ADVERTISEMENT

ತಿಂಗಳೊಳಗೆ ಮೇಲ್ಸೇತುವೆ ಕಾಮಗಾರಿ ಮುಗಿಸಲು ಮೇಯರ್ ಸೂಚನೆ

​ಪ್ರಜಾವಾಣಿ ವಾರ್ತೆ
Published 21 ಮೇ 2012, 19:30 IST
Last Updated 21 ಮೇ 2012, 19:30 IST

ಬೆಂಗಳೂರು: ಮೈಸೂರು ರಸ್ತೆಯ ನಾಯಂಡನಹಳ್ಳಿ ಜಂಕ್ಷನ್‌ನಿಂದ ಹೊಸಕೆರೆಹಳ್ಳಿಗೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ ಕಾಮಗಾರಿಯನ್ನು ಇನ್ನೊಂದು ತಿಂಗಳೊಳಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಮೇಯರ್ ಡಿ. ವೆಂಕಟೇಶಮೂರ್ತಿ ಸೋಮವಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಾಯಂಡನಹಳ್ಳಿ ಬಳಿ ಬಿಎಂಆರ್‌ಸಿಎಲ್ ಕೈಗೊಂಡಿರುವ ಮೆಟ್ರೊ ಕಾಮಗಾರಿ ಹಾಗೂ ಬಿಡಿಎ ವತಿಯಿಂದ ನಿರ್ಮಿಸುತ್ತಿರುವ ಮೇಲ್ಸೇತುವೆ ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ನಡುವೆ, ನಾಯಂಡನಹಳ್ಳಿ ಬಳಿ ನಡೆಯುತ್ತಿರುವ ಮೆಟ್ರೊ ಕಾಮಗಾರಿ ಹಾಗೂ ಬಿಡಿಎ ವತಿಯಿಂದ ಕೈಗೊಂಡಿರುವ ಎರಡು ಹಂತದ ಮೇಲ್ಸೇತುವೆ ಕಾಮಗಾರಿಯನ್ನು ಶೀಘ್ರ ಮುಗಿಸುವ ಸಂಬಂಧ ಬಿಡಿಎ, ಜಲಮಂಡಳಿ, ಬೆಸ್ಕಾಂ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದು ಅವರು ತಿಳಿಸಿದರು.

ದೀಪಾಂಜಲಿನಗರದಿಂದ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ ಕಾಮಗಾರಿಯನ್ನು ಜುಲೈ ವೇಳೆಗೆ ಪೂರ್ಣಗೊಳಿಸಿ, ವಾಹನ ಸಂಚಾರಕ್ಕೆ ಮುಕ್ತಗೊಳಿಸುವಂತೆಯೂ ಮೇಯರ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ರೈಲ್ವೆ ಸಚಿವರಿಗೆ ಪತ್ರ: ನಗರದ 44 ರೈಲ್ವೆ ಲೆವೆಲ್ ಕ್ರಾಸಿಂಗ್‌ಗಳಲ್ಲಿ ಪಾಲಿಕೆಯು ನಿರ್ಮಿಸಲು ಉದ್ದೇಶಿಸಿರುವ ಮೇಲ್ಸೇತುವೆ/ ಕೆಳಸೇತುವೆ, ಪಾದಚಾರಿ ಸುರಂಗ ಮಾರ್ಗಗಳ ನಿರ್ಮಾಣ, ವಿವಿಧ ಕಡೆಗಳಲ್ಲಿ ರಸ್ತೆ ವಿಸ್ತರಣೆ ಹಾಗೂ ರಾಜಕಾಲುವೆ/ ಮಳೆನೀರಿನ ಕಾಲುವೆಗಳ ಅಭಿವೃದ್ಧಿ ಹಾಗೂ ಕೊಳಚೆ ಪ್ರದೇಶಗಳ ಸ್ಥಳಾಂತರಕ್ಕಾಗಿ ರಕ್ಷಣಾ ಇಲಾಖೆಗೆ ಸೇರಿದ 46.30 ಎಕರೆ ನೀಡುವಂತೆ ಕೋರಿ ರೈಲ್ವೆ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದರು.

ಈ ಪೈಕಿ ಆರು ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. ಇನ್ನು ಆರು ಕಾಮಗಾರಿಗಳಿಗೆ ಟೆಂಡರ್ ಕರೆಯಬೇಕಾಗಿದೆ. ತುರ್ತು ಅಗತ್ಯವಿರುವ ಕಡೆಗಳಲ್ಲಿ ಕಾಮಗಾರಿ ಕೈಗೊಳ್ಳುವುದಕ್ಕಾಗಿ ಪಾಲಿಕೆ ಅಧಿಕಾರಿಗಳ ಜತೆ ಸಮನ್ವಯ ಸಾಧಿಸಲು ರೈಲ್ವೆ ಅಧಿಕಾರಿಗಳಿಗೆ ತಾಕೀತು ಮಾಡುವಂತೆಯೂ ಸಚಿವರನ್ನು ಕೋರಲಾಗಿದೆ ಎಂದರು.

ಪ್ರತಿ ಬಾರಿ ಮಳೆ ಸುರಿದಾಗ ಗಾಳಿ ಆಂಜನೇಯಸ್ವಾಮಿ ದೇವಸ್ಥಾನದೊಳಗೆ ನೀರು ನುಗ್ಗುತ್ತಿದ್ದು, ಇನ್ನು ಮುಂದೆ ಇಲ್ಲಿ ಪ್ರವಾಹ ತಡೆಯಲು ಕೆಂಪಾಂಬುಂಧಿ ಕೆರೆಗೆ ನೀರು ಹರಿಸಲು ಉದ್ದೇಶಿಸಲಾಗಿದೆ. ಅಲ್ಲದೆ, ರಾಜಕಾಲುವೆಯಲ್ಲಿನ ಹೂಳು ಹಾಗೂ ಕಸ ತೆರವುಗೊಳಿಸುವ ಕೆಲಸವನ್ನು ಕೂಡಲೇ ಮುಗಿಸುವಂತೆ ಮೇಯರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಾಲಿಕೆಯ ಮೂಲ ಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ಸೋಮಶೇಖರ್ ಮಾತನಾಡಿ, ಮೈಸೂರು ರಸ್ತೆಯಲ್ಲಿ ಎರಡು ಕಿ.ಮೀ. ಉದ್ದದ ಮಾರ್ಗ ವಿಸ್ತರಣೆ ಕೆಲಸ ಪ್ರಗತಿಯಲ್ಲಿದೆ. ಇನ್ನು ಎರಡು ತಿಂಗಳಲ್ಲಿ ಒಂದು ಕಿ.ಮೀ. ಉದ್ದದ ಕಾಮಗಾರಿ ಪೂರ್ಣಗೊಳಿಸಲಾಗುವುದು. ಬಾಕಿ ಉಳಿದ ಇನ್ನೊಂದು ಕಿ.ಮೀ. ಉದ್ದದ ಕಾಮಗಾರಿಯನ್ನು ಡಿಸೆಂಬರ್‌ನೊಳಗೆ ಪೂರ್ಣಗೊಳಿಸಲಾಗುವುದು ಎಂದರು.

ಉಪ ಮೇಯರ್ ಎಲ್. ಶ್ರೀನಿವಾಸ್, ಆಡಳಿತ ಪಕ್ಷದ ನಾಯಕ ಎನ್. ನಾಗರಾಜ್, ಪಾಲಿಕೆ ಸದಸ್ಯರಾದ ಬಿ.ವಿ. ಗಣೇಶ್, ಟಿ.ವಿ. ಕೃಷ್ಣ, ಚಂದ್ರಶೇಖರಯ್ಯ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.