ADVERTISEMENT

ತೆಲಗಿ ಶವ ಕುಟುಂಬಕ್ಕೆ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 20:15 IST
Last Updated 27 ಅಕ್ಟೋಬರ್ 2017, 20:15 IST

ಬೆಂಗಳೂರು: ಬಹುಅಂಗಾಂಗ ವೈಫಲ್ಯದಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತ‍ಪಟ್ಟ ನಕಲಿ ಛಾಪಾ ಕಾಗದ ಹಗರಣದ ರೂವಾರಿ ಅಬ್ದುಲ್ ಕರೀಂ ಲಾಲ್ ತೆಲಗಿಯ ಮರಣೋತ್ತರ ಪರೀಕ್ಷೆ ಶುಕ್ರವಾರ ಸಂಜೆ ನಡೆಯಿತು.

'ತೆಲಗಿ ಸಾವಿನ ಸಂಬಂಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಶುಕ್ರವಾರ ಅಸಹಜ ಸಾವು ಪ್ರಕರಣ ದಾಖಲಿಸಲಾಯಿತು. ಸಂಜೆ 4.30ರ ಸುಮಾರಿಗೆ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ಹತ್ತಿಕಾಳು ಪ್ರಭುಸಿದ್ದಪ್ಪ ಅವರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ಮಾಡಿಸಿ, 6 ಗಂಟೆ ಸುಮಾರಿಗೆ ಶವವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಯಿತು’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಮರಣೋತ್ತರ ಪರೀಕ್ಷೆ ಮಾಡುವಾಗ ವಿಡಿಯೊ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ತೆಲಗಿ ಪತ್ನಿ ಶಾಹಿದಾ, ‘ಇದನ್ನೂ ರೆಕಾರ್ಡ್ ಮಾಡಿಕೊಳ್ಳಬೇಕಾ’ ಎಂದು ಕೂಗಾಡಿದರು. ನಂತರ ಸಂಬಂಧಿಕರು ಅವರನ್ನು ಹೊರಗೆ ಕರೆದೊಯ್ದರು.

ADVERTISEMENT

ತೆಲಗಿ ಡೈರಿ ಬರೆದಿರುವ ಕುರಿತು ಪ್ರತಿಕ್ರಿಯಿಸಿದ ಆತನ ಅಳಿಯ ಇರ್ಫಾನ್ ತಾಳಿಕೋಟೆ, ‘ಮಾವನಿಗೆ ಸಂಬಂಧಿಸಿದ ಎಲ್ಲ ವಸ್ತುಗಳು ಅವರ ಮಗಳ ಬಳಿ ಇವೆ. ಡೈರಿ ಬಗ್ಗೆ ಮಾತನಾಡುವುದಕ್ಕೆ ಇದು ಸೂಕ್ತ ಸಮಯವಲ್ಲ’ ಎಂದು ಹೇಳಿದರು.

ಹನ್ನೊಂದು ವರ್ಷಗಳಿಂದ ತೆಲಗಿ ಉಳಿದುಕೊಂಡಿದ್ದ ಕಾರಾಗೃಹದ ಕೊಠಡಿಯನ್ನು ಸಿಬ್ಬಂದಿ ಶುಕ್ರವಾರ ಬೆಳಿಗ್ಗೆ ಸ್ವಚ್ಛಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.