ADVERTISEMENT

ಧರ್ಮದ ಹೆಸರಿನಲ್ಲಿ ವಿಷ ಬಿತ್ತಬೇಡಿ: ಭಾರದ್ವಾಜ್‌

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 20:11 IST
Last Updated 20 ಡಿಸೆಂಬರ್ 2013, 20:11 IST

ಬೆಂಗಳೂರು: ‘ಧರ್ಮದ ಹೆಸರಿನಲ್ಲಿ ಯಾರೂ ಸಮಾಜದಲ್ಲಿ ವಿಷ ಬಿತ್ತುವ ಕೆಲಸವನ್ನು ಮಾಡಬಾರದು’ ಎಂದು ರಾಜ್ಯಪಾಲ ಎಚ್‌.ಆರ್‌. ಭಾರದ್ವಾಜ್‌ ಕಿವಿಮಾತು ಹೇಳಿದರು.

ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ­ಯಿಂದ ನಗರದಲ್ಲಿ ಏರ್ಪಡಿಸಿದ ಐದನೇ ಅಂತರರಾಷ್ಟ್ರೀಯ ವೇದ ವಿಜ್ಞಾನ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಶುಕ್ರವಾರ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಹಿಂದೂ ಧರ್ಮ ಎಂಬ ಪದ­ಪ್ರಯೋಗ ಯಾವ ಪೌರಾಣಿಕ ಕೃತಿ­ಗಳಲ್ಲೂ ಇಲ್ಲ. ಸಿಂಧೂ ನಾಗರಿಕತೆ­ಯಿಂದ ಬೆಳೆದು ಬಂದ ಸಂಸ್ಕೃತಿ ನಮ್ಮದು. ಅದನ್ನು ಸನಾತನ ಧರ್ಮ ಎಂದು ಕರೆಯಲಾಗುತ್ತದೆ. ಅದೊಂದು ಅಮೃತ ಇದ್ದಂತೆ. ಸಮಾಜವನ್ನು ಒಡೆಯುವ ಸಂಗತಿಗಳಿಗೆ ಅಲ್ಲಿ ಆಸ್ಪದ ಇಲ್ಲ’ ಎಂದು ಅಭಿಪ್ರಾಯಪಟ್ಟರು.

‘ವೇದ–ಉಪನಿಷತ್ತುಗಳನ್ನು ಸಂರಕ್ಷಿ­ಸಿ­ಕೊಳ್ಳುವ ಕೆಲಸ ಆಗಬೇಕಿದೆ’ ಎಂದ ಅವರು, ‘ಸಂಸ್ಕೃತ ಎಲ್ಲ ಭಾಷೆಗಳಿಗೆ ತಾಯಿ ಇದ್ದಂತೆ. ಆದರೆ, ರಾಜ್ಯದ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ನಿರೀಕ್ಷಿತ ಬೆಂಬಲ ಇದುವರೆಗೆ ಸಿಕ್ಕಿಲ್ಲ’ ಎಂದರು.

ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿ­ಷತ್‌ ಸಭಾಪತಿ ಡಿ.ಎಚ್‌. ಶಂಕರ­ಮೂರ್ತಿ, ‘ವೇದ ಎಂದೊಡನೆ ದೇಶ­ವನ್ನೇ ಹಿಂದಕ್ಕೆ ಒಯ್ಯುವ ವಿಷಯ ಎನ್ನು­ವಂತೆ ಪ್ರತಿಬಿಂಬಿಸಲಾಗುತ್ತಿದೆ. ಸ್ವಯಂ­ಘೋಷಿತ ಬುದ್ಧಿಜೀವಿಗಳು ಸಹ ರಾಮಾಯಣ– ಮಹಾಭಾರತಗಳ ಬಗೆಗೆ ಕಟ್ಟುಕಥೆ ಎಂಬಂತೆ ಅಪಪ್ರಚಾರ ನಡೆಸುತ್ತಿದ್ದಾರೆ. ಮಾಧ್ಯಮಗಳೂ ಅಂತಹ ಸಂಗತಿಗೇ ಮಹತ್ವ ನೀಡುತ್ತಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ವಿದೇಶಿಯರು ಅಪಪ್ರಚಾರ ಮಾಡುವ ಹಾಗೆ ನಮ್ಮದು ಕೇವಲ ಹಾವು ಆಡಿಸುವವರು ಮತ್ತು ಬಡವರ ದೇಶವಾಗಿದ್ದರೆ ಯುರೋಪಿಯನ್ನರು ಇಷ್ಟುದೂರ ಕಷ್ಟಪಟ್ಟು ಏಕೆ ಬರುತ್ತಿ­ದ್ದರು’ ಎಂದು ಅವರು ಪ್ರಶ್ನಿಸಿದರು.

ಪ್ರಧಾನ ಭಾಷಣ ಮಾಡಿದ ಡಾ.ವಿ.­ಆರ್‌. ಪಂಚಮುಖಿ, ‘ವೇದ­ಗಳು ವಿಜ್ಞಾನ, ಜ್ಯೋತಿರ್ವಿಜ್ಞಾನ ಮತ್ತು ಗಣಿತ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಕುರಿ­ತಂತೆ ವಿಸ್ತೃತವಾದ ಸಂಶೋಧನೆಗಳು ನಡೆಯಬೇಕಿದೆ’ ಎಂದು ಹೇಳಿದರು.

ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಎಚ್‌.ರಂಗವಿಠಲಾಚಾರ್‌ ಮತ್ತು ಆರ್‌.ಗುರುರಾಜನ್‌ ಅತಿಥಿಗಳಾಗಿ ಆಗಮಿಸಿದ್ದರು.

ಶ್ರೀಪಾದರಾಜ ಮಠದ ಕೇಶವನಿಧಿತೀರ್ಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.