ADVERTISEMENT

ತಮಟೆ ಸದ್ದಿಗೂ ಬಾರದ ತೆರಿಗೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2013, 19:59 IST
Last Updated 22 ಜನವರಿ 2013, 19:59 IST
ನಗರದ ರೆಸಿಡೆನ್ಸಿ ರಸ್ತೆಯ ಪ್ರೆಸ್ಟೀಜ್ ಗ್ರೂಪ್‌ಗೆ ಸೇರಿದ ವಾಣಿಜ್ಯ ಸಂಕೀರ್ಣದ ಆಸ್ತಿ ತೆರಿಗೆ ಬಾಕಿ ವಸೂಲಿಗಾಗಿ ಬಿಬಿಎಂಪಿ ವತಿಯಿಂದ ಕಟ್ಟಡದ ಮುಂಭಾಗದಲ್ಲಿ ಮಂಗಳವಾರ ತಮಟೆ ಬಾರಿಸುವ ಚಳವಳಿ ನಡೆಸಲಾಯಿತು
ನಗರದ ರೆಸಿಡೆನ್ಸಿ ರಸ್ತೆಯ ಪ್ರೆಸ್ಟೀಜ್ ಗ್ರೂಪ್‌ಗೆ ಸೇರಿದ ವಾಣಿಜ್ಯ ಸಂಕೀರ್ಣದ ಆಸ್ತಿ ತೆರಿಗೆ ಬಾಕಿ ವಸೂಲಿಗಾಗಿ ಬಿಬಿಎಂಪಿ ವತಿಯಿಂದ ಕಟ್ಟಡದ ಮುಂಭಾಗದಲ್ಲಿ ಮಂಗಳವಾರ ತಮಟೆ ಬಾರಿಸುವ ಚಳವಳಿ ನಡೆಸಲಾಯಿತು   

ಬೆಂಗಳೂರು: ನಗರದ ರೆಸಿಡೆನ್ಸಿ ರಸ್ತೆಯಲ್ಲಿ ಪ್ರೆಸ್ಟೀಜ್ ಗ್ರೂಪ್‌ಗೆ  ಸೇರಿದ ವಾಣಿಜ್ಯ ಸಂಕೀರ್ಣಕ್ಕೆ ಸಂಬಂಧಪಟ್ಟಂತೆ 2008-09 ರಿಂದ ಇದುವರೆಗೆ ಭಾಗಶಃ ಆಸ್ತಿ ತೆರಿಗೆ ಪಾವತಿಸದೆ ಇರುವ ಕಾರಣ ಮಂಗಳವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ವಾಣಿಜ್ಯ ಸಂಕೀರ್ಣದ ಎದುರು ತಮಟೆ ಬಾರಿಸುವ ಚಳವಳಿ ನಡೆಸಲಾಯಿತು.

ಈ ವಾಣಿಜ್ಯ ಸಂಕೀರ್ಣದಲ್ಲಿ ಸುಮಾರು 157 ಘಟಕಗಳಿದ್ದು (ವಾಣಿಜ್ಯ ಅಪಾರ್ಟ್‌ಮೆಂಟ್), ಅದರಲ್ಲಿ 32 ಘಟಕಗಳಿಗೆ ಸಂಬಂಧಪಟ್ಟ ಆಸ್ತಿ ತೆರಿಗೆ ಪಾವತಿಸಿಲ್ಲ. ಹಲವಾರು ಬಾರಿ ನೋಟಿಸ್ ನೀಡಿದ್ದರೂ ಅದನ್ನು ಲೆಕ್ಕಿಸದೆ ತೆರಿಗೆ ಪಾವತಿಸಿಲ್ಲ. ದಂಡವೂ ಸೇರಿದಂತೆ ರೂ1.75 ಕೋಟಿ ಬಾಕಿ ಪಾವತಿಸಬೇಕಿದೆ ಎಂದು ಬಿಬಿಎಂಪಿ ಸಹ ಕಂದಾಯ ಅಧಿಕಾರಿ (ಶಾಂತಿನಗರ) ಸಾವಿತ್ರಿ ತಿಳಿಸಿದರು.

ಪಾಲಿಕೆಯ ಆಯುಕ್ತ ಸಿದ್ದಯ್ಯ ವಾಣಿಜ್ಯ ಸಂಕೀರ್ಣಗಳ ಆಸ್ತಿ ತೆರಿಗೆ ಮರು ಪರಿಷ್ಕರಣೆ ಮತ್ತು ಬಾಕಿ ವಸೂಲಾತಿ ತೀವ್ರಗೊಳಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ತಮಟೆ ಚಳವಳಿ ನಡೆಯಿತು.

ಸಂಜೆವರೆಗೆ ತಮಟೆ ಬಾರಿಸಿದರೂ ಕಟ್ಟಡಕ್ಕೆ ಸಂಬಂಧಪಟ್ಟ ವ್ಯಕ್ತಿಗಳು ಆಸ್ತಿ ತೆರಿಗೆ ಪಾವತಿಸಲು ಬಿಬಿಎಂಪಿ ಅಧಿಕಾರಿಗಳನ್ನು ಸಂಪರ್ಕಿಸಲಿಲ್ಲ.

ಆದ್ದರಿಂದ ಬುಧವಾರವೂ ಪ್ರೆಸ್ಟೀಜ್ ಗ್ರೂಪ್‌ಗೆ ಸೇರಿದ ವಾಣಿಜ್ಯ ಸಂಕೀರ್ಣದ ಎದುರುಗಡೆ ತಮಟೆ ಬಾರಿಸುವ ಕಾರ್ಯಾಚರಣೆಯನ್ನು ಮುಂದುವರೆಸಲಾಗುವುದು ಎಂದು ಸಾವಿತ್ರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.