ADVERTISEMENT

ದರ ಏರಿದರೂ ಕುಗ್ಗದ ಹಬ್ಬದ ಉತ್ಸಾಹ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 18:30 IST
Last Updated 4 ಅಕ್ಟೋಬರ್ 2011, 18:30 IST

ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದರೂ ಜನರ ಹಬ್ಬದ ಉತ್ಸಾಹ ಮಾತ್ರ ಕುಗ್ಗಿಲ್ಲ. ಆಯುಧಪೂಜೆಯ ಮುನ್ನಾ ದಿನವಾದ ಮಂಗಳವಾರ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಹೂ, ಹಣ್ಣು, ತರಕಾರಿ ಖರೀದಿಸಲು ಜನ ಮುಗಿಬಿದ್ದರು.

ಕೃಷ್ಣರಾಜೇಂದ್ರ ಮಾರುಕಟ್ಟೆಯಲ್ಲಂತೂ ಹೆಜ್ಜೆಯಿಡಲೂ ಜಾಗ ಇರಲಿಲ್ಲ. ಗೌರಿ-ಗಣೇಶ, ವರಮಹಾಲಕ್ಷ್ಮಿ ಹಬ್ಬಗಳಿಗೆ ಹೋಲಿಸಿದರೆ ತರಕಾರಿ ಬೆಲೆಯಲ್ಲಿ ಅಷ್ಟು ಏರಿಕೆ ಇರದಿದ್ದರೂ ಹೂ ಮತ್ತು ಹಣ್ಣುಗಳ ಬೆಲೆ ಗಗನಮುಖಿಯಾಗಿತ್ತು. ಆದರೂ, ಮಾರುಕಟ್ಟೆಯಲ್ಲಿ ಹಣ್ಣು-ಹೂ, ತರಕಾರಿ, ಬಾಳೆ ದಿಂಡು, ಬೂದುಗುಂಬಳ ಕಾಯಿಗಳ ಮಾರಾಟ ಭರಾಟೆ ಜೋರಾಗಿಯೇ ನಡೆದಿತ್ತು.

ವಿಶೇಷವಾಗಿ ಪೂಜೆಗೆ ಬಳಸುವಂತಹ ಬಾಳೆದಿಂಡಿನ ಬೆಲೆ ಜೋಡಿಗೆ 25ರಿಂದ 60 ರೂಪಾಯಿವರೆಗೆ ಇತ್ತು. ಬೂದುಗುಂಬಳಕಾಯಿ ಬೆಲೆ ಗಾತ್ರದ ಆಧಾರದ ಮೇರೆಗೆ 60ರಿಂದ 100 ರೂಪಾಯಿವರೆಗೆ ಇತ್ತು.
`ಬೆಳಿಗ್ಗೆಯಿಂದ ಕಾಲು ಭಾಗದಷ್ಟು ಬಾಳೆದಿಂಡು ಖರ್ಚಾಗಿದೆ. ಇನ್ನೂ ಮುಕ್ಕಾಲು ಭಾಗದಷ್ಟು ಖರ್ಚಾಗಬೇಕಿದೆ.

ನಾಳೆ ಬೆಳಿಗ್ಗೆ ವೇಳೆಗೆ ಎಲ್ಲ ಖರ್ಚಾಗಬಹುದು. ವ್ಯಾಪಾರ ಚೆನ್ನಾಗಿದೆ. ಆದರೆ, ವರಮಹಾಲಕ್ಷ್ಮಿ ಅಥವಾ ಗೌರಿ-ಗಣೇಶ ಹಬ್ಬಕ್ಕೆ ಹೋಲಿಸಿದರೆ ವ್ಯಾಪಾರ ಅಷ್ಟು ಜೋರಿಲ್ಲ~ ಎಂದು ದೊಡ್ಡಬಳ್ಳಾಪುರ ಸನಿಹದ ಆರೂಢಿಯಿಂದ ಬಾಳೆದಿಂಡು ತಂದು ಕೆ.ಆರ್. ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದ ಗಣೇಶ್ ಪ್ರತಿಕ್ರಿಯೆ ನೀಡಿದರು.
ಆದರೆ, ಕಾಮಾಕ್ಷಿಪಾಳ್ಯದ ಅರುಣಾ ಪ್ರತಿಕ್ರಿಯೆ ಭಿನ್ನವಾಗಿತ್ತು. `ಒಂದು ಜತೆ ಬಾಳೆ ದಿಂಡನ್ನು 20 ರೂಪಾಯಿಗೆ ಮಾರುತ್ತಿದ್ದೇನೆ. ಗೌರಿ-ಗಣೇಶ ಹಬ್ಬದ ರೀತಿಯಲ್ಲೇ ವ್ಯಾಪಾರ ಚೆನ್ನಾಗಿದೆ~ ಎಂದು ಮಾರುಕಟ್ಟೆ ಪ್ರವೇಶ ಭಾಗದಲ್ಲಿ  ಬಾಳೆ ದಿಂಡು ಮಾರಾಟ ಮಾಡುತ್ತಿದ್ದ ಅವರು ಸಂತಸ ವ್ಯಕ್ತಪಡಿಸಿದರು.

ಹೂವಿನ ಬೆಲೆ ಗಣನೀಯ ಏರಿಕೆ: ಆಯುಧ ಪೂಜೆ ಸಂದರ್ಭದಲ್ಲಿ ವಿಶೇಷವಾಗಿ ವಾಹನಗಳ ಅಲಂಕಾರ ಹಾಗೂ ಪೂಜೆಗೆ ಬಳಸುವ ಸೇವಂತಿಗೆ ಬೆಲೆ ಮಾರು 35ರಿಂದ 40 ರೂಪಾಯಿವರೆಗಿದ್ದರೆ, ಕುಚ್ಚು 130 ರೂಪಾಯಿವರೆಗೆ ಮಾರಾಟವಾಗುತ್ತಿತ್ತು. ಕೆ.ಜಿ. ಸೇವಂತಿಗೆ ಬಿಳಿ 120, ಹಳದಿ 80 ರೂಪಾಯಿವರೆಗೆ ಇತ್ತು. 

ಮಲ್ಲಿಗೆ, ಕಾಕಡ, ಗುಲಾಬಿ, ಸುಗಂಧರಾಜ ಬೆಲೆ ಕೂಡ ದುಬಾರಿಯಾಗಿತ್ತು. ಮಲ್ಲಿಗೆ ಅತ್ಯಧಿಕ ಕೆ.ಜಿ.ಗೆ 500ರಿಂದ 800 ರೂಪಾಯಿವರೆಗೆ ಮಾರಾಟವಾಗುತ್ತಿತ್ತು. ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಮಲ್ಲಿಗೆ ಹೂವಿನ ಬೆಲೆ ಕೆ.ಜಿ.ಗೆ 800ರಿಂದ 1000 ರೂಪಾಯಿವರೆಗೆ ಏರಿದ್ದನ್ನಲ್ಲಿ ಗಮನಿಸಬಹುದು.

ಇನ್ನು ಗುಲಾಬಿ ದಿಂಡಿನ ಬೆಲೆ 300 ರೂಪಾಯಿ ಇದ್ದರೆ, ಹಾರ ಒಂದಕ್ಕೆ 300ರಿಂದ 400 ರೂಪಾಯಿವರೆಗೆ ಏರಿಕೆಯಾಗಿತ್ತು. ಸುಗಂಧರಾಜ ಹಾರದ ಬೆಲೆಯೂ 120 ರೂಪಾಯಿಗಳಷ್ಟಿತ್ತು.

ಹಣ್ಣುಗಳ ಬೆಲೆ ಏರಿಕೆ: ಹಣ್ಣುಗಳ ಬೆಲೆಯಲ್ಲಿ ಸಹಜವಾಗಿಯೇ ಏರಿಕೆ ಇತ್ತು. ದ್ರಾಕ್ಷಿ, ದಾಳಿಂಬೆ, ಸೇಬು ಬೆಲೆ ಅಧಿಕವಾಗಿತ್ತು. ಸಪೋಟ ಬೆಲೆ 60 ರೂಪಾಯಿವರೆಗಿತ್ತು. ಲಿಂಬೆ ಹಣ್ಣಿನ ಬೆಲೆ 3ರಿಂದ 4 ರೂಪಾಯಿ ಇತ್ತು.

ತರಕಾರಿ ಬೆಲೆ ತುಸು ಏರಿಕೆ: ಸಾಮಾನ್ಯವಾಗಿ ಹಬ್ಬದ ಸಂದರ್ಭದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದ ತರಕಾರಿ ಬೆಲೆ ಕೆ.ಆರ್. ಮಾರುಕಟ್ಟೆಯಲ್ಲಿ ಕೊಂಚ ಏರಿಕೆಯಾಗಿತ್ತಷ್ಟೆ.
`ಕಳೆದ 15 ದಿನಗಳಿಂದ ತರಕಾರಿ ಬೆಲೆ ಯಥಾಸ್ಥಿತಿ ಇದೆ. ಹಬ್ಬಕ್ಕೆ ಸ್ವಲ್ಪ ಜಾಸ್ತಿಯಾಗಿದೆ. ಆದರೆ, ಇದು ದುಬಾರಿಯೇನಲ್ಲ~ ಎಂದು ವ್ಯಾಪಾರಿ ಜಾಕ್‌ಪಾಷ ಹೇಳಿದರು.

ಇನ್ನು ಸಣ್ಣ ಗಾತ್ರದ ತೆಂಗಿನಕಾಯಿ ಬೆಲೆ 10ರಿಂದ 15 ರೂಪಾಯಿಗಳಷ್ಟಿದ್ದರೆ, ಸೌತೆಕಾಯಿ ಬೆಲೆ (3ಕ್ಕೆ) 20ರಿಂದ 25 ರೂಪಾಯಿವರೆಗೆ ಇತ್ತು. ಒಟ್ಟಿನಲ್ಲಿ ತರಕಾರಿ, ಹಣ್ಣುಗಳ ಬೆಲೆಗಿಂತ ಹೂ ಬೆಲೆಯೇ ದುಬಾರಿಯಾದದ್ದು ಸ್ಪಷ್ಟವಾಗಿ ಗೋಚರಿಸಿತು.

ಹಬ್ಬದ ಪ್ರಯುಕ್ತ ಬುಧವಾರ ಹಾಗೂ ಗುರುವಾರ ರಜೆ ಇರುವುದರಿಂದ ಹಲವು ಖಾಸಗಿ ಮತ್ತು ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಮಂಗಳವಾರವೇ ಆಯುಧ ಪೂಜೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.