ADVERTISEMENT

ಧೋಬಿ ಕಸುಬು ಯಾಂತ್ರೀಕರಣವಾಗಲಿ

​ಪ್ರಜಾವಾಣಿ ವಾರ್ತೆ
Published 6 ಮೇ 2012, 19:30 IST
Last Updated 6 ಮೇ 2012, 19:30 IST

ಬೆಂಗಳೂರು: `ಮಡಿವಾಳರ ಕಸುಬಿನ ಯಾಂತ್ರೀಕರಣ ಆಗಬೇಕಿದೆ. ಈ ನಿಟ್ಟಿನಲ್ಲಿ ಮಡಿವಾಳ ಸಮುದಾಯ ಕಸುಬುಗಾರಿಕೆಯಲ್ಲಿ ತೊಡಗಲು ವಲಸೆ ಸೌಕರ್ಯ ನಿಧಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಲ, ಸಬ್ಸಿಡಿ ಸೌಲಭ್ಯ ಒದಗಿಸುವ ಯೋಜನೆಯನ್ನು ಜಾರಿಗೆ ತರಬೇಕು~ ಎಂದು ಸಂಸದ ಅನಂತ್‌ಕುಮಾರ್ ಆಗ್ರಹಿಸಿದರು. 
 
ನಗರದ ಕೆಂಪೇಗೌಡನಗರದ ಮಡಿವಾಳ ಮಾಚಿದೇವ ಧಾರ್ಮಿಕ ಟ್ರಸ್ಟ್ ಆಶ್ರಯದಲ್ಲಿ ನಗರದಲ್ಲಿ ಭಾನುವಾರ ನಡೆದ ಮಡಿವಾಳ ಮಾಚಿದೇವರ 58ನೇ ವರ್ಷದ ಜಯಂತಿ ಮಹೋತ್ಸವ, ವಿದ್ಯಾರ್ಥಿನಿ ನಿಲಯದ 12ನೇ ವಾರ್ಷಿಕೋತ್ಸವ, ಮಡಿವಾಳ ಮಾಚಿದೇವರ ಅಧ್ಯಯನ ಕೇಂದ್ರ ಹಾಗೂ ಸಂಶೋಧನಾ ಕೇಂದ್ರ, ಸಮುದಾಯ ಭವನ ಉದ್ಘಾಟಿಸಿ ಅವರು ಮಾತನಾಡಿದರು.

`ಹೋಟೆಲ್, ನೇಕಾರಿಕೆ, ಕಮ್ಮಾರಿಕೆ, ಕುಂಬಾರಿಕೆ ಮಾದರಿಯಲ್ಲೇ ದೋಬಿ ಉದ್ಯೋಗವನ್ನು ಕೈಗಾರಿಕೆ ಎಂದು ಪರಿಗಣಿಸಬೇಕು. ಅವರಿಗೆ ಉದ್ಯೋಗ ಸಂಬಂಧಿತ ಶಿಕ್ಷಣ ನೀಡಬೇಕು~ ಎಂದು ಸಲಹೆ ನೀಡಿದರು.

`ಸಂಶೋಧನಾ ಕೇಂದ್ರಕ್ಕೆ ಸಂಸದರ ನಿಧಿಯಿಂದ ಈಗಾಗಲೇ ರೂ 10 ಲಕ್ಷ ಅನುದಾನ ನೀಡಲಾಗಿದೆ. ಪುನಃ ರೂ 10 ಲಕ್ಷ ಅನುದಾನ ನೀಡಲಾಗುವುದು. ಆರು ತಿಂಗಳಲ್ಲಿ ಸಂಶೋಧನಾ ಕೇಂದ್ರ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಬೇಕು~ ಎಂದರು.

ಹಿರಿಯ ಸಾಹಿತಿ ಡಾ. ಹಂಪ ನಾಗರಾಜಯ್ಯ ಮಾತನಾಡಿ, `ದೊಡ್ಡ ಸಮಾಜಗಳ ಬಗ್ಗೆ ಈ ವರೆಗೆ ದೊಡ್ಡ ದೊಡ್ಡ ಅಧ್ಯಯನಗಳು ನಡೆದಿವೆ. ಈ ಸಮಾಜಗಳಿಗೆ ಸಮಾನಾಂತರವಾಗಿರುವ ಶ್ರಮ ಸಂಸ್ಕೃತಿಯ ಸಮುದಾಯಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯಬೇಕು~ ಎಂದು ಸಲಹೆ ನೀಡಿದರು. 

`ಮಡಿವಾಳ ಮಾಚಿದೇವ ಅವರು ಒಂದು ಸಮುದಾಯಕ್ಕೆ ಸೀಮಿತ ಅಲ್ಲ. ಅವರು ಮನುಷ್ಯ ಕುಲಕ್ಕೆ ಸೇರಿದವರು. ಅವರ ವಚನ ವ್ಯಾಪ್ತಿ ಲೋಕಕ್ಕೆ ಪ್ರಸರಣ ಆಗಬೇಕು. ಈ ಅಧ್ಯಯನ ಪೀಠಕ್ಕೆ ವಿಶ್ವವಿದ್ಯಾಲಯದ ಮಾನ್ಯತೆ ಸಿಗಬೇಕು. ಮಾಚಿದೇವರ ಬಗ್ಗೆ ಪಠ್ಯಪುಸ್ತಕದಲ್ಲಿ ಕಡ್ಡಾಯವಾಗಿ ಒಂದು ಪಠ್ಯ ಇರಬೇಕು~ ಎಂದು ಅವರು ಅಭಿಪ್ರಾಯಪಟ್ಟರು.

ಅಧ್ಯಯನ ಪೀಠದ ಅಧ್ಯಕ್ಷೆ ಡಾ. ವರದಾ ಶ್ರೀನಿವಾಸ್ ಮಾತನಾಡಿದರು. ನಗರದ ಮಾಚಿದೇವ ಗುರುಪೀಠ ವಿಶ್ವಸ್ಥ ಸಮಿತಿಯ ಅಧ್ಯಕ್ಷ ಶಿವಯೋಗಾನಂದಪುರಿ ಶ್ರೀ, ಮಾಚಿದೇವ ಧಾರ್ಮಿಕ ಟ್ರಸ್ಟ್ ಅಧ್ಯಕ್ಷ ಬಿ.ಮೃತ್ಯುಂಜಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.