ADVERTISEMENT

ದೇಶದಲ್ಲಿ ವಿದ್ಯುತ್ ಅಭಾವದ ಸಮಸ್ಯೆ ಇಲ್ಲ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2012, 19:30 IST
Last Updated 10 ಅಕ್ಟೋಬರ್ 2012, 19:30 IST
ದೇಶದಲ್ಲಿ ವಿದ್ಯುತ್ ಅಭಾವದ ಸಮಸ್ಯೆ ಇಲ್ಲ
ದೇಶದಲ್ಲಿ ವಿದ್ಯುತ್ ಅಭಾವದ ಸಮಸ್ಯೆ ಇಲ್ಲ   

ಬೆಂಗಳೂರು: `ವಿದ್ಯುತ್ ಅಭಾವವಿರುವುದರಿಂದ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸರ್ಕಾರ ನೆಪ ಹೇಳುತ್ತಿದೆ. ಆದರೆ ವಾಸ್ತವವಾಗಿ ದೇಶದಲ್ಲಿ ವಿದ್ಯುತ್ ಅಭಾವದ ಸಮಸ್ಯೆಯಿಲ್ಲ~ ಎಂದು ವಿದ್ಯುತ್ ವಿಷಯ ತಜ್ಞ ಶಂಕರ ಶರ್ಮ ಅಭಿಪ್ರಾಯಪಟ್ಟರು. 
 
ಮಿತ್ರ ಮಾಧ್ಯಮವು ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ, ವಿದ್ಯುತ್ ಪೂರೈಕೆಯಲ್ಲಿ ಆಗುತ್ತಿರುವ ಲೋಪದೋಷಗಳು ವಿದ್ಯುತ್ ಅಭಾವಕ್ಕೆ ಕಾರಣವಾಗಿದೆ. ಇದರಿಂದ ದೇಶದಲ್ಲಿ ಶೇ 35ಕ್ಕೂ ಹೆಚ್ಚಿನ ಮಂದಿಗೆ ವಿದ್ಯುತ್ ಸೌಲಭ್ಯ ದೊರೆತಿಲ್ಲ ಎಂದು ಅವರು ತಿಳಿಸಿದರು.

`ದೇಶದಲ್ಲಿ ಸುಮಾರು ಹದಿನೈದಕ್ಕೂ ಹೆಚ್ಚು ಕಲ್ಲಿದ್ದಲು ಸ್ಥಾವರಗಳನ್ನು ನಿರ್ಮಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಕಲ್ಲಿದ್ದಲು ಪೂರೈಕೆ ಸರಳವೆಂದು ಸರ್ಕಾರ ತಪ್ಪು ಭಾವಿಸಿದೆ. ಅಮೆರಿಕ ಸೇರಿದಂತೆ ಇತರೆ ಮುಂದುವರಿದ ರಾಷ್ಟ್ರಗಳು ಕಲಿದ್ದಲು ಸ್ಥಾವರ ಸ್ಥಾಪನೆಯನ್ನು ವಿರೋಧಿಸುತ್ತಿರುವಾಗ ಕಲ್ಲಿದ್ದಲು ಪೂರೈಕೆ ಹೇಗೆ ಸಾಧ್ಯ?~ ಎಂದು ಪ್ರಶ್ನಿಸಿದರು.

`ತಿಂಗಳಿಗೆ ಪ್ರತಿ ಕುಟುಂಬಕ್ಕೆ ಕನಿಷ್ಠ ಮೂವತ್ತು ಯೂನಿಟ್ ವಿದ್ಯುತ್ ಪೂರೈಕೆ ಮಾಡಬಹುದು. ದಿನದಿಂದ ದಿನಕ್ಕೆ ಇತರೆ ಅಗತ್ಯ ವಸ್ತುಗಳ ದರ ಏರಿಸಿದಂತೆ ವಿದ್ಯುತ್ ದರ ಏರಿಕೆ ಮಾಡುವ ಅಗತ್ಯವಿಲ್ಲ. ಕಡಿಮೆ ದರದಲ್ಲಿಯೇ ವಿದ್ಯುತ್ ಉತ್ಪಾದಿಸಲು ಸಾಧ್ಯವಿದೆ~ ಎಂದು ತಿಳಿಸಿದರು. 

`ಸಾಮಾಜಿಕ ಸಮಸ್ಯೆಗಳಿಗೆ ಹತ್ತು ವರುಷಗಳ ತರುವಾಯ ಪರಿಹಾರ ಹುಡುಕಿಕೊಳ್ಳಬಹುದು. ಆದರೆ ಪರಿಸರ ವಿಚಾರದಲ್ಲಿ ಅಸಡ್ಡೆ ತೋರುವಂತಿಲ್ಲ. 2003ರ ಭಾರತೀಯ ವಿದ್ಯುತ್‌ಚ್ಛಕ್ತಿ ಕಾಯ್ದೆ ಯಾವ ರಾಜ್ಯದಲ್ಲೂ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ~ ಎಂದು ಬೇಸರ ವ್ಯಕ್ತಪಡಿಸಿದರು.

`ಗ್ರಾಮಗಳಲ್ಲಿಯೇ ಕಲ್ಲಿದ್ದಲು, ಅಣು ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಿ ಗ್ರಾಮೀಣ ಜನರಿಗೆ ದಿನಕ್ಕೆ ಕನಿಷ್ಠ 2 ಗಂಟೆಗಳ ಕಾಲ ಸಮರ್ಪಕ ವಿದ್ಯುತ್ ಪೂರೈಕೆ ಮಾಡದೇ ಇರುವುದು ಪ್ರಜಾಪ್ರಭುತ್ವ ನೀತಿಗೆ ವಿರುದ್ಧವಾಗಿದೆ. ಸರ್ಕಾರ ಯಾವುದೇ ಯೋಜನೆಯನ್ನು ಜಾರಿಗೊಳಿಸಬೇಕಾದರೆ ಸಾರ್ವಜನಿಕ ಚರ್ಚೆಗೆ ಒಳಪಡಿಸಬೇಕು. ಈ ವಿಚಾರದಲ್ಲಿ ರಾಜ್ಯ ಸಾಕಷ್ಟು ಹಿಂದಿದೆ~ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಕಾರ್ಯಕಾರಿ ಅಧ್ಯಕ್ಷ ವೈ.ಬಿ. ರಾಮಕೃಷ್ಣ, `ದೇಶದಿಂದ 1.5 ಟನ್ ಥೋರಿಯಂ ಅಕ್ರಮವಾಗಿ ರಫ್ತು ಮಾಡಲಾಗಿದ್ದು, ಈವರೆಗೆ ಬೆಳಕಿಗೆ ಬಂದ ಎಲ್ಲ ಹಗರಣಗಳಿಗೂ ದೊಡ್ಡಣ್ಣನಂತೆ ಇರುವ ಈ ಹಗರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯಬೇಕು~ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಶರ್ಮ ಅವರ `ಇಂಟಿಗ್ರೇಟೆಡ್ ಪವರ್ ಪಾಲಿಸಿ~ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT