ADVERTISEMENT

ದಂಧೆಯಾಗುತ್ತಿರುವ ರಾಜಕಾರಣ: ಸಿಂಧ್ಯ

​ಪ್ರಜಾವಾಣಿ ವಾರ್ತೆ
Published 10 ಜುಲೈ 2012, 18:30 IST
Last Updated 10 ಜುಲೈ 2012, 18:30 IST

ಬೆಂಗಳೂರು: `ಇಂದಿನ ರಾಜಕೀಯ ಪಕ್ಷಗಳು ದಿವಾಳಿ ಅಂಚಿನಲ್ಲಿದ್ದು, ರಾಜಕಾರಣ ದಂಧೆಯಾಗಿ ಪರಿವರ್ತನೆಯಾಗಿದೆ~ ಎಂದು ಜೆಡಿ(ಎಸ್)ನ ಕಾರ್ಯಾಧ್ಯಕ್ಷ ಪಿ.ಜಿ.ಆರ್. ಸಿಂಧ್ಯ ಮಂಗಳವಾರ ಇಲ್ಲಿ ವಿಷಾದಿಸಿದರು.

ಬೆಂಗಳೂರು ನಾಗರಿಕ ವೇದಿಕೆಯು ಮಾಜಿ ಸಚಿವ ದಿವಂಗತ ಎಂ.ಪಿ. ಪ್ರಕಾಶ್ ಅವರ 72ನೇ ಜನ್ಮ ದಿನಾಚರಣೆ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ `ರಾಜಕಾರಣ- ಸಾಂಸ್ಕೃತಿಕ, ಸಾಹಿತ್ಯಿಕ ಸಂಬಂಧ~ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
`ರಾಜಕಾರಣ ಇಂದು ವ್ಯಾಪಾರವಾಗಿ ಮಾರ್ಪಟ್ಟಿದೆ.

ಉದ್ಯಮಪತಿಗಳು ಹಣ ಚೆಲ್ಲಿ ಸುಲಭವಾಗಿ ರಾಜಕೀಯ ಪ್ರವೇಶ ಮಾಡುತ್ತಿರುವುದರಿಂದ ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದ ಎಂ.ಪಿ. ಪ್ರಕಾಶ್ ಅವರಂತಹ ಮೇರು ವ್ಯಕ್ತಿಗಳ ಕೊರತೆ ಎದ್ದು ಕಾಣುತ್ತಿದೆ. ಮುಂದಿನ ಚುನಾವಣೆಗಳಲ್ಲಿ ಎಂ.ಪಿ. ಪ್ರಕಾಶ್ ಅವರಂತಹ ಎಲ್ಲ ಪ್ರಾಮಾಣಿಕ ವ್ಯಕ್ತಿಗಳಿಗೂ ಸೋಲುಂಟಾಗಬಹುದು ಅಥವಾ ವಿಧಾನಸಭೆ ಪ್ರವೇಶಿಸುವುದು ಕಷ್ಟಕರವಾಗಬಹುದು~ ಎಂದು ಆತಂಕ ವ್ಯಕ್ತಪಡಿಸಿದರು.

ಸಮನ್ವಯತೆಗೆ ಹೆಸರಾದವರು: `ಎಂ.ಪಿ. ಪ್ರಕಾಶ್ ಮುಖ್ಯಮಂತ್ರಿಯಾಗದಿದ್ದರೂ ರಾಮಮನೋಹರ ಲೋಹಿಯಾ, ಇಂದಿರಾಗಾಂಧಿ ಸೇರಿದಂತೆ ಅನೇಕ ರಾಷ್ಟ್ರನಾಯಕರ ಜತೆ ನಿಕಟ ಸಂಬಂಧ ಹೊಂದಿದ್ದರು. ಸಾಹಿತಿಗಳು ಹಾಗೂ ಸಿನಿಮಾ ಕ್ಷೇತ್ರದವರ ಜತೆಗೂ ಅಷ್ಟೇ ಉತ್ತಮ ಬಾಂಧವ್ಯ ಹೊಂದಿದ್ದರು. ಇಂತಹ ಸಮನ್ವಯತೆಯ ಸಂಬಂಧದಿಂದ ರಾಮಕೃಷ್ಣ ಹೆಗಡೆ ಹಾಗೂ ಜೆ.ಎಚ್. ಪಟೇಲ್ ಸರ್ಕಾರ ಯಶಸ್ವಿಯಾಗಿ ನಡೆಯಲು ಪ್ರಮುಖ ಶಕ್ತಿಯಾಗಿ ಕೆಲಸ ನಿರ್ವಹಿಸಿದರು~ ಎಂದರು.

ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಂ ಮಾತನಾಡಿ, `ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರನ್ನು ಪದಚ್ಯುತಗೊಳಿಸಲು ಹಾಗೂ ಆನಂತರ ಮತ್ತೊಂದು ಸಮುದಾಯ ಜಾತಿಯನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಿದ್ದು ಜಾತ್ಯತೀತತೆ ವಿನಾಶದ ಕಡೆ ಹೊರಟಿರುವುದನ್ನು ಎತ್ತಿ ತೋರುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ, `ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿಯೂ ಜಾತೀಯತೆ ನುಸುಳಿರುವುದು ವಿಷಾದದ ಸಂಗತಿ. ಮುಂದಿನ ದಿನಗಳಲ್ಲಿ ಅಧಿಕಾರ ಹಿಡಿಯುವ ಗುರಿಯಿಟ್ಟುಕೊಂಡು ಸದಸ್ಯತ್ವ ನೋಂದಣಿಗೆ ಜಾತಿಗಳು ಮುನ್ನುಗ್ಗುತ್ತಿರುವುದು ಕೆಟ್ಟ ಬೆಳವಣಿಗೆ~ ಎಂದು ನೊಂದು ನುಡಿದರು.

ವಿಧಾನ ಪರಿಷತ್ ಸದಸ್ಯ ಎಂ.ವಿ. ರಾಜಶೇಖರನ್, ಹೃದಯ ತಜ್ಞ ಡಾ. ಮಹಂತೇಶ್ ಚರಂತಿಮಠ ಮಾತನಾಡಿದರು. ರಂಗಕರ್ಮಿ ಕೆ.ವಿ. ನಾಗರಾಜಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.