ADVERTISEMENT

ಧ್ವಜ ದುರುಪಯೋಗ: ಹೈಕೋರ್ಟ್ ನೋಟಿಸ್

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2011, 19:30 IST
Last Updated 15 ಅಕ್ಟೋಬರ್ 2011, 19:30 IST

ಬೆಂಗಳೂರು: ಕನ್ನಡದ ಬಾವುಟವನ್ನು ದುರುಪಯೋಗ ಪಡಿಸಿಕೊಂಡು ಬಾವುಟಕ್ಕೆ ಅವಮಾನ ಮಾಡುತ್ತಿರುವ ಆರೋಪ ಹೊತ್ತ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ.ನಾರಾಯಣಗೌಡ ಹಾಗೂ ಇತರರಿಗೆ ಹೈಕೋರ್ಟ್ ಶನಿವಾರ ನೋಟಿಸ್ ಜಾರಿಗೆ ಆದೇಶಿಸಿದೆ.

ನಾರಾಯಣಗೌಡ ಅವರ ವಿರುದ್ಧ ಕ್ರಮಕ್ಕೆ ಆದೇಶಿಸಿ ವಕೀಲ ಪ್ರಕಾಶ ಶೆಟ್ಟಿ ಅವರು ಸಲ್ಲಿಸಿರುವ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರ, ಕಾನೂನು ಇಲಾಖೆ, ನಗರ ಪೊಲೀಸ್ ಕಮಿಷನರ್ ಅವರಿಗೂ ನೋಟಿಸ್ ಜಾರಿಗೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ಆದೇಶಿಸಿದೆ.

ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿರುವ ನಾರಾಯಣಗೌಡ ಅವರು, ಸ್ವಂತದ ಲಾಭಕ್ಕಾಗಿ ಕನ್ನಡದ ಬಾವುಟವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕಾನೂನು ಬಾಹಿರ ಕೃತ್ಯಗಳಿಗೆ ಇದನ್ನು ಬಳಸಿಕೊಳ್ಳುತ್ತಿದ್ದಾರೆ.

ರಕ್ಷಣಾ ವೇದಿಕೆಯ ಬಾವುಟದಲ್ಲಿ ಕರ್ನಾಟಕದ ನಕ್ಷೆಯನ್ನು ಸ್ವಲ್ಪ ಬದಲಿಸಿದ್ದಾರೆ. ನಕ್ಷೆಯ ಪಕ್ಕದಲ್ಲಿ ತಮ್ಮ ವೇದಿಕೆ ಹೆಸರು ಹಾಕಿಕೊಂಡಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರದ ಜೊತೆಗೆ ತಮ್ಮ ಭಾವಚಿತ್ರವನ್ನು ಅಳವಡಿಸಿಕೊಂಡಿದ್ದಾರೆ. ಇವೆಲ್ಲ ಬಾವುಟಕ್ಕೆ ಮಾಡಿರುವ ಅವಮಾನ ಎನ್ನುವುದು ಅರ್ಜಿದಾರರ ವಾದ. ಇವೆಲ್ಲ ತಿಳಿದಿದ್ದರೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಲಾಗಿದೆ. ವಿಚಾರಣೆ ಮುಂದೂಡಲಾಗಿದೆ.

`ಜನರಿಗೆ ತೊಂದರೆ ಇಲ್ಲ~
ಸಚಿವರ ಪ್ರಮಾಣ ವಚನ ಸೇರಿದಂತೆ ವಿಧಾನಸೌಧದ ಎದುರು ಯಾವುದೇ ಕಾರ್ಯಕ್ರಮ ನಡೆದರೂ ಜನರಿಗೆ ಅದರಿಂದ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಸರ್ಕಾರ    ಹೈ    ಕೋರ್ಟ್‌ಗೆ ಶನಿವಾರ ತಿಳಿಸಿದೆ. 2007ರಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಸಂಚಾರ ದಟ್ಟಣೆ ಉಂಟಾಗಿ ಜನರು ವಿಪರೀತ ತೊಂದರೆ ಅನುಭವಿಸಿರುವುದರ ಹಿನ್ನೆಲೆಯಲ್ಲಿ ಅದೇ ಸಾಲಿನಲ್ಲಿ ವಕೀಲ ಎ.ವಿ.ಅಮರನಾಥನ್ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರದ ಪರ ವಕೀಲರು ಈ ವಾಗ್ದಾನ ಮಾಡಿದ್ದಾರೆ.

ವಕೀಲರ ಈ ಹೇಳಿಕೆಯನ್ನು ದಾಖಲಿಸಿಕೊಂಡ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆಯನ್ನು ಇತ್ಯರ್ಥಗೊಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.