ADVERTISEMENT

ದ್ವಿಭಾಷಾ ಕಲಿಕೆಯಿಂದ ಭಾಷಾ ಸಮಸ್ಯೆಗೆ ಪರಿಹಾರ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2012, 19:30 IST
Last Updated 4 ಫೆಬ್ರುವರಿ 2012, 19:30 IST

ಬೆಂಗಳೂರು: `ಗಡಿ ಭಾಗದ 20 ಕಿ.ಮೀ. ವ್ಯಾಪ್ತಿಯ ಶಾಲೆಗಳಲ್ಲಿ ದ್ವಿಭಾಷೆಯಲ್ಲಿ ಕಲಿಯಲು ಅವಕಾಶ ಮಾಡಿಕೊಟ್ಟರೆ ಭಾಷಾ ಸಮಸ್ಯೆಗೆ ಪರಿಹಾರ ಸಿಗಲಿದೆ. ನಮ್ಮ ರಾಜ್ಯದ ಗಡಿ ಭಾಗದಲ್ಲಿರುವ ಶಾಲೆಗಳಲ್ಲಿ ಕನ್ನಡದ ಜೊತೆಗೆ ಅವರ ಮಾತೃಭಾಷೆಯಲ್ಲೂ ಶಿಕ್ಷಣ ನೀಡಬೇಕು. ಅದೇ ರೀತಿ ಪಕ್ಕದ ರಾಜ್ಯಗಳ ಗಡಿ ಭಾಗದಲ್ಲಿರುವ ಕನ್ನಡಿಗರಿಗೆ ಕನ್ನಡದ ಜೊತೆಗೆ ಆ ರಾಜ್ಯದ ಭಾಷೆ ಕಲಿಯಲು ಅವಕಾಶ ಮಾಡಿಕೊಡಬೇಕು. ಇದಕ್ಕೆ ಸಂಬಂಧಿಸಿದಂತೆ ಪಕ್ಕದ ರಾಜ್ಯಗಳೊಂದಿಗೆ ಒಪ್ಪಂದ ಮಾಡಿಕೊಳ್ಳಿ~ ಎಂದು ನಿಘಂಟು ತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯ ಸಲಹೆ ಮಾಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ವಿಧಾನಸೌಧದಲ್ಲಿ ಹೊರ ರಾಜ್ಯಗಳ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

`ಇಂಗ್ಲಿಷ್ ಪ್ರಾಧಾನ್ಯ, ಕನ್ನಡ ಭಾಷೆಗೆ ಅಡ್ಡಿಯನ್ನುಂಟು ಮಾಡುತ್ತಿದೆ. ಒಂದರಿಂದ 10ನೇ ತರಗತಿವರೆಗೆ ಕನ್ನಡವನ್ನು ಕಡ್ಡಾಯವಾಗಿ ಕಲಿಸಲು ತೀರ್ಮಾನಿಸಿದರೆ ಅನ್ಯಭಾಷಿಕರು ಕನ್ನಡ ಕಲಿಯುತ್ತಾರೆ~ ಎಂದು ಅಭಿಪ್ರಾಯಪಟ್ಟರು.

`ಕನ್ನಡ ವರ್ಣಮಾಲೆ ಗೊತ್ತಿಲ್ಲದವರು ಪ್ರೌಢಶಾಲಾ ಶಿಕ್ಷಕರಾಗಿದ್ದಾರೆ. ಜಾನಪದ ಅಭ್ಯಾಸ ಮಾಡಿದವರು ಅಧ್ಯಾಪಕರಾಗುವುದರಿಂದ ಏನೂ ಪ್ರಯೋಜನವಿಲ್ಲ. ವ್ಯಾಕರಣ, ಹಳಗನ್ನಡ ಮತ್ತು ಛಂದಸ್ಸು ಚೆನ್ನಾಗಿ ಕಲಿತವರನ್ನು ಮಾತ್ರ ಶಿಕ್ಷಕರನ್ನಾಗಿ ನೇಮಿಸಬೇಕು. ಶಿಕ್ಷಣ ಇಲಾಖೆ ಹಟ ಹಿಡಿದು ಈ ಕೆಲಸ ಮಾಡಬೇಕು~ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.