ADVERTISEMENT

ಕೇಂದ್ರ ನಗರ ಪಾಲಿಕೆಯಲ್ಲಿ ‘ಗುಂಡಿ ಮುಕ್ತ ರಸ್ತೆಗಳು’ ಎಂದು ಘೋಷಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 23:59 IST
Last Updated 29 ಸೆಪ್ಟೆಂಬರ್ 2025, 23:59 IST
ದ್ವಿಚಕ್ರ ವಾಹನದಲ್ಲಿ ಸಂಚರಿಸಿದ ರಾಜೇಂದ್ರ ಚೋಳನ್‌ ಅವರು ರಸ್ತೆ ಬದಿಯ ತ್ಯಾಜ್ಯವನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು
ದ್ವಿಚಕ್ರ ವಾಹನದಲ್ಲಿ ಸಂಚರಿಸಿದ ರಾಜೇಂದ್ರ ಚೋಳನ್‌ ಅವರು ರಸ್ತೆ ಬದಿಯ ತ್ಯಾಜ್ಯವನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು   

ಬೆಂಗಳೂರು: ಚಿಕ್ಕಪೇಟೆ ಸುತ್ತಮುತ್ತ ಪ್ರದೇಶದಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸಿದ ಕೇಂದ್ರ ನಗರ ಪಾಲಿಕೆ (ಬಿಸಿಸಿಸಿ) ಆಯುಕ್ತ ರಾಜೇಂದ್ರ ಚೋಳನ್‌ ಅವರು, ಪಾಲಿಕೆ ವ್ಯಾಪ್ತಿಯಲ್ಲಿರುವ ರಸ್ತೆಗಳನ್ನು ‘ಗುಂಡಿ ಮುಕ್ತ’ ಎಂದು ಶೀಘ್ರವೇ ಘೋಷಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಬಿಸಿಸಿಸಿ ಮುಖ್ಯ ಎಂಜಿನಿಯರ್‌ ವಿಜಯಕುಮಾರ್‌ ಹರಿದಾಸ್‌ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಸುಮಾರು 25 ಕಿ.ಮೀ. ಸಂಚರಿಸಿದ ರಾಜೇಂದ್ರ ಚೋಳನ್‌, ಸ್ಥಳೀಯ ಸಮಸ್ಯೆಗಳ ಅವಲೋಕಿಸಿದರು.

ಚಿಕ್ಕಪೇಟೆ ವಿಭಾಗದ ವ್ಯಾಪ್ತಿಯ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳಲ್ಲಿ ಗುಂಡಿ ದುರಸ್ತಿ ಕಾಮಗಾರಿಗಳನ್ನು ಪರಿಶೀಲಿಸಿ, ಶೀಘ್ರವೇ ಎಲ್ಲ ರಸ್ತೆಗಳೂ ಗುಂಡಿಮುಕ್ತ ರಸ್ತೆಗಳಾಗಬೇಕು. ಈ ರಸ್ತೆಗಳಲ್ಲಿ ಜೀಬ್ರಾ ಕ್ರಾಸಿಂಗ್, ಕ್ಯಾಟ್ ಐಸ್, ಲೈನ್ ಮಾರ್ಕಿಂಗ್, ಕರ್ಬ್‌ಗಳಿಗೆ ಬಣ್ಣ ಹಚ್ಚುವ ಮೂಲಕ ಸಮಗ್ರ ಅಭಿವೃದ್ಧಿಪಡಿಸಬೇಕು. ನಂತರ ‘ಗುಂಡಿ ಮುಕ್ತ ರಸ್ತೆಗಳು’ ಎಂದು ಘೋಷಿಸಿ ಎಂಬುದಾಗಿ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ದೊಡ್ಡ ಬಸವಣ್ಣ ದೇವಸ್ಥಾನ ರಸ್ತೆ, ವಾಣಿವಿಲಾಸ್ ರಸ್ತೆ (ಪಶ್ಚಿಮ ದ್ವಾರ), ಶಂಕರ ಮಠ ರಸ್ತೆ, ಕೆ.ಆರ್. ರಸ್ತೆ, ನ್ಯಾಷನಲ್ ಕಾಲೇಜು (ಎಡಭಾಗ), ಆರ್.ವಿ. ರಸ್ತೆ, ಟೀಚರ್ಸ್ ಕಾಲೇಜು (ಎಡಭಾಗ), ಕನಕನಪಾಳ್ಯ ರಸ್ತೆ, ಟಿ. ಮರಿಗೌಡ ರಸ್ತೆ, ಹೊಸೂರು ರಸ್ತೆ, ಕೃಂಬಿಗಲ್ ರಸ್ತೆ (ಪಶ್ಚಿಮ ದ್ವಾರ, ಬಲಭಾಗ), ಜೆ.ಸಿ. ರಸ್ತೆ, ಪೂರ್ಣಿಮಾ ಟಾಕೀಸ್ ರಸ್ತೆ ಹಾಗೂ ಲಾಲ್‌ಬಾಗ್ ರಸ್ತೆಗಳಲ್ಲಿ ದ್ವಿಚಕ್ರ ವಾಹನದಲ್ಲಿ ರಾಜೇಂದ್ರ ಚೋಳನ್‌ ಸಂಚರಿಸಿದರು.

ಪ್ರಮುಖ ಜಂಕ್ಷನ್‌ಗಳಿಗೆ ಬೇರೆ ಬೇರೆ ವಿನ್ಯಾಸ ರೂಪಿಸಬೇಕು. ಹೊಸೂರು ರಸ್ತೆಯ ಮೇಲ್ಮೈ ತೀರಾ ಹಾಳಾಗಿದ್ದು, ಅದಕ್ಕೆ ತಕ್ಷಣವೇ ಡಾಂಬರೀಕರಣ ಮಾಡಬೇಕು. ರಸ್ತೆ ಬದಿಯ ತ್ಯಾಜ್ಯ (ಬ್ಲಾಕ್‌ ಸ್ಪಾಟ್‌ಗಳು) ತೆರವುಗೊಳಿಸಿ, ಮರುಕಳಿಸದಂತೆ ತಡೆಯಬೇಕು. ಜೆ.ಸಿ. ರಸ್ತೆಯಲ್ಲಿರುವ ನಗರ ಪಾಲಿಕೆ ಜಾಗದ ಸುತ್ತಲೂ ತಂತಿ ಬೇಲಿ ಹಾಕಿ, ಜಾಗದ ಅಭಿವೃದ್ಧಿಗೆ ವಿಸ್ತೃತ ಯೋಜನಾ ವರದಿ ತಯಾರಿಸಬೇಕು ಎಂದು ಸೂಚಿಸಿದರು.

ಪರಿಶೀಲನೆ: ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತ ಡಾ. ಕೆ.ವಿ. ರಾಜೇಂದ್ರ ಅವರು, ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ಕಾರ್ಯ 2025ರ ತರಬೇತಿ ಕಾರ್ಯಗಾರಕ್ಕೆ ಭೇಟಿ ನೀಡಿ ಸಮೀಕ್ಷಕರಿಗೆ  ಹಾಗೂ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದರು.

ಮಲ್ಲೇಶ್ವರ ವಿಭಾಗದ ಅರಮನೆ ನಗರ ವ್ಯಾಪ್ತಿಯ ನ್ಯೂ ಬಿಇಎಲ್ ರಸ್ತೆಯಿಂದ ಎಂಎಸ್‌ಆರ್‌ ನಗರ, ಆರ್‌.ಕೆ. ಗಾರ್ಡನ್, ಆರ್‌ಎಂವಿ ಎರಡನೇ ಹಂತ ಅಶ್ವತ್ಥ ನಗರ, ವಾರ್ಡ್ 36ರ ಮತ್ತಿಕೆರೆಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿದರು.

ವೈಟ್‌ ಟಾಪಿಂಗ್‌ ಮುಂದಿನ ತಿಂಗಳು ಪೂರ್ಣ

ಹೆಣ್ಣೂರು–ಬಾಗಲೂರು ರಸ್ತೆ ವೈಟ್ ಟಾಪಿಂಗ್ ಕಾಮಗಾರಿಯನ್ನು ಅಕ್ಟೋಬರ್ ಅಂತ್ಯಕ್ಕೆ ಪೂರ್ಣಗೊಳಿಸಬೇಕು ಎಂದು ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಅವರು ಅಧಿಕಾರಿಗಳಿಗೆ ಸೂಚಿಸಿದರು. ರಸ್ತೆ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಯಾವುದೇ ಗುಂಡಿ ಅಥವಾ ತ್ಯಾಜ್ಯ ಇರುವಂತಿಲ್ಲ. ಇದನ್ನು ಸುಸ್ಥಿತಿಯಲ್ಲಿ ಉಳಿಸುವುದು ಗುತ್ತಿಗೆದಾರರ ಜವಾಬ್ದಾರಿಯಾಗಿದ್ದು ಕಾಮಗಾರಿ ತಡವಾದರೆ ಅವರಿಗೆ ದಂಡ ವಿಧಿಸುವಂತೆ ಹೇಳಿದರು. ಇನ್ನೆರಡು ದಿನಗಳೊಳಗೆ ರಸ್ತೆಯಲ್ಲಿರುವ ಎಲ್ಲಾ ಗುಂಡಿಗಳನ್ನು ಮುಚ್ಚಬೇಕು. ಜೊತೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಪ್ರಮಾಣಪತ್ರವನ್ನು ಸಲ್ಲಿಸಬೇಕು ಎಂದು ಕಾರ್ಯಪಾಲಕ ಎಂಜಿನಿಯರ್‌ಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.