ADVERTISEMENT

ದಾಖಲಾತಿ ಸಲ್ಲಿಕೆ ದಿನಾಂಕ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 18:45 IST
Last Updated 18 ಫೆಬ್ರುವರಿ 2011, 18:45 IST

ಬೆಂಗಳೂರು: ಗ್ರಾಹಕರ ಅನುಕೂಲಕ್ಕಾಗಿ ವಿದ್ಯುತ್ ಬಿಲ್‌ನ ಆರ್‌ಆರ್ ಸಂಖ್ಯೆ, ಅಡುಗೆ ಅನಿಲ ಸಂಪರ್ಕದ ಸಂಖ್ಯೆ ಹಾಗೂ ಪಡಿತರ ಚೀಟಿಯ ಜೆರಾಕ್ಸ್ ಪ್ರತಿ ದಾಖಲಾತಿಗಳನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು ಇದೇ 28ರವರೆಗೆ ವಿಸ್ತರಿಸಲಾಗಿದೆ.ಪಡಿತರ ಚೀಟಿ ಹೊಂದಿಲ್ಲದೆ ಇರುವ ಗ್ರಾಹಕರು ಕೇವಲ ವಿದ್ಯುತ್ ಬಿಲ್ ಹಾಗೂ ಅಡುಗೆ ಅನಿಲ ಸಂಪರ್ಕ ಸಂಖ್ಯೆ ಸಲ್ಲಿಸಿದರೆ ಸಾಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತಿಳಿಸಿದೆ.

ಈಗಾಗಲೇ ಸಂಗ್ರಹವಾಗಿರುವ ಆರ್‌ಆರ್ ಸಂಖ್ಯೆ ಮತ್ತಿತರ ದಾಖಲೆಗಳ ಪರಿಶೀಲನೆ ಕಾರ್ಯವನ್ನು ಇಲಾಖೆ ಆರಂಭಿಸಿದೆ. ಅಡುಗೆ ಅನಿಲ ಗ್ರಾಹಕರ ಹೆಸರು, ಆರ್‌ಆರ್ ಸಂಖ್ಯೆ ಮತ್ತಿತರ ವಿವರಗಳನ್ನು ನಿರ್ದಿಷ್ಟ ಮಾದರಿಯ ನಮೂನೆಯಲ್ಲಿ ಭರ್ತಿ ಮಾಡಿ, ಗ್ರಾಹಕರ ಸಂಪೂರ್ಣ ವಿವರಗಳುಳ್ಳ ಮಾಹಿತಿ ಕೋಶವನ್ನು ಅಭಿವೃದ್ಧಿಪಡಿಸುವುದು ಇಲಾಖೆಯ ಗುರಿಯಾಗಿದೆ.

ಮಾಹಿತಿ ಪರಿಶೀಲನೆ ಕಾರ್ಯ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ನಗರ ಮತ್ತು ಪಟ್ಟಣಗಳಲ್ಲಿ ನಡೆದಿದೆ. ಅಡುಗೆ ಅನಿಲ ವಿತರಕರಿಂದ ಪಡೆದ ಮಾಹಿತಿಯನ್ನು ಮಾಹಿತಿ ಕೇಂದ್ರಗಳಿಗೆ ತರಲಾಗಿದೆ.ಮಾಹಿತಿ ಸಂಗ್ರಹಿಸಿದ ನಂತರ ದಾಖಲೆಗಳನ್ನು ಪುನರ್ ಪರಿಶೀಲನೆಗಾಗಿ ಕಾಯ್ದಿರಿಸಲಾಗುತ್ತಿದೆ.‘ಜನರು ತಪ್ಪು ಮಾಹಿತಿ ನೀಡಿರುವ ಪ್ರಕರಣಗಳೂ ಬೆಳಕಿಗೆ ಬಂದಿವೆ. ಇಂಥ ಸಂದರ್ಭದಲ್ಲಿ ಸರಿಯಾದ ಮಾಹಿತಿ ನೀಡಲು ಅವರಿಗೆ ಮತ್ತೊಂದು ಅವಕಾಶ ನೀಡಲಾಗುವುದು. ಅಲ್ಲದೆ ಆರ್‌ಆರ್ ಸಂಖ್ಯೆಗಳ ಸತ್ಯಾಸತ್ಯತೆ ಪರಿಶೀಲನೆಗೆ ಮುಂದೆ ನಡೆಯಲಿರುವ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ತಪ್ಪು ಮಾಹಿತಿಗಳನ್ನು ಸರಿಪಡಿಸಲಾಗುವುದು’ ಎಂದು ಇಲಾಖೆಯ ಕಾರ್ಯದರ್ಶಿ ಬಿ.ಎ. ಹರೀಶ್‌ಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.