ADVERTISEMENT

‘ದಂಡ ವಿಧಿಸುವ ಅಧಿಕಾರ’

ಬೆಳ್ಳಂದೂರು ಕೆರೆ ಅಭಿವೃದ್ಧಿ: ನಾಗರಿಕರ ಜೊತೆ ಬಿಡಿಎ ಆಯುಕ್ತ ಸಭೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2018, 20:02 IST
Last Updated 4 ಏಪ್ರಿಲ್ 2018, 20:02 IST
‘ದಂಡ ವಿಧಿಸುವ ಅಧಿಕಾರ’
‘ದಂಡ ವಿಧಿಸುವ ಅಧಿಕಾರ’   

ಬೆಂಗಳೂರು: ಬೆಳ್ಳಂದೂರು ಕೆರೆಗೆ ಇನ್ನು ಯಾರಾದರೂ ರಾತ್ರೋರಾತ್ರಿ ಕಸ ತಂದು ಹಾಕಿದರೆ ಈ ಇದರ ಸಂರಕ್ಷಣೆಯ ಹೊಣೆ ಹೊತ್ತ ‘ಕೆರೆ ವಾರ್ಡನ್‌’ಗಳು ಸುಮ್ಮನೆ ಕುಳಿತುಕೊಳ್ಳಬೇಕಿಲ್ಲ. ತಪ್ಪೆಸಗುವವರಿಗೆ ಅವರೂ ದಂಡ ವಿಧಿಸಬಹುದು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಆಯುಕ್ತ ರಾಕೇಶ್‌ ಸಿಂಗ್‌ ಬುಧವಾರ ಕೆರೆ ಆಸುಪಾಸಿನ ನಿವಾಸಿಗಳ ಜತೆಗೆ  ಸಮಾಲೋಚನಾ ನಡೆಸಿದರು. ಕೆರೆ ವಾರ್ಡನ್‌ಗಳಿಗೆ ಹೆಚ್ಚಿನ ಅಧಿಕಾರ ನೀಡುವ ಕುರಿತು ಈ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. 30ಕ್ಕೂ ಅಧಿಕ ನಿವಾಸಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.

ದಂಡ ವಿಧಿಸಲು ಚಲನ್‌ಗಳನ್ನು ಕೆರೆ ಆಸುಪಾಸಿನ ನಿವಾಸಿಗಳು ಹಾಗೂ ಕೆರೆ ವಾರ್ಡನ್‌ಗಳಿಗೆ ಶೀಘ್ರವೇ ನೀಡಲಾಗುತ್ತದೆ ಎಂದು ನಾಗರಿಕ ಕಾವಲು ಸಮಿತಿಯ ಸದಸ್ಯರಾಗಿರುವ ಸೋನಾಲಿ ಸಿಂಗ್‌ ತಿಳಿಸಿದರು.

ADVERTISEMENT

ಈ ಜಲಮೂಲದ ರಕ್ಷಣೆಗೆ 12 ಕೆರೆ ವಾರ್ಡನ್‌ಗಳನ್ನು ನೇಮಿಸಲಾಗಿದೆ. ಇದರ ಕಾವಲಿಗೆ ನೇಮಿಸಿರುವ ಮಾರ್ಷಲ್‌ಗಳಿಗೆ ಅವರೂ ನೆರವಾಗಲಿದ್ದಾರೆ. ನಗರದ ಕಲುಷಿತ ನೀರನ್ನು ಸಂಸ್ಕರಿಸಿ ಕೋಲಾರದ ಖಾಲಿ ಕೆರೆಗಳಿಗೆ ತುಂಬಿಸುವ ನಿರ್ಧಾರಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಶುದ್ಧೀಕರಿಸಿದ ನೀರನ್ನು ಬಳಸಿ ಮೊದಲು ಬೆಳ್ಳಂದೂರು  ಹಾಗೂ ವರ್ತೂರು ಕೆರೆಗಳನ್ನು ತುಂಬಿಸಬೇಕು. ಮಿಕ್ಕ ನೀರನ್ನಷ್ಟೇ ಕೋಲಾರಕ್ಕೆ ಸಾಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಭೆಯಲ್ಲಿ ವ್ಯಕ್ತವಾದ ಬೇಡಿಕೆಗಳು

* ಕೆರೆಯ ಕಳೆ ಹೊರತೆಗೆಯುವ ಕಾರ್ಯವನ್ನು ಮುಂದುವರಿಸಬೇಕು

* ನೀರಿನ ಶುದ್ಧೀಕರಣಕ್ಕೆ ಅನುವಾಗುವಂತೆ ಜೌಗು ಪ್ರದೇಶವನ್ನು ಅಭಿವೃದ್ಧಿಪಡಿಸಬೇಕು

* ಕೆರೆಯ ತೂಬನ್ನು ಅಭಿವೃದ್ಧಿಪಡಿಸುವ ಕಾಮಗಾರಿಯನ್ನು ಮಳೆಗಾಲಕ್ಕೆ ಮುನ್ನವೇ ಪೂರ್ಣಗೊಳಿಸಬೇಕು

* ಆದಷ್ಟು ಬೇಗ ಜಲಮೂಲದ ಸುತ್ತಲೂ ಬೇಲಿ ಅಳವಡಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.