ADVERTISEMENT

ತಂತ್ರಜ್ಞಾನದಿಂದ ಮಾಧ್ಯಮದ ಸ್ವರೂಪ ಬದಲು

ವಿನಾಕಾರಣ ಸ್ಪರ್ಧೆಯಿಂದ ಮೌಲ್ಯರಹಿತ ಸುದ್ದಿ ಪ್ರಸಾರ: ಕೆ.ಎನ್.ಭಟ್ ವಿಷಾದ

​ಪ್ರಜಾವಾಣಿ ವಾರ್ತೆ
Published 1 ಜುಲೈ 2013, 20:08 IST
Last Updated 1 ಜುಲೈ 2013, 20:08 IST
ನಗರದ ಪ್ರೆಸ್‌ಕ್ಲಬ್ ಆವರಣದಲ್ಲಿ ಸೋಮವಾರ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್, ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಎಂ.ಎ.ಪೊನ್ನಪ್ಪ, ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಕೆ.ಎನ್.ಭಟ್ ಭಾಗವಹಿಸಿದ್ದರು 	-ಪ್ರಜಾವಾಣಿ ಚಿತ್ರ
ನಗರದ ಪ್ರೆಸ್‌ಕ್ಲಬ್ ಆವರಣದಲ್ಲಿ ಸೋಮವಾರ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್, ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಎಂ.ಎ.ಪೊನ್ನಪ್ಪ, ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಕೆ.ಎನ್.ಭಟ್ ಭಾಗವಹಿಸಿದ್ದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: `ತಂತ್ರಜ್ಞಾನದ ನೂತನ ಆವಿಷ್ಕಾರಗಳಿಂದ ಮಾಧ್ಯಮದ ಸ್ವರೂಪ ಸಂಪೂರ್ಣ ಬದಲಾಗಿದೆ. ಆದರೆ, ಸತ್ಯನಿಷ್ಠೆ ಹಾಗೂ ಸಾಮಾಜಿಕ ಬದ್ಧತೆಯ ವ್ಯಾಖ್ಯಾನ ಬದಲಾಗದಂತೆ ಮಾಧ್ಯಮ ಕಾರ್ಯನಿರ್ವಹಿಸುವ ಅಗತ್ಯ ಕಾಣುತ್ತಿದೆ' ಎಂದು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಕೆ.ಎನ್.ಭಟ್ ಅಭಿಪ್ರಾಯಪಟ್ಟರು.

ಕಬ್ಬನ್ ಉದ್ಯಾನದಲ್ಲಿರುವ ಪ್ರೆಸ್‌ಕ್ಲಬ್ ಆವರಣದಲ್ಲಿ ಪತ್ರಿಕಾ ದಿನಾಚರಣೆ ಅಂಗವಾಗಿ ಸೋಮವಾರ ನಡೆದ `ಬದಲಾಗುತ್ತಿರುವ ಸಮಾಜ ಮತ್ತು ಮಾಧ್ಯಮದ ಸ್ವರೂಪಗಳು' ಕುರಿತು ಉಪನ್ಯಾಸ ನೀಡಿದರು.

`ಬ್ರೇಕಿಂಗ್ ನ್ಯೂಸ್'ನ ಹಾವಳಿಯಿಂದಾಗಿ ವಿನಾಕಾರಣ ಸ್ಪರ್ಧೆಗೆ ಬಿದ್ದ ಮಾಧ್ಯಮವು ಆತುರಾತುರವಾಗಿ ಮೌಲ್ಯರಹಿತ ಸುದ್ದಿಗಳನ್ನು ಬಿತ್ತರ ಮಾಡುತ್ತಿದೆ. ಪತ್ರಿಕೆಗಳಲ್ಲಿ  ಬಂದ ಎಲ್ಲ ಸುದ್ದಿಗಳು ಸತ್ಯವೆಂಬ ಕಾಲವೊಂದಿತ್ತು. ಈಗ ಈ ನಂಬಿಕೆ ಕುಸಿಯುತ್ತಿದೆ' ಎಂದು ವಿಷಾದ ವ್ಯಕ್ತಪಡಿಸಿದರು.

`ಮಾಹಿತಿ ಒದಗಿಸುವುದರ ಜತೆಗೆ ಸಮರ್ಪಕ ಸಂವಹನ ಕೆಲವೇ ಪದಗಳಲ್ಲಿ ಸಾಧ್ಯವಾಗಬೇಕು. ಪುಟಗಟ್ಟಲೆಯ ಬರವಣಿಗೆ ಮಾಹಿತಿಯನ್ನು ಒದಗಿಸುವುದಿಲ್ಲ. ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದುವರಿದಿರುವ ಅಮೆರಿಕದಂತಹ ದೇಶದಲ್ಲೂ ಪತ್ರಿಕೆಗಳು ನಶಿಸಿಲ್ಲ. ಹಾಗಾಗಿ ಸ್ಥಳೀಯ ವರ್ತಮಾನಗಳನ್ನು ಜಗಜ್ಜಾಹೀರು ಮಾಡಲು ಪತ್ರಿಕೆಗಳು ಎಂದಿಗೂ ಅವಶ್ಯಕ' ಎಂದರು.

`ಭಾರತೀಯ ಪತ್ರಿಕಾ ಮಂಡಳಿಯ ಅಧ್ಯಕ್ಷ ಕಾಟ್ಜು ಅವರು ಮಾಧ್ಯಮದ ಆಗುಹೋಗುಗಳನ್ನು ಬಿಟ್ಟು ಉಳಿದ ಎಲ್ಲ ವಿಚಾರಗಳನ್ನು ಚರ್ಚೆ ಮಾಡುತ್ತಾರೆ. ಅಧ್ಯಕ್ಷತೆ ವಹಿಸುವ ಮುನ್ನ ಅವರಿಗೆ ಮಾಧ್ಯಮದ ಸ್ವರೂಪ ತಿಳಿದಿರಲಿಲ್ಲವೇನೋ?' ಎಂದು ವ್ಯಂಗ್ಯವಾಡಿದರು.

`ರಾಜಕೀಯ ಕ್ಷೇತ್ರದ ಕ್ಷುಲ್ಲಕ ವಿಚಾರಗಳನ್ನು ನೆಪ ಮಾಡಿಕೊಂಡು ದೊಡ್ಡ ಸುದ್ದಿ ಮಾಡುವ ಬದಲು, ಉತ್ತರಾಖಂಡದಲ್ಲಿ ಪ್ರವಾಹ ಪೀಡಿತರ ಸಮಸ್ಯೆಗಳು, ನಗರದಲ್ಲಿ ಇರುವ ಕಸದ ಸಮಸ್ಯೆ, ಮೂಲಸೌಕರ್ಯ, ಕುಡಿಯುವ ನೀರಿನ ಪೂರೈಕೆಯಂತಹ ನಾಗರಿಕರ ಸಮಸ್ಯೆಗಳಿಗೆ ಹೆಚ್ಚಿನ ಮಹತ್ವ ನೀಡಬೇಕು. ಉದ್ಯಮಿಗಳ ಕಪಿಮುಷ್ಠಿಯಲ್ಲಿದ್ದರೂ ಮಾಧ್ಯಮ ಆಗಾಗ್ಗೆ ಸಾಮಾಜಿಕ ಕಳಕಳಿಯನ್ನು  ವ್ಯಕ್ತಪಡಿಸುತ್ತಿರುವುದು ಸಂತೋಷದ ವಿಚಾರ' ಎಂದು ಶ್ಲಾಘಿಸಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಎಂ.ಎ.ಪೊನ್ನಪ್ಪ. `ನವೆಂಬರ್ ತಿಂಗಳಿನಲ್ಲಿ ಮಾಧ್ಯಮ ಕ್ಷೇತ್ರದಲ್ಲಿರುವ ಹಿರಿಯನ್ನು ಒಂದುಗೂಡಿಸಿ `ನೆನಪಿನಂಗಳದಿ' ಕಾರ್ಯಕ್ರಮವನ್ನು ಆಯೋಜಿಸುವ ಚಿಂತನೆ ನಡೆದಿದೆ.  60 ವರ್ಷಕ್ಕೂ ಮೇಲ್ಪಟ್ಟ ಎಲ್ಲ ಹಿರಿಯ ಪತ್ರಕರ್ತರು ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ' ಎಂದು ತಿಳಿಸಿದರು.

ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ರಾಮಕೃಷ್ಣ ಉಪಾಧ್ಯ,  ವಾರ್ತಾ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಮೊದಲಿಯಾರ್, ಬೆಂಗಳೂರು ವರದಿಗಾರರ ಕೂಟದ ಅಧ್ಯಕ್ಷ ಕೆ.ವಿ.ಪ್ರಭಾಕರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.