ADVERTISEMENT

ದೇವಾಲಯ ದುರಸ್ತಿಗೆ ನೆರವು: ಮುಖ್ಯಮಂತ್ರಿ ಸದಾನಂದಗೌಡ ಭರವಸೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 20:20 IST
Last Updated 9 ಅಕ್ಟೋಬರ್ 2011, 20:20 IST

ರಾಮನಗರ / ಮಾಗಡಿ : ಮಾಗಡಿಯ ಐತಿಹಾಸಿಕ ಕೆಂಪೇಗೌಡರ ಕೋಟೆಯ ದುರಸ್ತಿ, ಇತಿಹಾಸ ಪ್ರಸಿದ್ಧ ರಂಗನಾಥಸ್ವಾಮಿ ದೇವಾಲಯದ ಜೀರ್ಣೋದ್ಧಾರ, ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ, ಬರ ಪೀಡಿತ ತಾಲ್ಲೂಕು ಪಟ್ಟಿಗೆ ರಾಮನಗರ- ಮಾಗಡಿ ಸೇರಿಸುವ ಕುರಿತು ಪರಿಶೀಲನೆ, ಜಿಲ್ಲೆಯಲ್ಲಿ ರಾಜೀವ್‌ಗಾಂಧಿ ಆರೋಗ್ಯ ವಿ.ವಿ ಹಾಗೂ ಸಂಸ್ಕೃತ ವಿ.ವಿ ಸ್ಥಾಪನೆಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಭರವಸೆ ನೀಡಿದರು.

ಮಾಗಡಿಯ ಶ್ರೀ ರಂಗಸೇವಾ ಟ್ರಸ್ಟ್ ವತಿಯಿಂದ ಭಾನುವಾರ ನಡೆದ ಸಾಮಾಜಿಕ ಸೇವಾ ಕಾರ್ಯಗಳ ಉದ್ಘಾಟನೆ ಹಾಗೂ ರಂಗನಾಥಸ್ವಾಮಿಯ ಉತ್ಸವ ಮೂರ್ತಿಗೆ ವಜ್ರ ಕಿರೀಟ ಧಾರಣಾ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇಲ್ಲಿನ ಚಾರಿತ್ರಿಕ ರಂಗನಾಥಸ್ವಾಮಿ ದೇವಾಲಯವನ್ನು 1 ಕೋಟಿ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯ ಕೈಗೊಂಡರೆ, ಸರ್ಕಾರದ ವತಿಯಿಂದ ರೂ 50 ಲಕ್ಷ ನೀಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು. ಇದರಲ್ಲಿ 28 ಲಕ್ಷ ರೂ. ಮುಜರಾಯಿ ಇಲಾಖೆ  ಹಾಗೂ 22 ಲಕ್ಷ ರೂ. ಪುರಾತತ್ವ ಇಲಾಖೆ ಭರಿಸಲಿದೆ. ಇಷ್ಟಾದರೂ ಜೀರ್ಣೋದ್ಧಾರ ಕೆಲಸ ಪೂರ್ಣಗೊಳ್ಳದಿದ್ದರೆ ಸರ್ಕಾರ ವಿಶೇಷ ಅನುದಾನದಲ್ಲಿ ಹೆಚ್ಚುವರಿ ಹಣ ನೀಡುತ್ತದೆ ಎಂದು ಹೇಳಿದರು.

ಕೋಟೆ ದುರಸ್ತಿಗೆ ರೂ 3 ಕೋಟಿ: ಕೆಂಪೇಗೌಡರು ನಿರ್ಮಿಸಿದ ಕೋಟೆಯ ದುರಸ್ತಿಗೆ ಈಗಾಗಲೇ 3 ಕೋಟಿ ಖರ್ಚಾಗಿದೆ. ಕೋಟೆಯ ಇನ್ನುಳಿದ ಭಾಗದ ಅಭಿವೃದ್ಧಿಗೆ ಹೆಚ್ಚುವರಿ 3 ಕೋಟಿ ರೂಪಾಯಿ ಅಗತ್ಯ ವಿದೆ ಎಂದು ಮನವಿ ಬಂದಿದೆ. ಈ 3 ಕೋಟಿ ರೂಪಾಯಿ ಒದಗಿಸುವ ಜವಾಬ್ದಾರಿಯನ್ನು ಸರ್ಕಾರ ಹೊರುತ್ತದೆ. ಈ ದುರಸ್ತಿ ಕೆಲಸ ಮುಂದುವರೆಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಬರದ ವಿಷಯದಲ್ಲಿ ಪಕ್ಷಪಾತ ಇಲ್ಲ:  ರಾಜ್ಯದ ಹಲವು ತಾಲ್ಲೂಕುಗಳಲ್ಲಿ ಬರಗಾಲ ಬಂದಿದೆ. ಇದರಿಂದ ರೈತರ ಜೀವನ ಕಷ್ಟಕರವಾಗಿದೆ. ಹಾಗಾಗಿ ರಾಜ್ಯ ಸರ್ಕಾರ ಎರಡು ಹಂತಗಳಲ್ಲಿ ರಾಜ್ಯದ ಬರ ಪೀಡಿತ ತಾಲ್ಲೂಕುಗಳ ಪಟ್ಟಿ ಸಿದ್ಧಪಡಿಸಿದೆ. ಆದರೆ ಬರದ ವಿಷಯದಲ್ಲಿ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಪಕ್ಷಪಾತ ಧೋರಣೆ ಮಾಡುವುದಿಲ್ಲ ಎಂದು ಅವರು ಹೇಳಿದರು. ವಾಡಿಕೆಗಿಂತ ಶೇ 20ರಷ್ಟು ಕಡಿಮೆ ಮಳೆ ಬಂದಿರುವ ತಾಲ್ಲೂಕುಗಳನ್ನು ಬರಪಟ್ಟಿಯಲ್ಲಿ ಸೇರಿಸಲಾಗಿದೆ. ರಾಮನಗರ ಮತ್ತು ಮಾಗಡಿ ತಾಲ್ಲೂಕನ್ನು ಬರಪಟ್ಟಿಯಲ್ಲಿ ಸೇರಿಸುವಂತೆ ಇಲ್ಲಿನ ಶಾಸಕರು ಈಗ ಒತ್ತಾಯಿಸಿದ್ದಾರೆ. ಈ ಕುರಿತು ಸೋಮವಾರ ಸ್ಥಳೀಯ ಶಾಸಕರು ಮತ್ತು ಅಧಿಕಾರಿಗಳ ತುರ್ತು ಸಭೆ ಕರೆದು, ಮಳೆ ವರದಿ ಪರಿಶೀಲಿಸಿ ನಿಯಮಾವಳಿ ಅನ್ವಯ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಅವರು ತಿಳಿಸಿದರು.

ಆದರೆ ರಾಜ್ಯ ಸರ್ಕಾರ ಸಿದ್ಧಪಡಿಸಿದ ಬರ ಪೀಡಿತ ತಾಲ್ಲೂಕು ಪಟ್ಟಿ ವೈಜ್ಞಾನಿಕವಾಗಿಲ್ಲ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿರುವುದು ನನಗೆ ಬೇಸರ ತರಿಸಿದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಪಕ್ಷಪಾತ ಮಾಡುವುದಿಲ್ಲ ಎಂದರು.

ಇದಕ್ಕೂ ಮುನ್ನ ಮಾತನಾಡಿದ ಶಾಸಕ ಎಚ್.ಸಿ.ಬಾಲಕೃಷ್ಣ ಹಾಗೂ ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿದರು.

ಸಚಿವರಾದ ಗೋವಿಂದ ಕಾರಜೋಳ, ಸಿ.ಪಿ.ಯೋಗೀಶ್ವರ್, ಶಾಸಕರಾದ ಎಂ.ವಿ.ನಾಗರಾಜು, ಸುರೇಶ್‌ಗೌಡ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎ. ಮಂಜುನಾಥ್, ಜಿ.ಪಂ.ಸದಸ್ಯರಾದ ಕೆ.ಮುದ್ದುರಾಜ ಯಾದವ್, ಹಂಸಕುಮಾರಿ, ತಾ.ಪಂ ಅಧ್ಯಕ್ಷ ರಾಮಣ್ಣಉಪಸ್ಥಿತರಿದ್ದರು.

`ಜಿಲ್ಲೆಗೆ ಎರಡು ವಿ.ವಿ~
ಮಾಗಡಿ: ಸರ್ಕಾರ ರಾಮನಗರದಲ್ಲಿ ಆರೋಗ್ಯ ವಿವಿ, ಮಾಗಡಿ ತಾಲ್ಲೂಕಿನಲ್ಲಿ ಸಂಸ್ಕೃತ ವಿವಿ ಸ್ಥಾಪಿಸಲು ಕ್ರಮ ಕೈಗೊಂಡಿದೆ ಎಂದು ಸಿಎಂ ಸದಾನಂದ ಗೌಡ ತಿಳಿಸಿದರು.

ಇಲ್ಲಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,   ಆರೋಗ್ಯ ವಿವಿಗಾಗಿ  150 ಎಕರೆ ಭೂಮಿ ಸ್ವಾಧೀನವಾಗಿದೆ.  ಅದೇ ರೀತಿ ಸಂಸ್ಕೃತ ವಿವಿ ಸ್ಥಾಪನೆಗೆ ರೂ.2.76 ಕೋಟಿ ಬಿಡುಗಡೆಗಾಗಿ  ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಈ ವಿ.ವಿ ನಿರ್ಮಾಣಕ್ಕೆ 100 ಎಕರೆ ಭೂಮಿಯನ್ನು ಕಾಯ್ದಿರಿಸಲಾಗಿದೆ ಎಂದರು.

`ಹೇಮಾವತಿ ನೀರು; ತಿಂಗಳಲ್ಲಿ ಚರ್ಚೆ~
ಮಾಗಡಿಗೆ ಹೇಮಾವತಿ ನೀರು ತರುವ ಕುರಿತು ಹಾಗೂ ಬಿಡದಿಯ ಬೈರಮಂಗಲ ಸುತ್ತಮುತ್ತಲಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಸಂಬಂಧ ಒಂದು ತಿಂಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಮತ್ತು ಅಧಿಕಾರಿಗಳ ಸಭೆ ನಡೆಸಿ ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಸದಾನಂದ ಗೌಡ ಅವರ ಇದೇ ಸಂದರ್ಭದಲ್ಲಿ ಆಶ್ವಾಸನೆ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.