ADVERTISEMENT

ಡಿಕೆಶಿ, ಬಿಎಸ್‌ವೈಗೆ ಸಮನ್ಸ್

​ಪ್ರಜಾವಾಣಿ ವಾರ್ತೆ
Published 6 ಜುಲೈ 2012, 19:45 IST
Last Updated 6 ಜುಲೈ 2012, 19:45 IST

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ವಾಧೀನಪಡಿಸಿಕೊಂಡಿದ್ದ ಭೂಮಿಯನ್ನು ಅಕ್ರಮವಾಗಿ ಖರೀದಿಸಿ, ಅಭಿವೃದ್ಧಿಪಡಿಸಿದ ಆರೋಪದ ಮೇಲೆ ದಾಖಲಾಗಿರುವ ಪ್ರಕರಣದ ವಿಚಾರಣೆಗೆ ಆಗಸ್ಟ್ 2ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಶಾಸಕ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಮನ್ಸ್ ಜಾರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಸಲ್ಲಿಸಿದ್ದ ಖಾಸಗಿ ದೂರಿನಲ್ಲಿರುವ ಆರೋಪಗಳ ಬಗ್ಗೆ ತನಿಖೆ ನಡೆಸಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಆರೋಪಪಟ್ಟಿಯನ್ನು ಗುರುವಾರ ವಿಚಾರಣೆಗೆ ಸ್ವೀಕರಿಸಿದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು, ಸಮನ್ಸ್ ಜಾರಿಗೆ ಆದೇಶಿಸಿದರು. ಇದೇ ಪ್ರಕರಣದಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದ ಕಬ್ಬಾಳೆಗೌಡ ಅವರ ಆಕ್ಷೇಪಣೆಯನ್ನು ಮಾನ್ಯ ಮಾಡಿ ಯಡಿಯೂರಪ್ಪ ಅವರಿಗೂ ಸಮನ್ಸ್ ಜಾರಿಗೆ ಆದೇಶ ಹೊರಡಿಸಿದರು.


ಶಿವಕುಮಾರ್, ಯಡಿಯೂರಪ್ಪ ಅವರೊಂದಿಗೆ ಪ್ರಕರಣದ ಇತರೆ ಆರೋಪಿಗಳಾದ ಬೆಂಗಳೂರು ಪೂರ್ವ ತಾಲ್ಲೂಕಿನ ನಿವೃತ್ತ ತಹಶೀಲ್ದಾರ್ ಹನುಮಂತು, ನಿವೃತ್ತ ಕಂದಾಯ ನಿರೀಕ್ಷಕ ಕೆ.ಎಸ್.ಚಂದ್ರಶೇಖರಯ್ಯ ಮತ್ತು ನಿವೃತ್ತ ಗ್ರಾಮಲೆಕ್ಕಿಗ ದೊಡ್ಡ ಹನುಮಯ್ಯ ಅವರಿಗೂ ಸಮನ್ಸ್ ಜಾರಿ ಮಾಡುವಂತೆ ಆದೇಶಿಸಲಾಗಿದೆ. ವಿಚಾರಣೆ ವೇಳೆ ನೀಡಿದ ಹೇಳಿಕೆ ಆಧರಿಸಿ ಪುರವಂಕರ ಬಿಲ್ಡರ್ಸ್ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಗಿರೀಶ್ ಪುರವಂಕರ ಅವರನ್ನೂ ಆರೋಪಿ ಎಂದು ನ್ಯಾಯಾಲಯ ಪರಿಗಣಿಸಿದೆ. ಅವರಿಗೂ ಸಮನ್ಸ್ ಜಾರಿಗೊಳಿಸುವಂತೆ ಆದೇಶದಲ್ಲಿ ತಿಳಿಸಿದೆ.

ನಿರೀಕ್ಷಣಾ ಜಾಮೀನು ಮಂಜೂರು: ಇದೇ ಪ್ರಕರಣದಲ್ಲಿ ಬಂಧನದ ಭೀತಿ ಎದುರಿಸುತ್ತಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಹೈಕೋರ್ಟ್ ಗುರುವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಶಿವಕುಮಾರ್ ಸಲ್ಲಿಸಿದ ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಮೂರ್ತಿ ಸುಭಾಷ್ ಬಿ.ಅಡಿ ಅವರು ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT