ADVERTISEMENT

‘ದೊಡ್ಡರಂಗೇಗೌಡರ ಕಾವ್ಯದ ಸೊಗಸು ಅನನ್ಯ’

ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ: ಹಿರಿಯ ಕವಿ ನಿಸಾರ್‌ ಅಹ್ಮದ್‌ ಬಣ್ನನೆ

​ಪ್ರಜಾವಾಣಿ ವಾರ್ತೆ
Published 19 ಮೇ 2018, 19:30 IST
Last Updated 19 ಮೇ 2018, 19:30 IST
‘ಗಾನಯಾನ’ ಕವನ ಸಂಕಲವನ್ನು ಸಾಹಿತಿ ಕೆ.ಎಸ್‌.ನಿಸಾರ್‌ ಅಹ್ಮದ್‌ ಬಿಡುಗಡೆ ಮಾಡಿದರು. ಸಾಹಿತಿಗಳಾದ ಡಾ.ಎಚ್‌.ಎಸ್‌.ವೆಂಕಟೇಶ್‌ ಮೂರ್ತಿ, ದೊಡ್ಡರಂಗೇಗೌಡ, ಕಸಾಪ ಅಧ್ಯಕ್ಷ ಮನು ಬಳಿಗಾರ್, ಚಿತ್ರ ನಟ ಸುಚೇಂದ್ರ ಪ್ರಸಾದ್‌, ಪ್ರಕಾಶಕ ಛಾಯಾಪತಿ ಇದ್ದರು– ಪ್ರಜಾವಾಣಿ ಚಿತ್ರ
‘ಗಾನಯಾನ’ ಕವನ ಸಂಕಲವನ್ನು ಸಾಹಿತಿ ಕೆ.ಎಸ್‌.ನಿಸಾರ್‌ ಅಹ್ಮದ್‌ ಬಿಡುಗಡೆ ಮಾಡಿದರು. ಸಾಹಿತಿಗಳಾದ ಡಾ.ಎಚ್‌.ಎಸ್‌.ವೆಂಕಟೇಶ್‌ ಮೂರ್ತಿ, ದೊಡ್ಡರಂಗೇಗೌಡ, ಕಸಾಪ ಅಧ್ಯಕ್ಷ ಮನು ಬಳಿಗಾರ್, ಚಿತ್ರ ನಟ ಸುಚೇಂದ್ರ ಪ್ರಸಾದ್‌, ಪ್ರಕಾಶಕ ಛಾಯಾಪತಿ ಇದ್ದರು– ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಬಿರುಬೇಸಿಗೆಯಲ್ಲಿ ಎಳನೀರು ಕುಡಿದಷ್ಟು ಸೊಗಸಾಗಿ ದೊಡ್ಡರಂಗೇಗೌಡರು ಪದ್ಯಗಳನ್ನು ಬರೆಯುತ್ತಾರೆ. ರೈತ ಕಾಳಜಿಯೊಂದಿಗೆ ಅವರು ಬರೆದಿರುವ ಗೀತೆಗಳು ಅನನ್ಯವಾಗಿವೆ’ ಎಂದು ಕವಿ ಕೆ.ಎಸ್‌. ನಿಸಾರ್‌ ಅಹ್ಮದ್ ಅಭಿಪ್ರಾಯಪಟ್ಟರು.

‘ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್‌ ವರ್ಲ್ಡ್‌ ಕಲ್ಚರ್‌’ ಸಭಾಂಗಣದಲ್ಲಿ ಶನಿವಾರ ದೊಡ್ಡರಂಗೇಗೌಡರ ‘ಗಾನಯಾನ’ ಕವನ ಸಂಕಲನ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಕವನ ಸಂಕಲನದಲ್ಲಿ 213 ಭಾವಗೀತೆಗಳಿವೆ. ಎಲ್ಲವೂ ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು, ಸದಭಿರುಚಿ ಹೊಂದಿವೆ. ಆದರೆ, ಗೋವಿನ ಬಗ್ಗೆ ಒಂದು ಕೆಟ್ಟ ಕವನ ಬರೆದಿದ್ದಾರೆ. ಇದು ಯಾವುದೋ ಪಕ್ಷದ ಪ್ರಣಾಳಿಕೆ ಇದ್ದಂತಿದೆ. ಇದನ್ನು ಯಾಕೆ ಬರೆದರೋ ಗೊತ್ತಿಲ್ಲ’ ಎಂದು ನೇರವಾಗಿ ಹೇಳಿದರು.

ADVERTISEMENT

‘ಎಚ್‌.ಎಸ್‌. ವೆಂಕಟೇಶ್‌ಮೂರ್ತಿ ನನ್ನ ವಿದ್ಯಾರ್ಥಿ. ಅವನು ಅತ್ಯುತ್ತಮ ಸಾಹಿತ್ಯ ಕೃಷಿ ಮಾಡಿದ್ದಾನೆ. ಆದರೆ, ಅಮೃತ ವಾಹಿನಿ ಸಿನಿಮಾ
ದಲ್ಲಿ ನಟನೆ ಮಾಡಲು ಮುಂದಾಗಿದ್ದಾನೆ. ಎಲ್ಲರೂ ಸಿನಿಮಾ ಕಡೆ ವಾಲಿದರೆ ಬರವಣಿಗೆ ಮಾಡುವವರು ಯಾರು?’ ಎಂದು ಆತಂಕ ವ್ಯಕ್ತಪಡಿಸಿದರು.

‘ದೊಡ್ಡರಂಗೇಗೌಡರು ಕನ್ನಡ ನಾಡು– ನುಡಿ, ಸಿನಿಮಾ ನಟರು ಹಾಗೂ ದೊಡ್ಡ ವ್ಯಕ್ತಿಗಳ ಬಗ್ಗೆ ಕವಿತೆಗಳನ್ನು ಬರೆದಿದ್ದಾರೆ. ನೇಗಿಲ ನೆಂಟ, ಶ್ರಮ ತಪಸ್ವಿ ಎನ್ನುವ ಮಹತ್ತರ ಪದಗಳನ್ನು ಅವರ ಕವಿತೆಗಳಲ್ಲಿ ಬಳಸಿದ್ದಾರೆ’ ಎಂದರು.

‘ನಾವು ಹನುಮಂತನಗರದ ರಮಾಂಜನೇಯ ದೇವಸ್ಥಾನದಲ್ಲಿ ಕೂತು ಗಂಟೆಗಟ್ಟಲೇ ಸಾಹಿತ್ಯದ ಕುರಿತು ಚರ್ಚೆ ಮಾಡುತ್ತಿದ್ದೆವು. ದೊಡ್ಡರಂಗೇಗೌಡರ ಜೊತೆಗಿನ ನಂಟು 35 ವರ್ಷಗಳದ್ದು. ನಿಸಾರ್‌ ಅಹ್ಮದ್‌ ಅವರು ಚಿಕ್ಕವರನ್ನು ಬೆಳೆಸುವ ಪರಂಪರೆಗೆ ನಾಂದಿ ಹಾಡಿದವರು’ ಎಂದು ಸಾಹಿತಿ ಎಚ್‌.ಎಸ್‌. ವೆಂಕಟೇಶ್‌ ಮೂರ್ತಿ ನೆನಪಿನ ಬಿತ್ತಿ ಬಿಚ್ಚಿದರು.

‘ನಾನು ಹಾಗೂ ಗೌಡರು ಸಮಾನ ಮನಸ್ಕರು. ಇಬ್ಬರೂ ಪತ್ನಿ ವಿಯೋಗಿಗಳು. ಇಬ್ಬರ ಪತ್ನಿಯ ಹೆಸರೂ ರಾಜೇಶ್ವರಿ ಎನ್ನುವುದು ವಿಶೇಷ. ಮನುಷ್ಯ ಕಹಿ ಘಟನೆಗಳನ್ನೂ ನೆನೆಯುವುದಕ್ಕೆ ಇಷ್ಟ ಪಡುತ್ತಾನೆ. ಇದು ನನಗೆ ಹೆಚ್ಚು ಕಾಡುವ ಸಂಗತಿಗಳಲ್ಲಿ ಒಂದು. ಬಿ.ಜಿ.ಎಲ್‌ ಸ್ವಾಮಿ ಅವರು ಒಂದು ಕಾರ್ಯಕ್ರಮ
ದಲ್ಲಿ,  ‘ತೇರಾನೇರಿ ಅಂಬರದಾಗೆ ನೇಸರ ನಗುತಾನೆ... ಈ ಕವಿತೆ ಯಾರಪ್ಪಾ ಬರೆದಿರೋದು, ಎಷ್ಟು ಸುಂದರವಾಗಿ ಬರೆದಿದ್ದಾರೆ ಎಂದು ನನ್ನನ್ನು ಕೇಳಿದರು. ಅದನ್ನು ಗೌಡರು ಬರೆದಿರೋದು ಎಂದು ಹೆಮ್ಮೆಯಿಂದ ಹೇಳಿದ್ದೆ’ ಎಂದು ಹಳೆಯ ಘಟನೆಗಳನ್ನು ಮೆಲುಕು ಹಾಕಿದರು.

‘ನಮ್ಮ ಗುರುಗಳು (ನಿಸಾರ್‌ ಅಹ್ಮದ್‌) ನಾನು ಸಿನಿಮಾ ರಂಗಕ್ಕೆ ಹೋಗಿದ್ದೇನೆ ಎಂದರು. ನಮ್ಮ ಮನೆ ಶಾಶ್ವತ. ನೆಂಟರ ಮನೆ ಯಾವತ್ತಿಗೂ ತಾತ್ಕಾಲಿಕ. ಸಿನಿಮಾ ನನ್ನ ಕ್ಷೇತ್ರ ಅಲ್ಲ. ಅಲ್ಲಿಗೆ ನಾನು ಕೇವಲ ಅತಿಥಿಯಷ್ಟೇ’ ಎಂದು ಹೇಳಿ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದರು.

ಭಾವುಕ ಕ್ಷಣ ....
ಕಾರ್ಯಕ್ರಮದಲ್ಲಿ ದೊಡ್ಡರಂಗೇಗೌಡರ ಕವಿತೆಯೊಂದನ್ನು ಆನಂದ ಮಾದಲಗೆರೆ ಅವರು ಹಾಡುವಾಗ ಸಭಿಕರು ಕಣ್ಣೀರಿಟ್ಟ ಭಾವುಕ ಕ್ಷಣಕ್ಕೆ ಸಭಾಂಗಣ ಸಾಕ್ಷಿಯಾಯಿತು.

‘ಇನ್ನೆಲ್ಲಿ ನನ್ನ ಜೀವ ಜೀವದ ಗೆಳತಿ..ಆಗಿ ಹೋದಳು ಇಂದು ಪ್ರೀತಿಯ ಪ್ರಣತಿ.. ಎದ್ದು ಬರಬಾರದೆ ಆತ್ಮಸಖಿ ನೀನು’ ಎಂದು ದೊಡ್ಡರಂಗೇಗೌಡರು ತಮ್ಮ ಪತ್ನಿಯ ಸಾವಿನ ಸಂದರ್ಭ ನೆನೆದು ಬರೆದಿರುವ ಕವಿತೆಯನ್ನು ಸಂಗೀತಕಾರರು ಅತ್ಯುತ್ತಮ ರಾಗ ಸಂಯೋಜನೆಯೊಂದಿಗೆ ಹಾಡಿದರು. ಆಗ ಅಲ್ಲಿ ಸೇರಿದ್ದ ಸಭಿಕರ ಕಣ್ಣಲ್ಲಿ ನೀರು ತುಂಬಿಕೊಂಡಿತು.

ಕೆಲವರು ತಮ್ಮ ಆಪ್ತರನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತರು. ‘ಎಲ್ಲಿಗೆ ಬಂತಯ್ಯಾ ಕೇಡಿನ ಕಲಿಗಾಲ..ಎಲ್ಲಾ ಇದ್ದೂ ಬರಗಾಲ..ಲೋಕಕೆ ಅನ್ನವನು ತಾ ನೀಡಿಯೂ ಬವಣೆಯಲಿ’ ಎಂದು ರೈತರ ಬಗ್ಗೆ ಬರೆದ ಕವಿತೆಗಳನ್ನು ಅವರು ಹಾಡಿದರು.

ಗಣೇಶ್ ಭಟ್ ಅವರು ದೊಡ್ಡರಂಗೇಗೌಡರ ರಚನೆಯ ಪ್ರಸಿದ್ಧ ಕವಿತೆಗಳನ್ನು ಕೊಳಲಿನಲ್ಲಿ ನುಡಿಸಿದಾಗ ಪ್ರೇಕ್ಷಕರು ಚಪ್ಪಾಳೆ ತಟ್ಟಿ, ಎದ್ದು ನಿಂತು ಗೌರವ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.