ADVERTISEMENT

ದೇಶದಲ್ಲಿ 4 ಕೋಟಿ ಅಕ್ರಮ ಶಸ್ತ್ರಾಸ್ತ್ರ!

ಲೋಕಾಯುಕ್ತ ನ್ಯಾಯಮೂರ್ತಿ ವೈ. ಭಾಸ್ಕರ್‌ರಾವ್ ಆತಂಕ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 19:57 IST
Last Updated 5 ಸೆಪ್ಟೆಂಬರ್ 2013, 19:57 IST

ಬೆಂಗಳೂರು: ಭಾರತಕ್ಕೆ ನಾಲ್ಕು ಕೋಟಿ ಶಸ್ತ್ರಾಸ್ತ್ರಗಳು ಅಕ್ರಮವಾಗಿ ರವಾನೆಯಾಗಿವೆ. ಇವುಗಳಲ್ಲಿ ಎಕೆ-47, ಎಕೆ-56, ಮಷಿನ್‌ಗನ್‌ಗಳು ಸಹ ಸೇರಿವೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ವೈ. ಭಾಸ್ಕರ್‌ರಾವ್ ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ನ್ಯಾಯಾಂಗ ಅಕಾಡೆಮಿ ಹಾಗೂ ಪ್ರಾಸಿಕ್ಯೂಷನ್ ಮತ್ತು ವ್ಯಾಜ್ಯಗಳ ಇಲಾಖೆ ಆಶ್ರಯದಲ್ಲಿ ಗುರುವಾರ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಿಗೆ (ಸರ್ಕಾರಿ ವಕೀಲರಿಗೆ) ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆ (ಎನ್‌ಸಿಆರ್‌ಬಿ) ವರದಿ ಉಲ್ಲೇಖಿಸಿ ದೇಶದಲ್ಲಿ ಹೆಚ್ಚುತ್ತಿರುವ ಅಪರಾಧಗಳ ಕುರಿತು ವಿವರಿಸಿದ ಅವರು, ನೇಪಾಳ, ಬಾಂಗ್ಲಾದೇಶ ಮುಂತಾದ ದೇಶಗಳಿಂದ ಅಕ್ರಮವಾಗಿ ಶಸ್ತ್ರಾಸ್ತ್ರಗಳು ರವಾನೆಯಾಗುತ್ತಿವೆ. ಈ ಅಕ್ರಮಗಳಿಗೆ ಕಡಿವಾಣ ಹಾಕದಿದ್ದರೆ ಗಂಭೀರ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ನುಡಿದರು.

ದೇಶದಲ್ಲಿ ಅಪರಾಧಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಪ್ರಬ್ಲಿಕ್ ಪ್ರಾಸಿಕ್ಯೂಟರ್‌ಗಳ ಜವಾಬ್ದಾರಿ ಹೆಚ್ಚಾಗಿದೆ. ಭ್ರಷ್ಟಾಚಾರ ಮತ್ತು ಹಿಂಸಾಚಾರ ಹೆಚ್ಚಾಗುತ್ತಿದೆ. ಕೊಲೆ ಪ್ರಕರಣಗಳು ಶೇಕಡಾ 237ರಷ್ಟು ಹೆಚ್ಚಾಗಿವೆ. ಅತ್ಯಾಚಾರ ಪ್ರಕರಣಗಳು ಶೇಕಡಾ 8ರಷ್ಟು ಹೆಚ್ಚಾಗಿವೆ. ವಿದ್ಯಾರ್ಥಿಗಳು, ಯುವಕರಿಂದ ಅಪರಾಧಗಳು ಹೆಚ್ಚುತ್ತಿವೆ. ಸೈಬರ್ ಅಪರಾಧಗಳು ಸಹ ಹೆಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ತರಬೇತಿ ಉದ್ಘಾಟಿಸಿದ ಕರ್ನಾಟಕ ನ್ಯಾಯಾಂಗ ಅಕಾಡೆಮಿ ಅಧ್ಯಕ್ಷ ಹಾಗೂ ಹೈಕೋರ್ಟ್ ನ್ಯಾಯಮೂರ್ತಿ ಎನ್. ಕುಮಾರ್, ಪ್ರಸ್ತುತ ಶಿಕ್ಷೆಗೆ ಒಳಗಾಗುವ ಆರೋಪಿಗಳ ಸಂಖ್ಯೆ ಅತಿ ಕಡಿಮೆ. ಕೇವಲ ಶೇಕಡಾ 7ರಿಂದ 10ರಷ್ಟು ಪ್ರಮಾಣದಲ್ಲಿ ಮಾತ್ರ ಆರೋಪಿಗಳಿಗೆ ಶಿಕ್ಷೆಯಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ತ್ವರಿತಗತಿಯಲ್ಲಿ ಪ್ರಾಮಾಣಿಕವಾಗಿ ವಿಚಾರಣೆ ನಡೆಸುವ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಜವಾಬ್ದಾರಿ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳ (ಸರ್ಕಾರಿ ವಕೀಲರು) ಮೇಲಿದೆ ಎಂದು ಅಭಿಪ್ರಾಯಪಟ್ಟರು.

`ಸಾರ್ವಜನಿಕರು ನ್ಯಾಯಾಂಗ ವ್ಯವಸ್ಥೆ ಮೇಲೆ ಇನ್ನೂ ಅಪಾರ ವಿಶ್ವಾಸ ಇಟ್ಟುಕೊಂಡಿದ್ದಾರೆ. ಸಾರ್ವಜನಿಕ ವಲಯದಲ್ಲಿ ಭ್ರಷ್ಟಾಚಾರ ಮತ್ತು ಹಿಂಸಾಚಾರ ಅತಿ ಹೆಚ್ಚು ಚರ್ಚೆಗೆ ಒಳಗಾಗುತ್ತಿದೆ. ನಾವು ಆತ್ಮಾವಲೋಕನ ಮಾಡಿಕೊಂಡು ಸಮಾಜ ಎದುರಿಸುತ್ತಿರುವ ಸವಾಲುಗಳಿಗೆ ಮುಖಾಮುಖಿಯಾಗಬೇಕು. ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು, ಪೊಲೀಸರು ಮತ್ತು ಬೆರಳಚ್ಚು ತಜ್ಞರು ಕೈಜೋಡಿಸಿದರೆ ಮಾತ್ರ ತ್ವರಿತಗತಿಯಲ್ಲಿ ನ್ಯಾಯದಾನ ನೀಡಲು ಸಾಧ್ಯ. ಸಾರ್ವಜನಿಕರ ಆಕ್ರೋಶ, ಅಸಮಾಧಾನಕ್ಕೆ ಅವಕಾಶ ನೀಡದಂತೆ ನ್ಯಾಯಾಂಗ ವ್ಯವಸ್ಥೆ ಕಾರ್ಯನಿರ್ವಹಿಸಲು ಪ್ರಬ್ಲಿಕ್ ಪ್ರಾಸಿಕ್ಯೂಟರ್‌ಗಳ ಪಾತ್ರ ಮುಖ್ಯವಾಗಿದೆ' ಎಂದು ನುಡಿದರು.

ಕಾನೂನು ಅಧಿಕಾರಿ ಟಿ. ನಾಗರಾಜರೆಡ್ಡಿ ಮಾತನಾಡಿ, ಪ್ರಾಸಿಕ್ಯೂಷನ್ ಇಲಾಖೆಯಲ್ಲಿ 133 ಪಬ್ಲಿಕ್ ಪ್ರಾಸಿಕ್ಯೂಟರ್‌ಗಳ ಮತ್ತು 15 ಹಿರಿಯ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳ ಹುದ್ದೆಗಳು ಹಾಗೂ 319 `ಸಿ' ಮತ್ತು 342 `ಡಿ' ದರ್ಜೆ ಹುದ್ದೆಗಳು ಖಾಲಿ ಉಳಿದಿವೆ. 1987ರಿಂದ `ಸಿ' ಮತ್ತು `ಡಿ' ಹುದ್ದೆಗಳ ನೇಮಕಾತಿ ನಡೆದಿಲ್ಲ. ಈ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್.ಕೆ. ಪಟ್ನಾಯಕ್, ಪ್ರಾಸಿಕ್ಯೂಷನ್ ಮತ್ತು ವ್ಯಾಜ್ಯಗಳ ಇಲಾಖೆ ನಿರ್ದೇಶಕ ಚಂದ್ರಶೇಖರ್ ಜಿ. ಹಿರೇಮಠ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.