ADVERTISEMENT

ತ್ಯಾಜ್ಯ ಸಂಸ್ಕರಣೆ: ಐಟಿ, ಬಿಟಿ ಸಿದ್ಧ

ಹೈಕೋರ್ಟ್‌ನಲ್ಲಿ ಬಿಬಿಎಂಪಿ ಆಯುಕ್ತ ಸಿದ್ದಯ್ಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 19:29 IST
Last Updated 2 ಏಪ್ರಿಲ್ 2013, 19:29 IST

ಬೆಂಗಳೂರು: ಬಯೋಕಾನ್, ಇನ್ಫೊಸಿಸ್, ವಿಪ್ರೊದಂಥ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕಂಪೆನಿಗಳು ತಮ್ಮಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ತಾವೇ ಸಂಸ್ಕರಿಸುತ್ತೇವೆ ಎಂಬ ಪ್ರಸ್ತಾವ ಮುಂದಿಟ್ಟಿವೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತ ಸಿದ್ದಯ್ಯ ಹೈಕೋರ್ಟ್‌ಗೆ ಮಂಗಳವಾರ ತಿಳಿಸಿದರು.

ಬೆಂಗಳೂರು ಮಹಾನಗರದಲ್ಲಿ ಉತ್ಪಾದನೆಯಾಗುವ ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನು ಪರಿಹರಿಸುವಲ್ಲಿ ವಿಫಲವಾಗಿರುವ ಬಿಬಿಎಂಪಿಯನ್ನು ಸೂಪರ್‌ಸೀಡ್ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ವಕೀಲ ಜಿ.ಆರ್. ಮೋಹನ್, ಕವಿತಾ ಶಂಕರ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್. ಕುಮಾರ್ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠಕ್ಕೆ ಸಿದ್ದಯ್ಯ ಈ ಮಾಹಿತಿ ನೀಡಿದರು.

`ಇಂಥ ಕಂಪೆನಿಗಳು ತಾವು ಉತ್ಪಾದಿಸುವ ತ್ಯಾಜ್ಯವನ್ನು ತಾವೇ ಸಂಸ್ಕರಿಸಲು ಆರಂಭಿಸಿದ ನಂತರ, ಪಾಲಿಕೆಯ ಮೇಲಿನ ಹೊರೆ ತುಸು ಕಡಿಮೆಯಾಗಲಿದೆ. ಅಲ್ಲದೆ, ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದನೆ ಮಾಡುವ ಹೋಟೆಲ್, ಮಾಲ್‌ಗಳ ಮಾಲೀಕರೂ ಇಂಥದ್ದೇ ಪ್ರಸಾವ ಮುಂದಿಟ್ಟಿದ್ದಾರೆ. ಅವರಿಗೆ ತ್ಯಾಜ್ಯ ಸಂಗ್ರಹಣೆ ಹಾಗೂ ಸಂಸ್ಕರಣೆಗೆ ಅಗತ್ಯವಿರುವ ಜಮೀನನ್ನು ಉಚಿತವಾಗಿ ಅಥವಾ ಗುತ್ತಿಗೆ ಆಧಾರದಲ್ಲಿ ನೀಡಲು ಪಾಲಿಕೆ ಸಿದ್ಧವಿದೆ. ಎಲ್ಲ 198 ವಾರ್ಡ್‌ಗಳಲ್ಲಿ ಒಣ ತ್ಯಾಜ್ಯ ಸಂಗ್ರಹಿಸಲು ನಿವೇಶನ ಗುರುತಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ' ಎಂದು ವಿವರಣೆ ನೀಡಿದರು.

ವಾರ್ಡ್ ಮಟ್ಟದಲ್ಲಿ ತ್ಯಾಜ್ಯ ವಿಲೇವಾರಿ ಕಾರ್ಯ ಕೈಗೆತ್ತಿಕೊಳ್ಳಲು ಸ್ವಯಂ ಸೇವಾ ಸಂಸ್ಥೆಗಳು ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ಪ್ರಾಯೋಗಿಕವಾಗಿ ಆರು ತಿಂಗಳ ಅವಧಿಗೆ ಇದನ್ನು ಜಾರಿಗೆ ತರಲಾಗುತ್ತದೆ. ಯಾವುದೇ ವಾರ್ಡ್‌ನಲ್ಲಿ ತ್ಯಾಜ್ಯ ವಿಲೇವಾರಿ ಕಾರ್ಯಕ್ಕೆ ಎನ್‌ಜಿಒಗಳು ಮುಂದೆ ಬಾರದಿದ್ದಲ್ಲಿ, ಆ ವಾರ್ಡ್‌ನ ತ್ಯಾಜ್ಯ ವಿಲೇವಾರಿ ಕಾರ್ಯವನ್ನು ಪಾಲಿಕೆ ನಿರ್ವಹಿಸಲಿದೆ. ತ್ಯಾಜ್ಯ ವಿಲೇವಾರಿ ಕಾರ್ಯದ ಬಗ್ಗೆ ನಿಗಾ ಇಡಲು ಎಲ್ಲ ವಾರ್ಡ್‌ಗಳಿಗೂ ಪರಿಸರ ಎಂಜಿನಿಯರ್‌ಗಳನ್ನು ನೇಮಕ ಮಾಡಲಾಗಿದೆ ಎಂದರು.

ಸಿದ್ದಯ್ಯ ಅವರ ಹೇಳಿಕೆ ದಾಖಲು ಮಾಡಿಕೊಂಡ ನ್ಯಾಯಪೀಠ, `ನ್ಯಾಯಾಲಯಗಳು ನೀಡುವ ಆದೇಶವೊಂದರಿಂದಲೇ ಈ ಸಮಸ್ಯೆ ಕೊನೆಗಾಣುವುದಿಲ್ಲ. ತ್ಯಾಜ್ಯದ ಉತ್ಪಾದನೆಗೆ ಕಾರಣರಾದ ಜನಸಾಮಾನ್ಯರಲ್ಲಿ ಈ ಕುರಿತು ಅರಿವು ಮೂಡಿಸಲು ಬಿಬಿಎಂಪಿ, ಸರ್ಕಾರ ಮತ್ತು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಮೂರು ಸಂಸ್ಥೆಗಳು ಇದುವರೆಗೆ ಕೈಗೊಂಡಿರುವ ಕ್ರಮ ತೃಪ್ತಿಕರವಾಗಿಲ್ಲ' ಎಂದು ಸೂಚಿಸಿತು.

`ಅಧಿಕಾರಿಗಳು ಹಗಲು-ರಾತ್ರಿ ಕೆಲಸ ಮಾಡುವುದರಿಂದಲೂ ಈ ಸಮಸ್ಯೆಯ ನಿವಾರಣೆ ಸಾಧ್ಯವಿಲ್ಲ. ತ್ಯಾಜ್ಯ ವಿಲೇವಾರಿ ಕುರಿತು ಜನರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಸಂಸ್ಥೆಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಇದರ ಬಗ್ಗೆ 15 ದಿನಗಳಲ್ಲಿ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು' ಎಂದು ತಾಕೀತು ಮಾಡಿತು. ವಿಚಾರಣೆಯನ್ನು ಇದೇ 26ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.