ADVERTISEMENT

ಡಿ.4ರಿಂದ `ಬೆಂಗಳೂರು ಇಂಡಿಯಾ ನ್ಯಾನೊ'

​ಪ್ರಜಾವಾಣಿ ವಾರ್ತೆ
Published 1 ಜುಲೈ 2013, 20:11 IST
Last Updated 1 ಜುಲೈ 2013, 20:11 IST

ಬೆಂಗಳೂರು: ನ್ಯಾನೊ ತಂತ್ರಜ್ಞಾನದ ಪ್ರಗತಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದ್ದು, ಬೆಂಗಳೂರು ನಗರ ದೇಶದ ನ್ಯಾನೊ ರಾಜಧಾನಿಯಾಗಿದೆ ಎಂದು ಜವಾಹರಲಾಲ್ ನೆಹರು ವೈಜ್ಞಾನಿಕ ಸಂಶೋಧನಾ ಕೇಂದ್ರದ ಗೌರವಾಧ್ಯಕ್ಷ ಹಾಗೂ ನ್ಯಾನೊ ತಂತ್ರಜ್ಞಾನದ ಮುನ್ನೋಟ ಸಮೂಹದ ಮುಖ್ಯಸ್ಥ ಪ್ರೊ. ಸಿ.ಎನ್.ಆರ್. ರಾವ್ ಹೇಳಿದರು.

ಡಿಸೆಂಬರ್ 4ರಿಂದ 6ವರೆಗೆ ನಡೆಯಲಿರುವ `6ನೇ ಬೆಂಗಳೂರು ಇಂಡಿಯಾ ನ್ಯಾನೊ' ಸಮಾವೇಶದ ಅಂಗವಾಗಿ ನಗರದಲ್ಲಿ ಈಚೆಗೆ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ನ್ಯಾನೊ ತಂತ್ರಜ್ಞಾನ ಸಂಶೋಧನೆಯಲ್ಲಿ ಅಪಾರ ಪ್ರಗತಿ ಸಾಧಿಸಲಾಗಿದೆ. ಆರೋಗ್ಯ, ವಿದ್ಯುನ್ಮಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನ್ಯಾನೊ ತಂತ್ರಜ್ಞಾನ ಬದಲಾವಣೆ ತಂದಿದೆ. ಇದರ ಸದ್ಬಳಕೆಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಶ್ರಮವಹಿಸಬೇಕಾಗಿದೆ. ಸತತ ಪ್ರಯತ್ನದಿಂದ ನ್ಯಾನೊ ತಂತ್ರಜ್ಞಾನದ ಪ್ರಗತಿಯಲ್ಲಿ ಭಾರತ 3ನೇ ಸ್ಥಾನ ಪಡೆಯಬೇಕು ಎಂದು ಸಲಹೆ ನೀಡಿದರು.

ಭಾರತೀಯ ವಿಜ್ಞಾನ ಸಂಸ್ಥೆಯ ಭೌತಶಾಸ್ತ್ರ ವಿಭಾಗದ ಪ್ರೊ. ಅಜಯ್ ಕೆ. ಸೂದ್ ಮಾತನಾಡಿ, 6 ವರ್ಷಗಳ ಹಿಂದೆ ಆರಂಭಿಸಿದ ನ್ಯಾನೊ ಸಮಾವೇಶ ಹೊಸ ಪ್ರಯೋಗವಾಗಿದ್ದರೂ ಯಶಸ್ವಿಯಾಗಿ ನಡೆಯಿತು. ಈ ಬಾರಿಯ ನ್ಯಾನೊ ಸಮಾವೇಶದಲ್ಲಿ ಸಂಶೋಧನೆ, ಉದ್ಯಮ ಮತ್ತು ಶೈಕ್ಷಣಿಕ ಅಂಶಗಳನ್ನು ಒಳಗೊಂಡ ಅಂಶಗಳಿಗೆ ಒತ್ತು ನೀಡಲಾಗಿದೆ. ಜತೆಗೆ ಪ್ರೊ.ಸಿ.ಎನ್.ಆರ್. ರಾವ್ ಪ್ರತಿಷ್ಠಾನ ಸಂಶೋಧನೆಗೆ ಪ್ರೋತ್ಸಾಹ ನೀಡಿದ್ದು, ಈ ಬಾರಿಯ ಪ್ರಶಸ್ತಿಯನ್ನು `ಪ್ರೊ.ಸಿ.ಎನ್.ಆರ್. ರಾವ್ ಬೆಂಗಳೂರು ಇಂಡಿಯಾ ನ್ಯಾನೊ ಪ್ರಶಸ್ತಿ' ಎಂದು ಕರೆಯಲಾಗುವುದು ಎಂದರು.

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಎಂ.ಎಂ. ಆಕ್ಟಿವ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಪಾಟಣಕರ್ ಉಪಸ್ಥಿತರಿದ್ದರು.

ಸಮಾವೇಶದಲ್ಲಿ ಏನೇನು?
ನಗರದ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ಡಿ.4 ರಿಂದ 6ರವರೆಗೆ ನಡೆಯಲಿರುವ `6ನೇ ಬೆಂಗಳೂರು ಇಂಡಿಯಾ ನ್ಯಾನೊ' ಸಮಾವೇಶದಲ್ಲಿ ಇಂಧನ, ಎಲೆಕ್ಟ್ರಾನಿಕ್ಸ್, ಕೃಷಿ, ಔಷಧ ವಿತರಣೆ, ಆರೋಗ್ಯ, ಸುರಕ್ಷಿತ ಕುಡಿಯುವ ನೀರು, ಜವಳಿ ವಿಷಯಗಳ ಬಗ್ಗೆ ಈ ಬಾರಿ ಪ್ರಮುಖವಾಗಿ ಚರ್ಚಿಸಲು ನಿರ್ಧರಿಸಲಾಗಿದೆ. ಜರ್ಮನಿ, ಕೋರಿಯಾ ಸೇರಿದಂತೆ ಹಲವು ಅಂತರರಾಷ್ಟ್ರೀಯ ನಿಯೋಗ, ವಿವಿಧ ದೇಶಗಳ ಕಂಪೆನಿಗಳು ಭಾಗವಹಿಸುವ ನಿರೀಕ್ಷೆ ಇದೆ.

ನ್ಯಾನೊ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಪ್ರದರ್ಶನ ಮತ್ತು ವಿಚಾರಗೋಷ್ಠಿಗಳನ್ನು ಆಯೋಜಿಸಲಾಗುವುದು. ಅಂತರರಾಷ್ಟ್ರೀಯ ಖ್ಯಾತಿಯ ತಜ್ಞರು ಸಂಶೋಧನೆ, ತಂತ್ರಜ್ಞಾನದ ಅಭಿವೃದ್ಧಿ, ಕೌಶಲ ಅಗತ್ಯ ಕುರಿತು ಚರ್ಚಿಸಲಿದ್ದಾರೆ. ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು `ನ್ಯಾನೊ ಫಾರ್ ದಿ ಯಂಗ್' ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT