ADVERTISEMENT

ದಟ್ಟಣೆಯ ವ್ಯೂಹದೊಳಗೆ ಮೆಟ್ರೊ ಕೆಲಸ!

ಬೈಯಪ್ಪನಹಳ್ಳಿ–ವೈಟ್‌ಫೀಲ್ಡ್‌ವರೆಗಿನ ಮೆಟ್ರೊ ಮಾರ್ಗ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2017, 19:30 IST
Last Updated 17 ಅಕ್ಟೋಬರ್ 2017, 19:30 IST
ದಟ್ಟಣೆಯ ವ್ಯೂಹದೊಳಗೆ ಮೆಟ್ರೊ ಕೆಲಸ!
ದಟ್ಟಣೆಯ ವ್ಯೂಹದೊಳಗೆ ಮೆಟ್ರೊ ಕೆಲಸ!   

ಬೆಂಗಳೂರು: ಕೆ.ಆರ್‌.ಪುರದಿಂದ ಟಿನ್‌ ಫ್ಯಾಕ್ಟರಿವರೆಗೆ ಸಾಲುಗಟ್ಟಿ ನಿಲ್ಲುವ ವಾಹನಗಳು, ಎರಡೂವರೆ ಕಿ.ಮೀ. ಕ್ರಮಿಸಲು ಮುಕ್ಕಾಲು ಗಂಟೆ ಹಿಡಿಯುವ ಸಮಯ, ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಪಡಿಪಾಟಲು ಅನುಭವಿಸುವ ಸಂಚಾರ ಪೊಲೀಸರು, ಸಕಾಲದಲ್ಲಿ ಕಚೇರಿಗಳಿಗೆ ಹೋಗಲು ಆಗದೆ ಕಿರಿಕಿರಿ ಅನುಭವಿಸುವ ಉದ್ಯೋಗಿಗಳು...

‘ಪ್ರಜಾವಾಣಿ’ ಪತ್ರಿಕೆಯು ಟಿನ್‌ ಫ್ಯಾಕ್ಟರಿ ಜಂಕ್ಷನ್‌ ಬಳಿ ನಡೆಸಿದ ‘ರಿಯಾಲಿಟಿ ಚೆಕ್‌’ನಲ್ಲಿ ಕಂಡುಬಂದ ದೃಶ್ಯಗಳಿವು. ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ವರೆಗಿನ ಮೆಟ್ರೊ ಮಾರ್ಗದ ನಿರ್ಮಾಣಕ್ಕಾಗಿ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಈ ಜಂಕ್ಷನ್‌ನ ಜಾಗವನ್ನು ಸ್ವಾಧೀನಕ್ಕೆ ಪಡೆದಿದೆ. ಇದರಿಂದ ರಸ್ತೆಯು ಮತ್ತಷ್ಟು ಕಿರಿದಾಗಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ.

ಬಿಎಂಆರ್‌ಸಿಎಲ್‌ನವರು ಬಳ್ಳಾರಿ ರಸ್ತೆಯ ಮೇಲ್ಸೇತುವೆಯ ಬಳಿ 15 ಅಡಿಗಳಷ್ಟು ಜಾಗದಲ್ಲಿ ತಡೆಗೋಡೆ ಹಾಕಿದ್ದಾರೆ. ಜಂಕ್ಷನ್‌ನಲ್ಲಿರುವ ರಸ್ತೆಯ ವಿಭಜಕವನ್ನು ಒಡೆದಿದ್ದು, ಕೊರೆಯುವ ಯಂತ್ರದ ಮೂಲಕ ಮಣ್ಣು ಪರೀಕ್ಷೆ ನಡೆಸುತ್ತಿದ್ದಾರೆ.

ADVERTISEMENT

ಕೋಲಾರ, ಕೆ.ಆರ್‌.ಪುರದ ಕಡೆಯಿಂದ ಬರುವ ಕೆ.ಎಸ್‌.ಆರ್‌.ಟಿ.ಸಿ, ಬಿ.ಎಂ.ಟಿ.ಸಿ ಹಾಗೂ ಖಾಸಗಿ ವಾಹನಗಳು ಟಿನ್‌ ಫ್ಯಾಕ್ಟರಿ ಬಳಿ ನಿಲುಗಡೆ ಮಾಡುತ್ತವೆ. ಇದಕ್ಕೆ ಪ್ರತ್ಯೇಕ ಮಾರ್ಗವನ್ನು ಕಲ್ಪಿಸಲಾಗಿದೆ. ಆದರೆ, ಚಾಲಕರು ನಡುರಸ್ತೆಯಲ್ಲೇ ಬಸ್‌ಗಳನ್ನು ನಿಲುಗಡೆ ಮಾಡುತ್ತಾರೆ. ಪ್ರತ್ಯೇಕ ಮಾರ್ಗದಲ್ಲೇ ವಾಹನ ನಿಲುಗಡೆ ಮಾಡುವಂತೆ ಸಂಚಾರ ಪೊಲೀಸರು ಸೂಚಿಸುತ್ತಿದ್ದರು. ಆದರೆ, ಬಸ್‌ ಚಾಲಕರು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಇದರಿಂದ ಬೇರೆ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.

ಕೋಲಾರ, ಚೆನ್ನೈ, ತಿರುಪತಿ ಕಡೆಯಿಂದ ಬೆಂಗಳೂರಿಗೆ ಬರುವ ವಾಹನಗಳು ಕೆ.ಆರ್‌.ಪುರದಿಂದ ಟಿನ್‌ ಫ್ಯಾಕ್ಟರಿವರೆಗೆ ಸಾಲುಗಟ್ಟಿ ನಿಂತಿದ್ದವು. ಒಂದು ಕಿ.ಮೀ. ದೂರ ಕ್ರಮಿಸಲು 25 ನಿಮಿಷ ಹಿಡಿಯಿತು. ಉದ್ಯೋಗಿಗಳು ಕಚೇರಿಗೆ ನಿಗದಿತ ಸಮಯಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಬೈಯಪ್ಪನಹಳ್ಳಿಯಿಂದ ಟಿನ್‌ ಫ್ಯಾಕ್ಟರಿವರೆಗೆ ಇದೇ ಪರಿಸ್ಥಿತಿ ಇತ್ತು. ವೈಟ್‌ಫೀಲ್ಡ್‌ ಹಾಗೂ ಸಿಲ್ಕ್‌ಬೋರ್ಡ್‌ ಕಡೆಯಿಂದ ಬರುವ ರಸ್ತೆಗಳಲ್ಲೂ ವಾಹನ ದಟ್ಟಣೆ ಕಂಡುಬಂದಿತು.

‘ಅಗತ್ಯ ಇರುವ ಕಡೆ ಸ್ವಾಧೀನಪಡಿಸಿಕೊಳ್ಳಿ’:
ಮೆಟ್ರೊ ರೈಲು ನಿರ್ಮಿಸುವ ಕಡೆಗಳಲ್ಲೆಲ್ಲಾ ಜಾಗವನ್ನು ಸ್ವಾಧೀನ ಪಡಿಸಿಕೊಳ್ಳಲು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಮುಂದಾಗಿದ್ದಾರೆ. ಟಿನ್‌ ಫ್ಯಾಕ್ಟರಿ ಜಂಕ್ಷನ್‌ ಅಲ್ಲದೆ, ವೈಟ್‌ಫೀಲ್ಡ್‌ ರಸ್ತೆಯಲ್ಲೂ ಜಾಗವನ್ನು ಸ್ವಾಧೀನಕ್ಕೆ ಪಡೆಯುತ್ತಿದ್ದಾರೆ. ಇದರಿಂದ ಎಲ್ಲ ಭಾಗಗಳಲ್ಲಿ ವಾಹನ ದಟ್ಟಣೆ ಉಂಟಾಗುತ್ತದೆ. ಕಾಮಗಾರಿ ನಡೆಸುವ ಜಾಗವನ್ನಷ್ಟೇ ಸ್ವಾಧೀನಕ್ಕೆ ಪಡೆಯಬೇಕು. ಉಳಿದ ಕಡೆಗಳಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ನಿಗಮದ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ’ ಎಂದು ಕೆ.ಆರ್‌.ಪುರದ ಸಂಚಾರ ಪೊಲೀಸರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆಳಿಗ್ಗೆ 7ರಿಂದ 11.30ರವರೆಗೆ, ಸಂಜೆ 4.30ರಿಂದ ರಾತ್ರಿ 11ರವರೆಗೆ ಈ ಮಾರ್ಗದಲ್ಲಿ ವಾಹನ ದಟ್ಟಣೆ ಇರುತ್ತದೆ. ಮೆಟ್ರೊ ಕಾಮಗಾರಿ ಆರಂಭವಾದ 4–5 ದಿನಗಳಿಂದ ಮತ್ತಷ್ಟು ವಾಹನ ದಟ್ಟಣೆ ಹೆಚ್ಚಾಗಿದೆ. ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಎರಡು ಪಾಳಿಯಲ್ಲಿ ತಲಾ 10 ಸಂಚಾರ ಪೊಲೀಸರು ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದರು.

‘ಹಗಲಿನಲ್ಲಿ ವಾಹನಗಳ ಓಡಾಟ ಹೆಚ್ಚಾಗಿರುವುದರಿಂದ ರಾತ್ರಿ ವೇಳೆಯಲ್ಲಿ ಕಾಮಗಾರಿಯನ್ನು ನಡೆಸಬೇಕು. ತ್ವರಿಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು’ ಎಂದು ಒತ್ತಾಯಿಸಿದರು.

***
ತಡೆಗೋಡೆ ತೆರವುಗೊಳಿಸಿದ್ದ ಸಂಚಾರ ಪೊಲೀಸರು

ಬಿಎಂಆರ್‌ಸಿಎಲ್‌ನವರು ತೂಗುಸೇತುವೆಯಿಂದ ಬಳ್ಳಾರಿ ರಸ್ತೆಯ ಮೇಲ್ಸೇತುವೆಯವರೆಗೆ ತಡೆಗೋಡೆ ಹಾಕಿದ್ದರು. ಇದರಿಂದ ಕೋಲಾರದಿಂದ ಬರುವ ಹಾಗೂ ಹೋಗುವ ವಾಹನಗಳಿಗೆ ತೊಂದರೆ ಉಂಟಾಗುತ್ತಿತ್ತು. ಕಾಮಗಾರಿ ನಡೆಸುವ ಜಾಗದಲ್ಲಷ್ಟೇ ತಡೆಗೋಡೆ ಹಾಕುವಂತೆ ಸಂಚಾರ ಪೊಲೀಸರು ನಿಗಮದ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಇದಕ್ಕೆ ಅವರು ಸ್ಪಂದಿಸಿರಲಿಲ್ಲ. ಹೀಗಾಗಿ ಸಂಚಾರ ಪೊಲೀಸರು ತಡೆಗೋಡೆಯನ್ನು ನಾಲ್ಕು ದಿನಗಳ ಹಿಂದೆ ತೆರವುಗೊಳಿಸಿದ್ದರು. ಇದರಿಂದ ಎಚ್ಚೆತ್ತ ನಿಗಮದ ಅಧಿಕಾರಿಗಳು ಬಳ್ಳಾರಿ ರಸ್ತೆಯ ಮೇಲ್ಸೇತುವೆ ಕಡೆಯಿಂದ ಸ್ಕೈವಾಕ್‌ವರೆಗೆ ಮಾತ್ರ ತಡೆಗೋಡೆ ಹಾಕಿದ್ದಾರೆ.

***
ಟಿನ್‌ ಫ್ಯಾಕ್ಟರಿ ಬಳಿ ಮೆಟ್ರೊ ಕಾಮಗಾರಿ ನಡೆಯುತ್ತಿರುವುದರಿಂದ ಕೆ.ಆರ್‌.ಪುರದ ಕೆ.ಸಿ.ಪಾಳ್ಯದವರೆಗೂ ಸಂಚಾರ ದಟ್ಟಣೆ ಉಂಟಾಗುತ್ತಿದೆ. ದೂರವಾಣಿ ನಗರದಲ್ಲಿರುವ ಬಿಎಂಟಿಸಿಯ 24ನೇ ಡಿಪೊದ ಬಸ್‌ಗಳು ಐಟಿಐ ಗೇಟ್‌ ಬಳಿ ಎಡ ತಿರುವು ಪಡೆದು ತೂಗುಸೇತುವೆ ಮೂಲಕ ಹೋಗುತ್ತವೆ. ಎಡ ತಿರುವು ಪಡೆಯುವ ಸಂದರ್ಭದಲ್ಲಿ ಕೋಲಾರ, ಕೆ.ಆರ್‌.ಪುರದ ಕಡೆಯಿಂದ ಬರುವ ವಾಹನಗಳಿಗೆ ಅಡಚಣೆ ಆಗುತ್ತಿದೆ. ಇದಕ್ಕೆ ಪರ್ಯಾಯ ಮಾರ್ಗಗಳನ್ನು ಕೈಗೊಳ್ಳಬೇಕು.
–ಅಮಾನುಲ್ಲಾ, ಗ್ಯಾರೇಜ್‌ ಮಾಲೀಕ

ಐಟಿಐ ಗೇಟ್‌ನಿಂದ ಮೆಜೆಸ್ಟಿಕ್‌ ಕಡೆಗೆ ಹೋಗುತ್ತೇನೆ. ಆದರೆ, ಸಂಚಾರ ದಟ್ಟಣೆಯ ಕಿರಿಕಿರಿಯನ್ನು ಪ್ರತಿದಿನ ಅನುಭವಿಸುವಂತಾಗಿದೆ. ಕಚೇರಿಗೆ ಹೋಗಲು ತಾಸುಗಟ್ಟಲೆ ಹಿಡಿಯುತ್ತಿದೆ. ನಿಗದಿತ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹೋಗಲು
ಸಾಧ್ಯವಾಗುತ್ತಿಲ್ಲ.
–ಮಹೇಶ್‌, ಮಾರ್ಗದರ್ಶಿ ಚಿಟ್‌ಫಂಡ್‌ ಉದ್ಯೋಗಿ

ನಾನು ವೃತ್ತಿಯಲ್ಲಿ ಉಬರ್‌ ಚಾಲಕ. ವೈಟ್‌ಫೀಲ್ಡ್‌ ಭಾಗದಲ್ಲಿ ವಾಸವಾಗಿದ್ದೇನೆ. ಈ ಭಾಗದಲ್ಲೆಲ್ಲಾ ಓಡಾಡುತ್ತೇನೆ. ವೈಟ್‌ಫೀಲ್ಡ್‌ನಿಂದ ಟಿನ್‌ ಫ್ಯಾಕ್ಟರಿ ಜಂಕ್ಷನ್‌ವರೆಗಿನ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಮೆಟ್ರೊ ರೈಲು ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.
ಭರತ್‌

ಮೆಟ್ರೊ ರೈಲಿನಿಂದಾಗಿ ಸಂಚಾರ ದಟ್ಟಣೆ ಕಡಿಮೆ ಆಗಲಿದೆ. ಇಂತಹ ಯೋಜನೆಗಳನ್ನು ಕೈಗೊಳ್ಳುವಾಗ ಸಾರ್ವಜನಿಕರಿಗೆ ಸಮಸ್ಯೆ ಆಗುವುದು ಸಾಮಾನ್ಯ. ಆದರೆ, ಅದನ್ನು ಸಹಿಸಿಕೊಳ್ಳಬೇಕು.
–ಶೈಲಾ, ಉಪನ್ಯಾಸಕಿ


ಮೆಟ್ರೊ ರೈಲು ಮಾರ್ಗ ನಿರ್ಮಾಣ ಕಾಮಗಾರಿಯಿಂದ ದೂಳಿನ ಸಮಸ್ಯೆ ಹೆಚ್ಚಾಗಿದೆ. ತಿಂಡಿ–ತಿನಿಸುಗಳ ಮೇಲೆ ದೂಳು ಬೀಳುತ್ತಿದೆ. ಇದರಿಂದ ವ್ಯಾಪಾರದ ಮೇಲೂ ದುಷ್ಪರಿಣಾಮ ಬೀರಿದೆ.

  –ಗಜೇಂದ್ರ, ಪಾನಿಪೂರಿ ವ್ಯಾಪಾರಿ
***
ಕಾಮಗಾರಿಯ ಪ್ರವರ

15.24 ಕಿ.ಮೀ. - ರೈಲು ಮಾರ್ಗದ ಉದ್ದ

13 - ನಿರ್ಮಾಣಗೊಳ್ಳುವ ರೈಲು ನಿಲ್ದಾಣಗಳು

₹1,337 ಕೋಟಿ - ಯೋಜನೆಯ ಒಟ್ಟು ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.