ADVERTISEMENT

ದುಬಾರಿ ಬಡ್ಡಿ ವಸೂಲಿ: ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 25 ಜನವರಿ 2011, 19:30 IST
Last Updated 25 ಜನವರಿ 2011, 19:30 IST

ಬೆಂಗಳೂರು:  ಸಾಲಗಾರರಿಂದ ದುಬಾರಿ ಬಡ್ಡಿ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ನಾಲ್ಕು ಮಂದಿಯನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ತಿಮ್ಮಯ್ಯ ಗಾರ್ಡನ್‌ನ ಗೋವಿಂದರಾಜು, ಜೆ.ಸಿ.ನಗರದ ಹರೀಶ್, ಆರ್.ಟಿ.ನಗರದ ಸತೀಶ್ ಮತ್ತು ಚಾಮರಾಜಪೇಟೆಯ ಚಂದ್ರಕುಮಾರ್ ಬಂಧಿತರು.
ಆರೋಪಿಗಳು ಸಾರ್ವಜನಿಕರಿಗೆ, ಸಣ್ಣಪುಟ್ಟ ಉದ್ಯಮಿಗಳಿಗೆ, ಚಿತ್ರ ನಿರ್ಮಾಪಕರಿಗೆ ಮತ್ತು ವಿತರಕರಿಗೆ ಸಾಲ ನೀಡಿ ತಿಂಗಳಿಗೆ ಶೇ 10ರಿಂದ 20ರಷ್ಟು ಬಡ್ಡಿ ವಸೂಲು ಮಾಡುತ್ತಿದ್ದರು. ಅಲ್ಲದೇ ಸಾಲ ನೀಡಲು ವಿಳಂಬ ಮಾಡಿದವರಿಗೆ ಹೆಚ್ಚಿನ ಬಡ್ಡಿ ವಿಧಿಸಿ, ಅವರ ಆಸ್ತಿಗಳನ್ನು ದೌರ್ಜನ್ಯದಿಂದ ತಮ್ಮ ಹೆಸರಿಗೆ ಬರೆಸಿಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿ ಸಾಲಗಾರರಿಂದ ಪಡೆದಿದ್ದ ವಿವಿಧ ಬ್ಯಾಂಕ್‌ಗಳ ಖಾಲಿ ಚೆಕ್‌ಗಳು, ಛಾಪಾ ಕಾಗದಗಳು ನೂರಕ್ಕೂ ಹೆಚ್ಚು ದಾಖಲೆ ಪತ್ರಗಳು, 20 ಸಾವಿರ ನಗದು, ದ್ವಿಚಕ್ರ ವಾಹನಗಳು ಹಾಗೂ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕೂಲಿ ಕಾರ್ಮಿಕ ಸಾವು: ಕೂಲಿ ಕಾರ್ಮಿಕನೊಬ್ಬ ನಿರ್ಮಾಣ ಹಂತದ ಕಟ್ಟಡದ ಮೆಟ್ಟಿಲುಗಳಿಂದ ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ರಾಜರಾಜೇಶ್ವರಿನಗರದ ಐಡಿಎಲ್ ಹೋಮ್ಸ್ ಲೇಔಟ್‌ನಲ್ಲಿ ಸೋಮವಾರ ನಡೆದಿದೆ.

ಉತ್ತರ ಪ್ರದೇಶ ಮೂಲದ ಮುಖೀಂ (24) ಮೃತಪಟ್ಟವನು. ಆತ ಕಟ್ಟಡದ ಒಳ ಭಾಗದಲ್ಲಿ ಮೆಟ್ಟಿಲುಗಳ ಮೇಲೆ ನಿಂತು ಮೊಬೈಲ್‌ನಲ್ಲಿ ಮಾತನಾಡುತ್ತ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಜಾರಿ ಕೆಳಗೆ ಬಿದ್ದ. ತೀವ್ರವಾಗಿ ಗಾಯಗೊಂಡ ಆತನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಆತ ಮೃತಪಟ್ಟ ಎಂದು ಪೊಲೀಸರು ತಿಳಿಸಿದ್ದಾರೆ.ರಾಜರಾಜೇಶ್ವರಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.