ADVERTISEMENT

ತಾಯಿ, ಮಗು ಸಾವು: ಆಸ್ಪತ್ರೆಯಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2011, 20:15 IST
Last Updated 23 ಫೆಬ್ರುವರಿ 2011, 20:15 IST

ಬೆಂಗಳೂರು:ನಗರದ ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗಿದ್ದ ಮಹಿಳೆ ಮತ್ತು ಅವರ ಮಗು ಸಾವನ್ನಪ್ಪಿದ್ದರಿಂದ ಆಕ್ರೋಶಗೊಂಡ ಸಂಬಂಧಿಕರು ಆಸ್ಪತ್ರೆ ಎದುರು ಮೃತರ ಶವವಿಟ್ಟು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ಬೆಳಿಗ್ಗೆ ನಡೆಯಿತು.

ವೈದ್ಯರ ನಿರ್ಲಕ್ಷ್ಯದಿಂದಲೇ ಮಗು ಮತ್ತು ಮಗುವಿನ ತಾಯಿ ಸಾವನ್ನಪ್ಪಿದರು ಎಂದು ಆರೋಪಿಸಿದ ಸಂಬಂಧಿಕರು ಆಸ್ಪತ್ರೆ ಆವರಣದಲ್ಲಿ ಮೂರು ತಾಸಿಗೂ ಹೆಚ್ಚು ಕಾಲ ಶವವಿಟ್ಟು ಪ್ರತಿಭಟನೆ ಮಾಡಿದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆಸ್ಪತ್ರೆಯ ವೈದ್ಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.

ಜಗಜೀವನರಾಂನಗರ ಸಮೀಪದ ರಂಗನಾಥ ಕಾಲೊನಿ ನಿವಾಸಿ ವೆಂಕಟರಮಣ ಎಂಬುವರು ಪತ್ನಿ ಧನಲಕ್ಷ್ಮಿ ಅವರನ್ನು ಹೆರಿಗೆಗಾಗಿ ಫೆ.9ರಂದು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಧನಲಕ್ಷ್ಮಿ ಅವರು ಫೆ.11ರಂದು ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಆ ಮಕ್ಕಳಲ್ಲಿ ಹೆಣ್ಣು ಮಗು ಹುಟ್ಟಿದ ಸ್ವಲ್ಪ ಸಮಯದಲ್ಲೇ ಸಾವನ್ನಪ್ಪಿತು. ಮತ್ತೊಂದು ಗಂಡು ಮಗು ಮಂಗಳವಾರ (ಫೆ.22) ರಾತ್ರಿ ಮೃತಪಟ್ಟಿತು. ಬುಧವಾರ ನಸುಕಿನಲ್ಲಿ ಧನಲಕ್ಷ್ಮಿ ಅವರು ಸಹ ಸಾವನ್ನಪ್ಪಿದರು ಎಂದು ಸೆಂಟ್ರಲ್ ಠಾಣೆ ಪೊಲೀಸರು ತಿಳಿಸಿದ್ದಾರೆ.

ಇದರಿಂದ ಕೋಪಗೊಂಡ ಸಂಬಂಧಿಕರು ‘ತೀವ್ರ ನಿಗಾ ಘಟಕದಲ್ಲಿದ್ದ ಧನಲಕ್ಷ್ಮಿ ಮತ್ತು ಅವರ ಮಕ್ಕಳಿಗೆ ವೈದ್ಯರು ಸೂಕ್ತ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ತೋರಿದರು. ಇದರಿಂದಾಗಿ ಅವರು ಸಾವನ್ನಪ್ಪಿದರು’ ಎಂದು ಆರೋಪಿಸಿ ಪ್ರತಿಭಟನೆ ಮಾಡಿದರು.ಈ ಬಗ್ಗೆ ಸಂಬಂಧಿಕರು ಯಾವುದೇ ದೂರು ಕೊಟ್ಟಿಲ್ಲ. ದೂರು ನೀಡಿದರೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಧನಲಕ್ಷ್ಮಿ ಮತ್ತು ಅವರ ಮಕ್ಕಳ ಸಾವಿನ ಸಂಬಂಧ ಕಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಟಿ.ಎಚ್.ಅಂಜನಪ್ಪ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ‘ಆ ಬಗ್ಗೆ ನಾನು ಏನು ಹೇಳಲಾರೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.