ADVERTISEMENT

ತಂತ್ರಜ್ಞಾನವನ್ನು ಬಳಸಿಕೊಂಡು ಸಶಕ್ತರಾಗಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 19:15 IST
Last Updated 5 ಅಕ್ಟೋಬರ್ 2012, 19:15 IST

ಬೆಂಗಳೂರು: `ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ರಾಜ್ಯ ಪೊಲೀಸ್ ಇಲಾಖೆಯನ್ನು ಹೆಚ್ಚು ಪ್ರವರ್ಧಮಾನಕ್ಕೆ ತರಲು ಶ್ರಮಿಸಬೇಕು~ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಹೇಳಿದರು.
ರಾಜಭವನದ ಗಾಜಿನಮನೆಯಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ರಾಜ್ಯದ ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿಗಳ ಪೊಲೀಸ್ ಪದಕಗಳನ್ನು ವಿತರಿಸಿ ಅವರು ಮಾತನಾಡಿದರು.

`ತಮ್ಮ ಕಾರ್ಯಕ್ಷಮತೆಯಿಂದ ರಾಜ್ಯ ಪೊಲೀಸರು ರಾಷ್ಟ್ರದಲ್ಲೇ ಉತ್ತಮ ಹೆಸರು ಪಡೆದಿದ್ದಾರೆ. ಪ್ರಾಮಾಣಿಕ ಹಾಗೂ ದಕ್ಷತೆಯ ಕಾರ್ಯಕ್ಕೆ ರಾಜ್ಯ ಪೊಲೀಸ್ ಇಲಾಖೆ ಮಾದರಿಯಾಗಿದೆ. ಪೊಲೀಸ್ ಇಲಾಖೆ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಇನ್ನೂ ಹೆಚ್ಚು ಸಶಕ್ತವಾಗಲು ಪ್ರಯತ್ನಿಸಬೇಕು~ ಎಂದರು.

ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, `ರಾಜ್ಯದಲ್ಲಿ ಗಲಭೆ, ಹಿಂಸಾಚಾರಗಳು ನಡೆದ ಸಂದರ್ಭದಲ್ಲಿ ಪೊಲೀಸರು ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದಾರೆ. ನಕ್ಸಲ್ ಹಾಗೂ ಉಗ್ರಗಾಮಿ ಸಂಚುಗಳನ್ನು ರಾಜ್ಯ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಕಾವೇರಿ ನೀರಿಗಾಗಿ ಹೋರಾಟಗಳು ನಡೆಯುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಸಂಯಮದಿಂದ ವರ್ತಿಸುತ್ತಿರುವ ರಾಜ್ಯ ಪೊಲೀಸರ ಕಾರ್ಯ ಶ್ಲಾಘನೀಯ~ ಎಂದು ಅವರು ನುಡಿದರು.

`ಪೊಲೀಸ್ ಇಲಾಖೆಯನ್ನು ನಾಗರಿಕ ಸ್ನೇಹಿಯಾಗಿಸಲು ಸರ್ಕಾರ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಪೊಲೀಸ್ ಠಾಣೆಗಳಲ್ಲಿ ದೂರುದಾರರಿಗೆ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಪ್ರತಿಯನ್ನು ವಿಳಂಬವಿಲ್ಲದಂತೆ ನೀಡಲು, ಈ ಸೇವೆಯನ್ನು ಸಕಾಲ ಯೋಜನೆಯಡಿಗೆ ತರಲಾಗಿದೆ~ ಎಂದು ಅವರು ತಿಳಿಸಿದರು.
`ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಪೊಲೀಸ್ ಇಲಾಖೆಗೆ 2,661 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಪೊಲೀಸ್ ಸಿಬ್ಬಂದಿಗಾಗಿ 186 ಕೋಟಿ ರೂಪಾಯಿ ವೆಚ್ಚದಲ್ಲಿ 4,330 ಮನೆಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.

ಧಾರವಾಡದಲ್ಲಿ ಪೊಲೀಸ್ ವಸತಿ ಶಾಲೆಯನ್ನು ಆರಂಭಿಸಲಾಗುತ್ತಿದೆ. ಪೊಲೀಸ್ ಇಲಾಖೆಗೆ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗಿದೆ~ ಎಂದರು.

ಉಪಮುಖ್ಯಮಂತ್ರಿ ಆರ್.ಅಶೋಕ ಮಾತನಾಡಿ, `ರಾಜ್ಯದಲ್ಲಿ ಹತ್ತು ವರ್ಷಗಳಿಂದ ಕೋಮು ಗಲಭೆಗಳು ಗಣನೀಯವಾಗಿ ಕಡಿಮೆಯಾಗಿವೆ. ಇದು ರಾಜ್ಯ ಪೊಲೀಸರ ಸಾಧನೆ. ಈಶಾನ್ಯ ರಾಜ್ಯಗಳ ಗಲಭೆ ಸಂದರ್ಭದಲ್ಲಿ ರಾಜ್ಯದಿಂದ ವಲಸೆ ಹೊರಟವರ ಸುರಕ್ಷತೆಗೆ ಹೆಚ್ಚಿನ ಗಮನ ನೀಡಿದ ರಾಜ್ಯ ಪೊಲೀಸರ ಮಾನವೀಯ ವರ್ತನೆಗೆ ಇಡೀ ರಾಷ್ಟ್ರವೇ ಮೆಚ್ಚುಗೆ ವ್ಯಕ್ತಪಡಿಸಿದೆ~ ಎಂದರು.

`ಕರಾವಳಿ ಭಾಗದಲ್ಲಿ ಉಗ್ರರ ನುಸುಳುವಿಕೆಯನ್ನು ತಡೆಯಲು ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ. ರಾಜ್ಯ ಪೊಲೀಸರು ಹಾಗೂ ಅವರ ಕುಟುಂಬದವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಲು ಸರ್ಕಾರ ಬದ್ಧವಿದೆ~ ಎಂದು ಅವರು ತಿಳಿಸಿದರು.

ನಿವೃತ್ತ ಐಪಿಎಸ್ ಅಧಿಕಾರಿ ಶಂಕರ ಬಿದರಿ, ಹಿರಿಯ ಪೊಲೀಸ್ ಅಧಿಕಾರಿಗಳಾದ ವಿ.ಎಸ್.ಡಿಸೋಜಾ, ಎ.ಎಂ.ಪ್ರಸಾದ್, ದಯಾನಂದ್ ಸೇರಿದಂತೆ 48 ಜನರಿಗೆ ಗಣರಾಜ್ಯೋತ್ಸವ ಸಂದರ್ಭದ ರಾಷ್ಟ್ರಪತಿಗಳ ಪೊಲೀಸ್ ಪದಕಗಳನ್ನು ಪ್ರದಾನ ಮಾಡಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.