ADVERTISEMENT

ನಕಲಿ ದಾಖಲೆ ಸೃಷ್ಟಿ ಆರೋಪ- ಹೈಕೋರ್ಟ್‌ಗೆ ಅರ್ಜಿ:ನಿರೀಕ್ಷಣಾ ಜಾಮೀನು ಕೋರಿರುವ ಕೃಷ್ಣಪ್ಪ

​ಪ್ರಜಾವಾಣಿ ವಾರ್ತೆ
Published 10 ಮೇ 2012, 19:30 IST
Last Updated 10 ಮೇ 2012, 19:30 IST

ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಜಮೀನು ಒತ್ತುವರಿ ಮಾಡಿರುವ ಆರೋಪ ಹೊತ್ತ ವಿಧಾನ ಪರಿಷತ್ ಸದಸ್ಯ ಇ.ಕೃಷ್ಣಪ್ಪ ಅವರು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಇವರ ವಿರುದ್ಧ ತನಿಖೆ ನಡೆಸಿ ಮೇ 21ರ ಒಳಗೆ ವರದಿ ನೀಡುವಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಲೋಕಾಯುಕ್ತ ಪೊಲೀಸರಿಗೆ ಏಪ್ರಿಲ್‌ನಲ್ಲಿ ಆದೇಶಿಸಿರುವ ಹಿನ್ನೆಲೆಯಲ್ಲಿ ತಮ್ಮನ್ನು ಬಂಧಿಸುವ ಭಯದಿಂದ ಅವರು ಕೋರ್ಟ್ ಮೊರೆ ಹೋಗಿದ್ದಾರೆ.

ರಘು ಎನ್ನುವವರು ಸಲ್ಲಿಸಿರುವ ದೂರು ಇದಾಗಿದೆ. `ಉತ್ತರ ತಾಲ್ಲೂಕು ದಾಸನಪುರ ಹೋಬಳಿ ಗೌಡಹಳ್ಳಿಯ ಬಳಿ 12 ಎಕರೆ ಸರ್ಕಾರಿ ಗೋಮಾಳ ಜಮೀನಿನಲ್ಲಿ ನಿವೇಶನ ಮಾಡಿ ಅದನ್ನು ಕೃಷ್ಣಪ್ಪ ಮಾರಾಟ ಮಾಡಿದ್ದಾರೆ. ನಕಲಿ ಭೂ ಪರಿವರ್ತನಾ ದಾಖಲೆ ಸಲ್ಲಿಸಿ ಶಿವನಪುರ ಗ್ರಾಮದಲ್ಲಿ 37 ಎಕರೆ ಜಮೀನಿನಲ್ಲಿ ನೆಲಮಂಗಲ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿವೇಶನಗಳನ್ನು ಮಾಡಲು ಅನುಮತಿ ಪಡೆದಿದ್ದಾರೆ. ಸಮಗ್ರ ಅಭಿವೃದ್ಧಿ ಯೋಜನೆ ಅಡಿ (ಸಿಡಿಪಿ) ಹಸಿರು ವಲಯ ಎಂದು ಗುರುತಿಸಲಾದ ಜಮೀನುಗಳನ್ನು ನಿವೇಶನಗಳನ್ನಾಗಿ ಪರಿವರ್ತಿಸಿದ್ದಾರೆ~ ಎನ್ನುವುದು ದೂರು.

ಈ ಆರೋಪಗಳನ್ನು ಅಲ್ಲಗಳೆದಿರುವ ಕೃಷ್ಣಪ್ಪ, ತಮಗೆ ಜಾಮೀನು ನೀಡುವಂತೆ ಕೋರಿದ್ದಾರೆ.
ಸಹ ಆರೋಪಿಗಳಾಗಿರುವ ನೆಲಮಂಗಲ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ತಿಪ್ಪಣ್ಣ, ಎ.ಸಿ. ಮುನಿರಾಜು,  ಶ್ರಿನಿವಾಸ್ ಹಾಗೂ ಪ್ರೇಮನಾಥ್ ರೆಡ್ಡಿ ಅವರ ವಿರುದ್ಧವೂ ತನಿಖೆಗೆ ಲೋಕಾಯುಕ್ತ ಕೋರ್ಟ್ ಆದೇಶಿಸಿದೆ.

ಜತ್ತಿ ವಿರುದ್ಧದ ಪ್ರಕರಣಕ್ಕೆ ತಡೆ
ಮಾಜಿ ಮುಖ್ಯಮಂತ್ರಿ ದಿವಂಗತ ಬಿ.ಡಿ.ಜತ್ತಿ ಅವರ ಪುತ್ರ ಡಿ.ಬಿ.ಜತ್ತಿ ಅವರ ವಿರುದ್ಧ ಭ್ರಷ್ಟಾಚಾರ ನಿರ್ಮೂಲನ ಕಾಯ್ದೆ ಅಡಿ ದಾಖಲಾಗಿರುವ ಪ್ರಕರಣಕ್ಕೆ ಆರು ವಾರಗಳ ತಡೆ ನೀಡಿ ಹೈಕೋರ್ಟ್ ಗುರುವಾರ ಆದೇಶಿಸಿದೆ.

ಡಿ.ಬಿ.ಜತ್ತಿ ಅವರು `ಜತ್ತಿ ಅಟೊಮೊಬೈಲ್ಸ್~ನ ಮಾಲೀಕರೂ ಆಗಿದ್ದಾರೆ. ಕಾಮಗಾರಿಯೊಂದರಲ್ಲಿ ಅವ್ಯವಹಾರ ನಡೆಸಿರುವ ಆರೋಪದ ಮೇಲೆ ಬಾಲಚಂದ್ರ ರಾವ್ ಮಲ್ಪಾಣಿ ಎಂಬುವವರ ವಿರುದ್ಧ ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆ ಅಡಿ ದೂರು ದಾಖಲು ಮಾಡಲಾಗಿದೆ. ಆದರೆ ಈ ಕಾಮಗಾರಿಯದಲ್ಲಿ ಜತ್ತಿ ಅವರೂ ಭಾಗಿಯಾಗಿದ್ದಾರೆ ಎಂದು ಆರೋಪ ಮಾಡಿ ಅವರ ವಿರುದ್ಧವೂ ದೂರು ದಾಖಲು ಮಾಡಲಾಗಿದೆ.

ಇದರ ಆಧಾರದ ಮೇಲೆ ಸೆಷನ್ಸ್ ಕೋರ್ಟ್ ಸಮನ್ಸ್ ಜಾರಿಗೆ ಆದೇಶಿಸಿದೆ. ಇದನ್ನು ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.`ಸರಿಯಾದ ವಿಚಾರಣೆ ನಡೆಸದ ಅಧೀನ ಕೋರ್ಟ್ ಜತ್ತಿ ಅವರಿಗೆ ಸಮನ್ಸ್ ಜಾರಿಗೊಳಿಸಿದ್ದೂ ಅಲ್ಲದೇ ಅವ್ಯವಹಾರವಾಗಿದೆ ಎನ್ನಲಾದ 54 ಲಕ್ಷ ರೂಪಾಯಿಗಳನ್ನು ಠೇವಣಿ ಇಡುವಂತೆ ಆದೇಶಿಸಿದೆ. ಇದು ಕಾನೂನುಬಾಹಿರ~ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು. ಈ ವಾದವನ್ನು ನ್ಯಾಯಮೂರ್ತಿ ಗೋವಿಂದರಾಜುಲು ಅವರು ಮಾನ್ಯ ಮಾಡಿ ತಡೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.