ADVERTISEMENT

ಡೈರಿ ಪ್ರಕರಣ: ತನಿಖೆಗೆ ತಡೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 19:46 IST
Last Updated 13 ಜುಲೈ 2017, 19:46 IST
ಡೈರಿ ಪ್ರಕರಣ: ತನಿಖೆಗೆ ತಡೆ
ಡೈರಿ ಪ್ರಕರಣ: ತನಿಖೆಗೆ ತಡೆ   

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ನಾಯಕರಿಗೆ ಹಣ ಸಂದಾಯ ಮಾಡಿದ ಆರೋಪದಡಿ ಕಾಂಗ್ರೆಸ್‌ನ ವಿಧಾನ ಪರಿಷತ್‌ ಸದಸ್ಯ ಕೆ.ಗೋವಿಂದರಾಜು ಅವರಿಂದ ಡೈರಿ ವಶಪಡಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದಿರಾನಗರ ಪೊಲೀಸರ ತನಿಖೆಗೆ ಹೈಕೋರ್ಟ್‌ ತಡೆ ನೀಡಿದೆ.

ಈ ಕುರಿತಂತೆ ಆದಾಯ ತೆರಿಗೆ ಇಲಾಖೆಯ ಬೆಂಗಳೂರು ವಿಭಾಗ ದಾಖಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ನಡೆಸಿದರು.

ಪ್ರತಿವಾದಿಗಳಾದ ಪೊಲೀಸ್‌ ಕಮಿಷನರ್‌, ಕೆ.ಗೋವಿಂದ ರಾಜು ಹಾಗೂ ಇಂದಿರಾನಗರ ಠಾಣೆಯ ಪೊಲೀಸ್‌ ಅಧಿಕಾರಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಲಾಗಿದೆ.

ADVERTISEMENT

‘ಐ.ಟಿ.ಅಧಿಕಾರಿಗಳು ನನ್ನ ಮನೆಯಿಂದ ಯಾವುದೇ ಡೈರಿ ವಶಪಡಿಸಿಕೊಂಡಿಲ್ಲ’  ಎಂದು ಗೋವಿಂದರಾಜು 2016ರ ಮಾರ್ಚ್‌ನಲ್ಲಿ ಇಂದಿರಾನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಅನ್ವಯ ಪೊಲೀಸರು ಐ.ಟಿ ವಿಭಾಗದ ತನಿಖಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ‘ಡೈರಿಯನ್ನು ವಶಕ್ಕೆ ನೀಡಬೇಕು’ ಎಂದು ಕೋರಿದ್ದಾರೆ.

‘ಪೊಲೀಸರ ಈ ಕ್ರಮ ರಾಜಕೀಯ ದುರುದ್ದೇಶದಿಂದ ಕೂಡಿದ್ದು ತನಿಖೆಗೆ ಅಡ್ಡಿ ಉಂಟು ಮಾಡುವಂತಿದೆ.  ಆದ್ದರಿಂದ ತನಿಖೆಗೆ ತಡೆ    ನೀಡಬೇಕು’ ಎಂದು ಐ.ಟಿ ತನಿಖಾಧಿಕಾರಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.