ಬೆಂಗಳೂರು: ಶಿಸ್ತಿನ ಹೆಜ್ಜೆಯ ಆ ಚಿತ್ತಾಪಹಾರಿ ಪಥ ಸಂಚಲನ ನೋಡುಗರ ಕಣ್ಣೆವೆಯ ಕೆಲಸವನ್ನು ಮರೆಸಿತ್ತು. ರಾಷ್ಟ್ರಭಕ್ತಿಯ ತುಡಿತ ಅಲ್ಲಿ ಕುಳಿತುಕೊಳ್ಳಲು ಬಿಡದೆ ಕಾಡಿತ್ತು. ಪ್ರತಿ ಕ್ಷಣಕ್ಕೊಮ್ಮೆ ಮಂದ ಮಾರುತದಲ್ಲಿ ತೇಲಿ ಬರುತ್ತಿದ್ದ ಕರತಾಡನದ ಪ್ರತಿಧ್ವನಿ ಮನದ ಮೂಲೆಯಲ್ಲಿ ದೇಶಪ್ರೇಮದ ಬಿಸಿ ಉದ್ದೀಪಿಸಿತ್ತು.
ನಗರದ ಮಾಣೆಕ್ ಷಾ ಪರೇಡ್ ಮೈದಾನ ಮಂಗಳವಾರ ಜರುಗಿದ ಗಣರಾಜ್ಯೋತ್ಸವ ಸಮಾರಂಭ ಶಿಸ್ತು, ಶೌರ್ಯ, ಸಾಹಸ, ಮನಸೆಳೆಯುವ ನೃತ್ಯ ರೂಪಕಗಳಿಂದ ಜನಮನ ಸೂರೆಗೊಂಡಿತು.ನಿಗದಿತ ಸಮಯಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಧ್ವಜಾರೋಹಣ ಮಾಡುತ್ತಿದ್ದಂತೆ, ವಾಯುಪಡೆಯ ಹೆಲಿಕಾಪ್ಟರ್ ಮೈದಾನದ ಮೇಲೆ ಮಾಡಿದ ಪುಷ್ಪವೃಷ್ಟಿ ಉತ್ಸವಕ್ಕೆ ಉಲ್ಲಸಿತ ಚಾಲನೆ ನೀಡಿತು.
ರಾಷ್ಟ್ರಗೀತೆ ಮೊಳಗಿದ ನಂತರ ಪರೇಡ್ ಪರಿವೀಕ್ಷಣೆ ಮತ್ತು ಗೌರವ ರಕ್ಷೆ ಸ್ವೀಕಾರಕ್ಕಾಗಿ ರಾಜ್ಯಪಾಲರು ತೆರೆದ ಜೀಪಿನಲ್ಲಿ ಮೈದಾನ ಸುತ್ತು ಹಾಕಿದ ವೇಳೆ ಮೇಲಿಂದ ಮೇಲೆ ಚಪ್ಪಾಳೆಯ ಸದ್ದು ಕೇಳಿಬಂತು. ರಾಜ್ಯಪಾಲರ ಭಾಷಣದ ತರುವಾಯ ಪರೇಡ್ ಕಮಾಂಡರ್ ಲೆಪ್ಟಿನೆಂಟ್ ಕರ್ನಲ್ ಹೃಷಿಕೇಶ್ ಸಾರಥ್ಯದಲ್ಲಿ ಸಾಗಿದ 56 ತುಕಡಿಗಳ ಕವಾಯತು ಇಡೀ ಮೈದಾನಕ್ಕೆ ಹೊಸ ಬಗೆಯದೇ ಆದ ರಂಗು ತುಂಬಿತ್ತು.
ಮೂರು ಸೇನೆಗಳ ಪಡೆಗಳು, ಗಡಿ ಭದ್ರತಾ ಪಡೆ, ರಾಜ್ಯ ಕೈಗಾರಿಕಾ ಭದ್ರತಾ ಪಡೆ, ಅಗ್ನಿಶಾಮಕ ದಳ, ಗೃಹ ರಕ್ಷಕ ದಳ, ಪೊಲೀಸ್, ಪೊಲೀಸ್ ಬ್ಯಾಂಡ್, ಶ್ವಾನದಳ, ಟ್ರಾಫಿಕ್ ವಾರ್ಡನ್, ಎನ್‌ಸಿಸಿ, ಎನ್‌ಎಸ್‌ಎಸ್ ಜತೆಗೆ, ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳ ತುಕಡಿಗಳು ಪಥ ಸಂಚಲನದಲ್ಲಿ ಹೆಜ್ಜೆ ಹಾಕಿದವು.
ನಂತರ ವಿವಿಧ ಶಾಲೆಗಳು ಮಕ್ಕಳು ಪ್ರದರ್ಶಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಕೆಲಕಾಲ ನೋಡುಗರನ್ನು ಕಟ್ಟಿಹಾಕಿದ್ದವು.
ಕಗ್ಗಲಿಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯ 560 ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ‘ವಿವಿಧತೆಯಲ್ಲಿ ಏಕತೆ’ ಎಂಬ ದೃಶ್ಯ ರೂಪಕ ದೇಶದಲ್ಲಿರುವ ವಿವಿಧ ಕಲಾ ಪ್ರಕಾರಗಳನ್ನು ಮೈದಾನದಲ್ಲಿ ಪ್ರದರ್ಶಿಸಿತು.
ಅಬ್ಬಿಗೆರೆಯ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ‘ಪುಣ್ಯವಂತರು ನಾವು ಭಾರತೀಯರು’ ರೂಪಕ ದೇಶದ ವೀರ ಸೇನಾನಿಗಳು, ಸಂತರು, ಋಷಿಮನಿಗಳ ಪರಂಪರೆಯನ್ನು ಅನಾವರಣಗೊಳಿಸುತ್ತಲೇ ಭಾರತೀಯರಾಗಿ ಹುಟ್ಟಿದ ನಾವು ಗರ್ವದೊಂದಿಗೆ ಹೆಮ್ಮೆ ಪಡಬೇಕು ಎನ್ನುವ ಸಂದೇಶ ಸಾರಿತು.
ಗಡಿ ಕಾಯುವ ಯೋಧರು, ಅನ್ನ ನೀಡುವ ರೈತರನ್ನು ಗೌರವಿಸಬೇಕಾದದ್ದು ನಮ್ಮ ಕರ್ತವ್ಯ ಎಂದು ಅರಿವು ಮೂಡಿಸುವಲ್ಲಿ ಯಶವಂತಪುರದ ರಾಜ ರಾಜೇಶ್ವರಿ ಆಂಗ್ಲ ಶಾಲೆಯ ವಿದ್ಯಾರ್ಥಿಗಳು ತೋರಿದ ‘ಜೈ ಜವಾನ್, ಜೈ ಕಿಸಾನ್’ ಪ್ರದರ್ಶನ ಯಶಸ್ವಿಯಾಯಿತು.
ಬನ್ನೇರುಘಟ್ಟ ರಸ್ತೆಯ ಎನ್‌ಬಿಎನ್ ವಿದ್ಯಾಮಂದಿರ ಮತ್ತು ಕದಿರೇನ ಹಳ್ಳಿಯ ಶ್ರೀಶೈಲ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ‘ಕ್ರಾಂತಿ ಸೂರ್ಯ ಅಂಬೇಡ್ಕರ್’ ದೃಶ್ಯ ರೂಪಕ ಅಸ್ಪೃಶ್ಯತೆಯ ಹೀನ ಮುಖವನ್ನು ಮೈದಾನದುದ್ದಕ್ಕೂ ಪರಿಣಾಮಕಾರಿಯಾಗಿ ಕಣ್ಣಿಗೆ ಕಟ್ಟುವಂತೆ ಬಿಚ್ಚಿಟ್ಟು ಪ್ರಶಂಸೆಗೆ ಪಾತ್ರವಾಯಿತು.
ಮೈನವಿರೇಳಿಸಿದ ‘ಟಾರ್ನೆಡೋಸ್’: ಕೊನೆಯದಾಗಿ ಮೈದಾನಕ್ಕೆ ಇಳಿದ ಆರ್ಮಿ ಸರ್ವೀಸ್ ಕೋರ್ (ಎಎಸ್‌ಸಿ) ಸೆಂಟರ್ ಅಂಡ್ ಕಾಲೇಜಿನ ಸೈನಿಕರ ‘ಟಾರ್ನೆಡೋಸ್’ ಬೈಕ್ ತಂಡ ಪ್ರದರ್ಶಿಸಿದ ವಿವಿಧ ಸಾಹಸಗಳು ನೋಡುಗರ ಮೈನವಿರೇಳಿಸಿದವು.
ಬುಲೆಟ್ ಬೈಕ್‌ಗಳ ಮೇಲೆ ಯೋಧರು ಕ್ಷಣ ಕ್ಷಣಕ್ಕೊಮ್ಮೆ ತೋರುತ್ತಿದ್ದ ವಿವಿಧ ರೀತಿಯ ಕಸರತ್ತುಗಳು ಪ್ರೇಕ್ಷಕರ ಮೈಜುಮ್ಮೆನಿಸಿದವು. ಜತೆಗೆ, ಜೋಕರ್‌ಗಳ ಅಣಕು ಸಾಹಸಗಳು ಕಚಗುಳಿಯಿಟ್ಟವು.
ಬೈಕ್‌ಗಳ ಮೇಲೆ ರಚನೆಯಾದ ಮಾನವ ಪಿರಮಿಡ್, ಹೂವಿನ ಹಾಗೂ ಮರದ ಮಾದರಿಗಳು ನೆರೆದವರನ್ನು ಚಕಿತಗೊಳಿಸಿದವು. ಟ್ಯೂಬ್‌ಲೈಟ್ ಜಂಪ್, ಗೋಡೆ ಜಿಗಿತ ಹಾಗೂ ಬೆಂಕಿ ಚಕ್ರದ ಜಿಗಿತದ ಕಸರತ್ತುಗಳು ನೋಡುಗರನ್ನು ನಿಬ್ಬೆರಗಾಗಿಸಿದವು.
ಸಮಾರಂಭದಲ್ಲಿ ರಾಜ್ಯಪಾಲರು ವಿವಿಧ ಇಲಾಖೆಗಳಲ್ಲಿ ಉತ್ತಮ ಸಾಧನೆ ಮಾಡಿದ ಅಧಿಕಾರಿಗಳಿಗೆ ಮತ್ತು ಪಥ ಸಂಚಲನದಲ್ಲಿ ಭಾಗವಹಿಸಿದ ತಂಡಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪೊಲೀಸ್ ಬ್ಯಾಂಡ್ ತಂಡ ನುಡಿಸಿದ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮಕ್ಕೆ ತೆರೆಬಿತ್ತು.
ಭಾರಿ ಭದ್ರತೆ: ನಗರದಲ್ಲಿ ಕೆಲ ದಿನಗಳ ಹಿಂದೆ ಶಂಕಿತ ಉಗ್ರರನ್ನು ವಶಕ್ಕೆ ಪಡೆದ ಕಾರಣದಿಂದಾಗಿ ಮೈದಾನಕ್ಕೆ ವಿಶೇಷ ಭದ್ರತೆ ಕಲ್ಪಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.