್ದ. ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ಆತ ಪ್ರಾಣ ಬೆದರಿಕೆ ಇರುವ ಕಾರಣ ರಕ್ಷಣೆ ಬೇಕೆಂದು ನಗರ ಪೊಲೀಸ್ ಕಮಿಷನರ್ ಶಂಕರ್ ಬಿದರಿ ಅವರಿಗೆ ಮನವಿ ಮಾಡಿದ್ದ. ಆತನಿಗೆ ಇಬ್ಬರು ಗನ್‌ಮ್ಯಾನ್‌ಗಳನ್ನೂ ನೀಡಲಾಗಿತ್ತು. ಜೆಡಿಎಸ್ ಪಕ್ಷದಿಂದ ಟಿಕೆಟ್ ಪಡೆದು ಬನಶಂಕರಿ ದೇವಸ್ಥಾನ ವಾರ್ಡ್‌ನಿಂದ ಸ್ಫರ್ಧಿಸಿದ್ದ ಆತ 7938 ಮತ ಪಡೆದು ಜಯಗಳಿಸಿದ್ದ. ನಗರ ಯೋಜನೆ ಸ್ಥಾಯಿ ಸಮಿತಿಯ ಸದಸ್ಯನೂ ಆಗಿದ್ದ.

ಮಾಹಿಮ್ ಜತೆ ದ್ವೇಷ:
‘ಚುನಾವಣೆಯಲ್ಲಿ ಗೆದ್ದ ನಂತರವೂ ಅಲಿ ಬದಲಾಗಿರಲಿಲ್ಲ. ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಕೋಟಿ ರೂಪಾಯಿ ದರೋಡೆ ಪ್ರಕರಣದಲ್ಲಿ ಆತ ಭಾಗಿಯಾಗಿದ್ದ. ಈ ಪ್ರಕರಣದಲ್ಲಿ ಆತ ನಿರೀಕ್ಷಣಾ ಜಾಮೀನನ್ನು ಪಡೆದಿದ್ದ. ಆತ ಕೃತ್ಯದಲ್ಲಿ ಭಾಗಿಯಾಗಿದ್ದ ಬಗ್ಗೆ ನಮಗೆ ಮಾಹಿತಿ ಸಿಕ್ಕ ನಂತರ ಆತನೇ ಗನ್‌ಮ್ಯಾನ್‌ಗಳನ್ನು ವಾಪಸ್ ಕಳುಹಿಸಿದ್ದ’ ಎಂದು ಬಿದರಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ಇನ್ನೊಬ್ಬ ರೌಡಿ ಮಾಹಿಮ್ ಜತೆ ದ್ವೇಷ ಕಟ್ಟಿಕೊಂಡಿದ್ದ ಆತ ಮಾಹಿಮ್ ಕೊಲೆಗೆ ಜಫ್ರು ಎಂಬಾತನಿಗೆ ಸುಪಾರಿ ಕೊಟ್ಟಿದ್ದ. ಮಾಹಿಮ್ ಸಹ ತಿಲಕ್‌ನಗರದ ಶಾನ್, ಮುಗ್ಧಮ್, ಶಿವಾಜಿನಗರದ ಬೋಟಿ ನಯೀಂ, ನೀಲಸಂದ್ರದ ಶಾನ್‌ವಾಜ್, ತಸ್ಲೀಂ ಮತ್ತು ಕಟ್ಟೆ ಶಬ್ಬೀರ್ ಎಂಬುವರಿಗೆ ಸುಪಾರಿ ಕೊಟ್ಟು ದಿವಾನ್ ಅಲಿಯನ್ನು ಕೊಲ್ಲುವಂತೆ ಹೇಳಿದ್ದ. ಈ ವಿಷಯ ನಮಗೆ ಗೊತ್ತಾದ ನಂತರ ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಅವರಿಬ್ಬರನ್ನೂ ಕರೆಸಿ ಎಚ್ಚರಿಕೆ ಕೊಟ್ಟು ಕಳುಹಿಸಿದ್ದರು. ಅವರಿಬ್ಬರನ್ನು ಗೂಂಡಾ ಕಾಯ್ದೆಯಡಿ ಬಂಧಿಸಲು ಕ್ರಮ ಕೈಗೊಳ್ಳಲಾಗಿತ್ತು’ ಎಂದು ಅವರು ಮಾಹಿತಿ ನೀಡಿದರು.

‘ಆ ನಂತರವೂ ಇಬ್ಬರು ತಮ್ಮ ಚಾಳಿಯನ್ನು ಮುಂದುವರೆಸಿದ್ದರು. ಈ ಮಧ್ಯೆ ಮಾಹಿಮ್ ಹೈಕೋರ್ಟ್‌ಗೆ ಅರ್ಜಿ ಹಾಕಿ ಪೊಲೀಸರು ಕಿರುಕುಳ ಕೊಡುತ್ತಿದ್ದಾರೆ ಎಂದು ದೂರಿದ್ದ’ ಎಂದು ಬಿದರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.