ADVERTISEMENT

ಡಿಕೆಶಿ ಮತ್ತೆ ದೆಹಲಿಗೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 19:45 IST
Last Updated 18 ಡಿಸೆಂಬರ್ 2013, 19:45 IST

ಬೆಂಗಳೂರು: ಲೋಕಸಭಾ ಚುನಾವಣೆ ಮುಗಿಯುವವರೆಗೂ ಸಚಿವ ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಸಿದ್ದ­ರಾಮಯ್ಯ ಅವರು ಹಿಂದೇಟು ಹಾಕಿದ ಬೆನ್ನಲ್ಲೇ, ಶಾಸಕ ಡಿ.ಕೆ.ಶಿವಕುಮಾರ್‌ ಅವರು ಮತ್ತೆ ದೆಹಲಿಗೆ ದೌಡಾಯಿಸಿದ್ದಾರೆ.

ಸಚಿವ ಸ್ಥಾನ ನೀಡುವಂತೆ ಕಳೆದ ವಾರ ದೆಹಲಿಗೆ ತೆರಳಿದ್ದ ಶಿವಕುಮಾರ್‌ ಕೆಲ ದಿನಗಳ ಕಾಲ ಅಲ್ಲೇ ಉಳಿದಿದ್ದರು. ಮಂಗಳವಾರ­ವಷ್ಟೇ ಬೆಂಗಳೂರಿಗೆ ವಾಪಸಾಗಿದ್ದರು. ಮುಖ್ಯಮಂತ್ರಿ­ಯವರನ್ನು ಭೇಟಿ ಮಾಡಿ ಸಂಪುಟ ಸೇರ್ಪಡೆ ಬಗ್ಗೆ ಮಾತುಕತೆ ನಡೆಸಿದ್ದರು. ಸಂಪುಟ ಸೇರ್ಪಡೆ ಮತ್ತೊಬ್ಬ ಪ್ರಬಲ ಆಕಾಂಕ್ಷಿಯಾಗಿರುವ ರೋಷನ್‌ ಬೇಗ್‌ ಕೂಡ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು.

ಆದರೆ, ಸದ್ಯ ಸಂಪುಟ ವಿಸ್ತರಣೆ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ­ಯವರು ನಿಲುವು ಪ್ರಕಟಿಸುತ್ತಿದ್ದಂತೆ ಬುಧವಾರ ರಾತ್ರಿ ದಿಢೀರ್‌ ದೆಹಲಿಗೆ ತೆರಳಿದ್ದಾರೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾ­ಧ್ಯಕ್ಷ ರಾಹುಲ್‌ ಗಾಂಧಿ ಸೇರಿದಂತೆ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಸಂಪುಟ ಸೇರ್ಪಡೆಗೆ ಒತ್ತಡ ತರಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಮ್ಮ ವಿರುದ್ಧದ ಭೂಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಯವರಿಗೆ ವಿವರ ಒದಗಿಸಿರುವ ರೋಷನ್‌ ಬೇಗ್‌ ಅವರು, ಆರೋಪಗಳಲ್ಲಿ ಹುರುಳಿಲ್ಲ ಎಂದು ಮನವರಿಕೆ ಮಾಡಲು ಪ್ರಯತ್ನಿಸಿದ್ದಾರೆ. ಅವರು ವರಿಷ್ಠರನ್ನು ಭೇಟಿಮಾಡಲು ಗುರುವಾರ ದೆಹಲಿಗೆ ತೆರಳುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.