ADVERTISEMENT

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯ 

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 19:30 IST
Last Updated 16 ಜುಲೈ 2017, 19:30 IST
ನೃಪತುಂಗ ರಸ್ತೆಯಲ್ಲಿರುವ ಡಿಜಿಪಿ ಕಚೇರಿಗೆ ಭಾನುವಾರ ಬಂದಿದ್ದ ನಿಯೋಗ
ನೃಪತುಂಗ ರಸ್ತೆಯಲ್ಲಿರುವ ಡಿಜಿಪಿ ಕಚೇರಿಗೆ ಭಾನುವಾರ ಬಂದಿದ್ದ ನಿಯೋಗ   

ಬೆಂಗಳೂರು: ‘ಬರಹಗಾರ್ತಿ ಚೇತನಾ ತೀರ್ಥಹಳ್ಳಿ ಅವರ ಬಗ್ಗೆ ಫೇಸ್‌ಬುಕ್‌ನಲ್ಲಿ  ಅವಹೇಳನಕಾರಿಯಾಗಿ ಬರಹ ಪ್ರಕಟಿಸಿ ದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳ ಮುಖಂಡರು, ರಾಜ್ಯ ಪೊಲೀಸ್‌ ಮಹಾನಿರ್ದೇಶಕರ (ಡಿಜಿಪಿ) ಕಚೇರಿಯಲ್ಲಿ ಭಾನುವಾರ ಮನವಿ ಸಲ್ಲಿಸಿದರು.

ಆರ್‌.ಕೆ.ದತ್ತಾ ಅವರು ಮಂಗಳೂರಿನಲ್ಲಿ ಇರುವುದರಿಂದ ಅವರ ಪರವಾಗಿ ನಗರ ಹೆಚ್ಚುವರಿ ಪೊಲೀಸ್‌ ಕಮಿಷನರ್‌ (ಅಪರಾಧ) ಎಸ್‌.ರವಿ ಅವರು ಮನವಿ ಸ್ವೀಕರಿಸಿದರು.

ಈ ವೇಳೆ ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್‌.ವಿಮಲಾ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವನ್ನು ಫೇಸ್‌ಬುಕ್‌ ಪ್ರೊಫೈಲ್‌ಗೆ ಹಾಕಿಕೊಂಡಿರುವ ಜಿ.ಎನ್‌. ಚಂದ್ರಶೇಖರ್‌ ಎಂಬಾತ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ರದೊಂದಿಗೆ ಅಶ್ಲೀಲ ಪದಗಳನ್ನು ಬಳಸಿ ಚೇತನಾ ಅವರನ್ನು ನಿಂದಿಸಿದ್ದಾರೆ’ ಎಂದು ದೂರಿದರು.

ADVERTISEMENT

‘ಆರೋಪಿಯ ಈ ಕೃತ್ಯವು ಮಾಹಿತಿ ತಂತ್ರಜ್ಞಾನ ಕಾಯ್ದೆ ಅನ್ವಯ ಅಪರಾಧವಾಗುತ್ತದೆ. ಹೀಗಾಗಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿ
ಕೊಂಡು ಆರೋಪಿಯನ್ನು ಬಂಧಿಸಬೇಕು’ ಎಂದು ಒತ್ತಾಯಿಸಿದರು.

‘ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ಬಗ್ಗೆ ಅವಹೇಳನಕಾರಿ ಬರಹ ಪ್ರಕಟಿಸುವರ ಸಂಖ್ಯೆ ಹೆಚ್ಚಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ದುರ್ಬಳಕೆ ಆಗುತ್ತಿದೆ. ಇದನ್ನು ತಡೆಗಟ್ಟಲು ಪೊಲೀಸರು ಗಮನಹರಿಸಬೇಕು’ ಎಂದರು.

ನಿಯೋಗದಲ್ಲಿ ಲೇಖಕಿ ವಸುಂಧರಾ ಭೂಪತಿ, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಕಾರ್ಯದರ್ಶಿ ಗೌರಮ್ಮ ಇದ್ದರು. 

ಮನವಿ ಸ್ವೀಕಾರ: ‘ಅವಹೇಳನಕಾರಿ ಬರಹದ ಬಗ್ಗೆ ಯಾವುದೇ ದೂರು ನೀಡಿಲ್ಲ. ಮನವಿ ಮಾತ್ರ ನೀಡಿದ್ದು,  ಅದನ್ನು ಪರಿಶೀಲಿಸುತ್ತಿದ್ದೇವೆ’ ಎಂದು    ಎಸ್‌.ರವಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.