ADVERTISEMENT

ದೆಹಲಿಯಲ್ಲಿ ಕನ್ನಡ ಸಾಹಿತ್ಯ ಸಮಾವೇಶ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2011, 19:30 IST
Last Updated 11 ಆಗಸ್ಟ್ 2011, 19:30 IST
ದೆಹಲಿಯಲ್ಲಿ ಕನ್ನಡ ಸಾಹಿತ್ಯ ಸಮಾವೇಶ
ದೆಹಲಿಯಲ್ಲಿ ಕನ್ನಡ ಸಾಹಿತ್ಯ ಸಮಾವೇಶ   

ಬೆಂಗಳೂರು: ದೇಶದ ರಾಜಧಾನಿ ನವದೆಹಲಿಯಲ್ಲಿ ಅಕ್ಟೋಬರ್ 8 ಮತ್ತು 9ರಂದು ಎರಡು ದಿನಗಳ ರಾಷ್ಟ್ರೀಯ ಕನ್ನಡ ಸಾಹಿತ್ಯ ಸಮಾವೇಶವನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಆರ್.ಕೆ. ನಲ್ಲೂರು ಪ್ರಸಾದ್ ಇಲ್ಲಿ ಪ್ರಕಟಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಹಮ್ಮಿಕೊಂಡಿದ್ದ 2010-11ನೇ ಸಾಲಿನ ಸಾಹಿತ್ಯ ಪರೀಕ್ಷೆಗಳು ಹಾಗೂ ಶಾಸನಶಾಸ್ತ್ರ ಡಿಪ್ಲೊಮಾ ರ‌್ಯಾಂಕ್ ವಿಜೇತರಿಗೆ ಪ್ರಮಾಣ ಪತ್ರ ಹಾಗೂ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಬುಧವಾರ ಅವರು ಮಾತನಾಡಿದರು.

`ಸಮಾವೇಶದಲ್ಲಿ ಕನ್ನಡ ಸಾಹಿತ್ಯದ ಚರ್ಚೆ ಜತೆಗೆ, ಹೊರ ರಾಜ್ಯಗಳಲ್ಲಿ ಕನ್ನಡದ ಬೆಳವಣಿಗೆಗೆ ಶ್ರಮಿಸುತ್ತಿರುವ ಕನ್ನಡ ಸಂಘ-ಸಂಸ್ಥೆಗಳ ಪದಾಧಿಕಾರಿಗಳನ್ನು ಸನ್ಮಾನಿಸಲು ತೀರ್ಮಾನಿಸಲಾಗಿದೆ. ವಿದೇಶಗಳಲ್ಲಿನ ಕನ್ನಡ ಸಂಘಗಳ ಪದಾಧಿಕಾರಿಗಳನ್ನೂ ಸಮಾವೇಶಕ್ಕೆ ಆಹ್ವಾನಿಸಲು ಚಿಂತಿಸಲಾಗುತ್ತಿದೆ. ಈಗಾಗಲೇ ದೆಹಲಿಯಲ್ಲಿನ ಕೆಲವರನ್ನು ಭೇಟಿ ಮಾಡಿ ಸಮಿತಿಯನ್ನೂ ರಚಿಸಲಾಗಿದೆ~ ಎಂದು ಹೇಳಿದರು.

`ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನ, ಸಂಶೋಧನಾ ಕಮ್ಮಟ, ಪುಸ್ತಕ ಪ್ರಕಟಣೆ ಮತ್ತಿತರ ಕಾರ್ಯಚಟುವಟಿಕೆಗಳ ಜತೆಗೆ, ಶೈಕ್ಷಣಿಕ ಕ್ಷೇತ್ರಕ್ಕೂ ತನ್ನ ಸೇವೆಯನ್ನು ವಿಸ್ತರಿಸಿಕೊಳ್ಳುವ ಉದ್ದೇಶದಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸಹಯೋಗದಲ್ಲಿ ರಂಗಭೂಮಿ, ಪತ್ರಿಕೋದ್ಯಮ, ಹಳಗನ್ನಡ ಹಾಗೂ ಅನುವಾದ ವಿಷಯಗಳಲ್ಲಿ ಡಿಪ್ಲೊಮಾ ಕೋರ್ಸ್‌ಗಳನ್ನು ಪ್ರಾರಂಭಿಸುತ್ತಿದೆ. ಅಲ್ಲದೆ, ಕನ್ನಡದಲ್ಲಿ ಎಂ.ಫಿಲ್ ಹಾಗೂ ಪಿಎಚ್.ಡಿ ಅಧ್ಯಯನಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾನ್ಯತೆ ಕೂಡ ದೊರೆತಿದೆ~ ಎಂದರು.

ಈ ನಡುವೆ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬೆರಳಚ್ಚು ಕಲಿಕಾ ತರಬೇತಿ ಸ್ಥಗಿತಗೊಂಡಿರುವ ಬಗ್ಗೆ ಪ್ರಸ್ತಾಪಿಸಿದ ಹಿರಿಯ ಸಾಹಿತಿ ಪ್ರೊ.ಜಿ.ಎಸ್. ಸಿದ್ಧಲಿಂಗಯ್ಯ, ಅದರ ಬದಲಿಗೆ ಕನ್ನಡ ಕಂಪ್ಯೂಟರ್ ಕಲಿಕಾ ಕೇಂದ್ರ ಪ್ರಾರಂಭಿಸುವಂತೆ ಸಲಹೆ ಮಾಡಿದರು.

ಕಸಾಪ ಸಹಕಾರ ನೀಡಿದಲ್ಲಿ ಶೀಘ್ರ ಈ ಕೇಂದ್ರ ಪ್ರಾರಂಭಿಸುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತರು ಭರವಸೆ ನೀಡಿದ್ದಾರೆ ಎಂದು ನಲ್ಲೂರು ತಿಳಿಸಿದರು.

ಸಮಾರಂಭವನ್ನು ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಮನು ಬಳಿಗಾರ್, ನವದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾದಂತಹ ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಮಾತೃ ಭಾಷೆಯ ಬಗ್ಗೆ ಕನ್ನಡಿಗರಲ್ಲಿ ಒಲವು ಕಡಿಮೆಯಿದೆ. ಅಲ್ಲದೆ, ಕನ್ನಡಿಗರಲ್ಲಿ ಸ್ವಾಭಿಮಾನ ಕೊರತೆಯೂ ಎದ್ದು ಕಾಣುತ್ತಿದೆ ಎಂದು ವಿಷಾದಿಸಿದರು.

ಚೆನ್ನೈನ ವಿಮಾನ ನಿಲ್ದಾಣದಲ್ಲಿ ತಮಿಳು ಭಾಷೆಯಲ್ಲಿ ಫಲಕ ಹಾಕಲಾಗಿದೆ. ಆದರೆ, ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೇರೆ ಭಾಷೆಯ ಫಲಕ ಇದೆ. ಈ ಸಂಬಂಧ ಇಲಾಖೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಪತ್ರ ಬರೆದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಬೆಂಗಳೂರಿನಲ್ಲಿ ಇಂಗ್ಲಿಷ್‌ನ ಮಟ್ಟಿಗೆ ಕನ್ನಡ ಬೆಳೆಯದಿರುವುದು ಕಳವಳಕಾರಿ ಸಂಗತಿ ಎಂದು ನೊಂದು ನುಡಿದರು.

ರ‌್ಯಾಂಕ್ ವಿಜೇತರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಹಿರಿಯ ಸಾಹಿತಿ ಪ್ರೊ.ಜಿ.ಎಸ್. ಸಿದ್ಧಲಿಂಗಯ್ಯ, `ಕನ್ನಡ ಸಾಹಿತ್ಯ ಪರಿಷತ್ತು ಒಂದು ಸಂಸ್ಕೃತಿ ಪೀಠ ಇದ್ದ ಹಾಗೆ. ಇಡೀ ದೇಶದಲ್ಲಿ ಇಂತಹ ಸಶಕ್ತವಾದ ಸಾಂಸ್ಕೃತಿಕ ಸಂಸ್ಥೆ ಮತ್ತೊಂದಿಲ್ಲ. ಹೀಗಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳ ಸ್ಥಾನಕ್ಕಿಂತ ಮಿಗಿಲಾದುದು~ ಎಂದರು.

ಇದೇ ಸಂದರ್ಭದಲ್ಲಿ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆ ಹಾಗೂ ಶಾಸನಶಾಸ್ತ್ರ ಡಿಪ್ಲೊಮಾ ಪರೀಕ್ಷೆಯಲ್ಲಿ ರ‌್ಯಾಂಕ್ ಪಡೆದವರಿಗೆ ಪ್ರಮಾಣ ಪತ್ರ ಹಾಗೂ ಬಹುಮಾನಗಳನ್ನು  ವಿತರಿಸಲಾಯಿತು. ಕಸಾಪ ಗೌರವ ಕಾರ್ಯದರ್ಶಿ ಪ್ರೊ.ಎಚ್.ಕೆ. ಮಳಲಿಗೌಡ ಸ್ವಾಗತಿಸಿದರು. ಮತ್ತೊಬ್ಬ ಗೌರವ ಕಾರ್ಯದರ್ಶಿ ಸಂಗಮೇಶ ಬಾದವಾಡಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.