ADVERTISEMENT

ದಾವೆಯಲ್ಲಿ ಸೋಲು: ಆತ್ಮಹತ್ಯೆ ಯತ್ನ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 5:30 IST
Last Updated 1 ಫೆಬ್ರುವರಿ 2011, 5:30 IST

ಬೆಂಗಳೂರು: ಆಸ್ತಿ ವಿವಾದದ ದಾವೆಯಲ್ಲಿ ಸೋತ ವೃದ್ಧರೊಬ್ಬರು ನಗರದ ಸಿವಿಲ್ ನ್ಯಾಯಾಲಯಗಳ ಸಂಕೀರ್ಣದ ಆವರಣದಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ನಡೆದಿದೆ.

ಸುದ್ದಗುಂಟೆಪಾಳ್ಯದ ನಿವಾಸಿಯಾದ ಮುನಿಅಂಜನಪ್ಪ (72) ಆತ್ಮಹತ್ಯೆಗೆ ಯತ್ನಿಸಿದವರು. ಅಗ್ನಿಶಾಮಕ ಇಲಾಖೆಯ ನಿವೃತ್ತ ನೌಕರ ಮುನಿಅಂಜನಪ್ಪ ಮತ್ತು ಇತರರರಿಗೆ ಸರ್ಜಾಪುರದಲ್ಲಿರುವ ಎರಡು ಮುಕ್ಕಾಲು ಎಕರೆ ಜಮೀನಿನ ಒಡೆತನಕ್ಕೆ ಸಂಬಂಧಿಸಿದಂತೆವಿವಾದವಿತ್ತು.

ಇದು ಒಂದನೇ ತ್ವರಿತ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಪ್ರಕರಣದ ತೀರ್ಪು (ಜ. 29) ಮುನಿಅಂಜನಪ್ಪ ಅವರಿಗೆ ವಿರುದ್ಧವಾಗಿ ಬಂದಿತ್ತು. ಇದರಿಂದ ಬೇಸತ್ತ ಅವರು ನ್ಯಾಯಾಲಯದ ಆವರಣದಲ್ಲಿ ಸೋಮವಾರ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದರು,

ಅಸ್ವಸ್ಥರಾಗಿದ್ದ ಅವರನ್ನು ಪೊಲೀಸರು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದರು. ಅವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲಸೂರುಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಹಿನ್ನೆಲೆಯಲ್ಲಿ ನ್ಯಾಯಾಲಯದ ಆವರಣದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಡಿಆರ್‌ಎಂನಲ್ಲಿ ಬಾಂಬ್: ದುಷ್ಕರ್ಮಿಗಳಿಂದ ಕರೆ
ನಗರ ರೈಲು ನಿಲ್ದಾಣದ ಪಕ್ಕದಲ್ಲಿರುವ ರೈಲ್ವೆ ಉಪ ಪ್ರಾದೇಶಿಕ ವ್ಯವಸ್ಥಾಪಕರ (ಡಿಆರ್‌ಎಂ) ಕಚೇರಿಯಲ್ಲಿ ಬಾಂಬ್ ಇಡಲಾಗಿದೆ ಎಂದು ದುಷ್ಕರ್ಮಿಗಳು ಕರೆ ಮಾಡಿದ ಹಿನ್ನೆಲೆಯಲ್ಲಿ ಕಚೇರಿಯಲ್ಲಿ ಸೋಮವಾರ ಬೆಳಿಗ್ಗೆ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಸುದ್ದಿ ತಿಳಿದು ಕೂಡಲೇ ಸ್ಥಳಕ್ಕೆ ಬಂದ ಪೊಲೀಸ್ ಮತ್ತು ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಒಂದು ತಾಸಿಗೂ ಹೆಚ್ಚು ಕಾಲ ತಪಾಸಣೆ ನಡೆಸಿದರು. ಆದರೆ ಬಾಂಬ್ ಪತ್ತೆಯಾಗಲಿಲ್ಲ.

ಕಚೇರಿಗೆ ಹನ್ನೊಂದು ಗಂಟೆ ಸುಮಾರಿಗೆ ಕರೆ ಮಾಡಿದ ಕಿಡಿಗೇಡಿಗಳು ‘ಕಚೇರಿಯಲ್ಲಿ ಬಾಂಬ್ ಇಡಲಾಗಿದ್ದು, ಅದು ಸ್ಫೋಟಿಸಲಿದೆ’ ಎಂದು ಹೇಳಿದ್ದಾರೆ. ಈ ರೀತಿ ಎರಡು ಬಾರಿ ಕರೆ ಮಾಡಿದ್ದ ಅವರು ಮೊದಲು ತೆಲುಗು ಅನಂತರ ತಮಿಳು ಭಾಷೆಯಲ್ಲಿ ಮಾತನಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.