ಬೆಂಗಳೂರು: ತಂಪುಪಾನೀಯವೆಂದು ಕ್ರಿಮಿನಾಶಕ ಕುಡಿದ ಯುವತಿ ಅಸ್ವಸ್ಥಳಾಗಿ ಸಾವನ್ನಪ್ಪಿರುವ ದಾರುಣ ಘಟನೆ ಬಾಣಸವಾಡಿ ಬಳಿಯ ರಾಮಸ್ವಾಮಿಪಾಳ್ಯದಲ್ಲಿ ಸೋಮವಾರ ನಡೆದಿದೆ.
ರಾಮಸ್ವಾಮಿಪಾಳ್ಯದ ದೇವಸ್ಥಾನ ರಸ್ತೆ ನಿವಾಸಿ ರಾಜು ಎಂಬುವರ ಪುತ್ರಿ ಸುಕನ್ಯಾ (20) ಮೃತಪಟ್ಟವರು. ಬಿ.ಕಾಂ ಪದವೀಧರೆಯಾಗಿದ್ದ ಅವರು ನೃತ್ಯ ತರಬೇತಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದರು.
ಸುಕನ್ಯಾ ಕುಟುಂಬ ಸದಸ್ಯರು ತಂಪುಪಾನೀಯದ ಖಾಲಿ ಬಾಟಲಿಯಲ್ಲಿ ಕ್ರಿಮಿನಾಶಕ ತುಂಬಿಸಿ ಮೇಜಿನ ಮೇಲೆ ಇಟ್ಟಿದ್ದರು. ಕೆಲಸ ಮುಗಿಸಿಕೊಂಡು ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಮನೆಗೆ ಬಂದ ಸುಕನ್ಯಾ ಅವರು, ಬಾಟಲಿಯಲ್ಲಿದ್ದ ಕ್ರಿಮಿನಾಶಕವನ್ನು ತಂಪುಪಾನೀಯವೆಂದು ಭಾವಿಸಿ ಕುಡಿದು ಅಸ್ವಸ್ಥರಾದರು.
ಕುಟುಂಬ ಸದಸ್ಯರು ಅವರನ್ನು ಕೂಡಲೇ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಅವರು ಸಂಜೆ ಐದು ಗಂಟೆ ವೇಳೆಗೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು ಎಂದು ಪೊಲೀಸರು ಹೇಳಿದ್ದಾರೆ. ಬಾಣಸವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.