ADVERTISEMENT

ದಕ್ಷಿಣ ಪಿನಾಕಿನಿ ನದಿಗೆ ಕೈಗಾರಿಕೆಗಳ ತ್ಯಾಜ್ಯ ನೀರು

ನೊರೆ ಸಮಸ್ಯೆಯೂ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 11 ಜುಲೈ 2017, 19:35 IST
Last Updated 11 ಜುಲೈ 2017, 19:35 IST
ಬಣ್ಣದ ನೀರನ್ನು ಕೆರೆಗೆ ಹರಿಸಲಾಗುತ್ತಿದೆ
ಬಣ್ಣದ ನೀರನ್ನು ಕೆರೆಗೆ ಹರಿಸಲಾಗುತ್ತಿದೆ   

ಹೊಸಕೋಟೆ: ತಾಲ್ಲೂಕಿನ ಅನುಗೊಂಡನಹಳ್ಳಿ ಹೋಬಳಿಯಲ್ಲಿ ಹರಿಯುವ ದಕ್ಷಿಣ ಪಿನಾಕಿನಿ ನದಿಗೆ ಕೈಗಾರಿಕೆಗಳ ರಾಸಾಯನಿಕಯುಕ್ತ ತ್ಯಾಜ್ಯನೀರನ್ನು ಬಿಡಲಾಗುತ್ತಿದೆ. ಇದರಿಂದ ನದಿ ನೀರು ಕಲುಷಿತಗೊಂಡಿದೆ. ನೊರೆ ಸಮಸ್ಯೆಯೂ ಕಾಣಿಸಿಕೊಂಡಿದೆ.

ತಮಿಳುನಾಡಿನ 30ಕ್ಕೂ ಹೆಚ್ಚು ಬಟ್ಟೆಗೆ ಬಣ್ಣ ಹಾಕುವ ಕಾರ್ಖಾನೆಗಳು ಹೋಬಳಿಯಲ್ಲಿ ತಲೆಎತ್ತಿವೆ. ಕಾರ್ಖಾನೆಗಳ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡದೆ ನೇರವಾಗಿ ನದಿಗೆ ಬಿಡಲಾಗುತ್ತಿದೆ.

ತಿರುಮಶೆಟ್ಟಿಹಳ್ಳಿ, ಸಮೇತನಹಳ್ಳಿ, ಮುತ್ಸಂದ್ರ, ಹಾರೋಹಳ್ಳಿ, ತತ್ತನೂರು, ಕೋಟೂರು, ತಿರುವರಂಗ, ಗುಂಡೂರು ಗ್ರಾಮಗಳ ಜನರು ಈ ನದಿಯ ನೀರನ್ನು ಕೃಷಿಗೆ ಬಳಸುತ್ತಿದ್ದಾರೆ. ಆದರೆ, ಕಲುಷಿತಗೊಂಡ ನೀರಿನಿಂದಾಗಿ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆ ನಾಶವಾಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ.

ADVERTISEMENT

‘ಮೂರು ಎಕರೆಯಲ್ಲಿ ಕೊತ್ತಂಬರಿ ಸೊಪ್ಪು ಬೆಳೆದಿದ್ದೇನೆ. ಆದರೆ, ಇದ್ದಕ್ಕಿದ್ದಂತೆ ಬೆಳೆ ಒಣಗಿ ಹೋಗಿದೆ. ಜಮೀನನ್ನು ಗುತ್ತಿಗೆ ಆಧಾರದ ಮೇಲೆ ತೆಗೆದುಕೊಂಡು ವ್ಯವಸಾಯ ಮಾಡುತ್ತಿದ್ದೇನೆ. ಬೆಳೆ ನಾಶವಾಗಿರುವುದರಿಂದ ದಿಕ್ಕು ತೋಚದಂತಾಗಿದೆ’ ಎಂದು ಮುತ್ಕೂರು ಗ್ರಾಮದ ರೈತ ಬಿ.ಎಲ್.ಮಂಜುನಾಥ್ ಅಳಲು ತೋಡಿಕೊಂಡರು.

ರೈತ ಎಂ.ಎನ್.ಪ್ರಕಾಶ್, ‘ಭತ್ತದ ಬೆಳೆಗೆ ನದಿಯ ನೀರನ್ನು ಹರಿಸುತ್ತಿದ್ದೇನೆ. ನೀರಿನಲ್ಲಿ ರಾಸಾಯನಿಕ ಅಂಶ ಇರುವುದರಿಂದ ಭತ್ತದ ಕಾಳು ಕಟ್ಟಿಲ್ಲ’ ನೋವು ತೋಡಿಕೊಂಡರು.

ರಾಮಸ್ವಾಮಿಪಾಳ್ಯದ ಆನಂದಪ್ಪ ಅವರು ಹೂಕೋಸು ಬೆಳೆದಿದ್ದಾರೆ. ಆದರೆ, ಬೆಳೆ ಸರಿಯಾಗಿ ಬಂದಿಲ್ಲ.

ಕಾರ್ಖಾನೆಗಳನ್ನು ಮುಚ್ಚಿಸಲು ಆಗ್ರಹ: ‘ಯಾವುದೇ ಪರವಾನಗಿ ಪಡೆಯದೆ ಅಕ್ರಮವಾಗಿ ಸ್ಥಾಪಿಸಿರುವ ಕಾರ್ಖಾನೆಗಳನ್ನು ಮುಚ್ಚಿಸಬೇಕು ಎಂದು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಮಾಡಿದ್ದೆವು. ಆದರೆ, ಈ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲಿಲ್ಲ’ ಎಂದು ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಮುಖಂಡ ಆರ್.ಆರ್.ಮನೋಹರ್ ದೂರಿದರು.

ಚರ್ಮ ಕಾಯಿಲೆ ಉಲ್ಬಣ
‘ಈ ನೀರಿನಲ್ಲಿ ಕೈಕಾಲು ತೊಳೆಯುವುದರಿಂದ ಚರ್ಮದ ಕಾಯಿಲೆಗಳು ಬರುತ್ತಿವೆ. ಇದೇ ನೀರಿನಲ್ಲಿ ಬೆಳೆದ ಮೇವನ್ನು ತಿಂದ ಜಾನುವಾರುಗಳಿಗೆ ವಿವಿಧ ರೋಗಗಳು ಬರುತ್ತಿವೆ. ಕೆಲವು ಮೃತಪಟ್ಟಿವೆ’ ಎಂದು ಗ್ರಾಮಸ್ಥರು ಹೇಳಿದರು.

‘ವಿಷಯುಕ್ತ ಅಂಶ ಅಂತರ್ಜಲ ಸೇರುತ್ತಿದ್ದು, ಕೊಳವೆಬಾವಿಗಳ ನೀರೂ ಕಲುಷಿತಗೊಂಡಿದೆ. ಅದೇ ನೀರನ್ನು ಕುಡಿಯುವಂತಾಗಿದೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಇಂದು ಪ್ರತಿಭಟನೆ
‘ದಕ್ಷಿಣ ಪಿನಾಕಿನಿ ನದಿಗೆ ವಿಷಯುಕ್ತ ನೀರು ಹರಿಸುತ್ತಿರುವ ಕಾರ್ಖಾನೆಗಳನ್ನು ಮುಚ್ಚಿಸಬೇಕು ಎಂದು ನದಿ ಪಾತ್ರದ ಗ್ರಾಮಸ್ಥರು ಬುಧವಾರ (ಜುಲೈ 12ರಂದು) ಪಟ್ಟಣದಲ್ಲಿ  ಪ್ರತಿಭಟನೆ ಹಮ್ಮಿಕೊಂಡಿದ್ದಾರೆ’ ಎಂದು ವಕೀಲ ಹರೀಂದ್ರ ಅವರು ತಿಳಿಸಿದರು.

–ಕೆ.ಮಂಜುನಾಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.