ಮಹದೇವಪುರ: `ಸಮಾಜದಲ್ಲಿ ಅಸ್ಪೃಶ್ಯರು ಸ್ವಾಭಿಮಾನಿಗಳಾಗಿ ಬದುಕಬೇಕೆಂಬ ನೀತಿಯನ್ನು ಸಾರಿ ಹೇಳಿದ ಅಂಬೇಡ್ಕರ್ ಅವರ ಮಾರ್ಗವನ್ನು ದಲಿತರು ಚಾಚೂತಪ್ಪದೆ ಅನುಸರಿಸಬೇಕು~ ಎಂದು ಬಿಬಿಎಂಪಿ ಸದಸ್ಯ ಎಸ್.ಉದಯಕುಮಾರ್ ಕರೆ ನೀಡಿದರು.
ಕ್ಷೇತ್ರದ ವರ್ತೂರು ವಾರ್ಡ್ ಕಚೇರಿಯಲ್ಲಿ ನಡೆದ ಅಂಬೇಡ್ಕರ್ ಅವರ 121ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, `ದಲಿತರ ಮೇಲೆ ಆಗಾಗ್ಗೆ ದಬ್ಬಾಳಿಕೆ ನಡೆಯುತ್ತಲೇ ಇವೆ. ಈ ದಬ್ಬಾಳಿಕೆ, ದೌರ್ಜನ್ಯವನ್ನು ತಡೆಯುವುದಕ್ಕಾಗಿ ಶತ-ಶತಮಾನಗಳಿಂದ ಹೋರಾಟ, ಪ್ರತಿಭಟನೆಗಳು ನಡೆಯುತ್ತಲೇ ಇವೆ. ಆದರೂ ದೌರ್ಜನ್ಯ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಅಸಮಾನತೆಯೇ ಮೂಲ ಕಾರಣ~ ಎಂದು ವಿಷಾದಿಸಿದರು.
`ಜಾತಿಯ ಪಿಡುಗು ಸಂಪೂರ್ಣವಾಗಿ ತೊಲಗಿದಲ್ಲಿ ಮಾತ್ರ ದಲಿತರಿಗೆ ಸೂಕ್ತ ನ್ಯಾಯ ದೊರಕಲಿದೆ. ಸ್ವಸಾಮರ್ಥ್ಯದಿಂದ ಮುನ್ನಡೆಯಲು ದಲಿತರು ಮನಸ್ಸು ಮಾಡಬೇಕು. ಇತ್ತೀಚಿನ ವರ್ಷಗಳಲ್ಲಿಯೂ ದಲಿತರು ಶಿಕ್ಷಣ ಕ್ಷೇತ್ರದಿಂದ ಸಾಕಷ್ಟು ದೂರ ಉಳಿಯುತ್ತಿರುವುದು ವಿಷಾದನೀಯ~ ಎಂದು ನೊಂದು ನುಡಿದರು.
ವರ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ. ಸತೀಶಕುಮಾರ್, ಬೆಂಗಳೂರು ಪೂರ್ವ ತಾ.ಪಂ. ಮಾಜಿ ಅಧ್ಯಕ್ಷ ಆರ್.ರಾಮಕೃಷ್ಣಪ್ಪ, ಹಾಲಿ ಸದಸ್ಯ ಶ್ರೀನಿವಾಸರೆಡ್ಡಿ, ವಿ.ಟಿ.ಬಿ. ಬಾಬುರೆಡ್ಡಿ, ವೇಣುಗೋಪಾಲ್‌ರೆಡ್ಡಿ, ನಾಗಪ್ಪ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.