ADVERTISEMENT

ನಗರಕ್ಕೆ ನೀರು ಪೂರೈಕೆ ಲೆಕ್ಕದಲ್ಲಿ ಭಾರಿ ವ್ಯತ್ಯಾಸ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2012, 21:51 IST
Last Updated 27 ನವೆಂಬರ್ 2012, 21:51 IST

ಬೆಂಗಳೂರು: ನಗರಕ್ಕೆ ಸರಬರಾಜು ಆಗುತ್ತಿರುವ ಕಾವೇರಿ ನೀರಿನ ಲೆಕ್ಕ ಸಿಗುತ್ತಿಲ್ಲ. ಸರಬರಾಜು ಆಗುತ್ತಿರುವ ನೀರು ಮತ್ತು ಬಿಲ್ಲಿಂಗ್ ಆಗುತ್ತಿರುವ ನೀರಿನ ಪ್ರಮಾಣಕ್ಕೂ ಭಾರಿ ವ್ಯತ್ಯಾಸ ಇದೆ. ಈ ಕುರಿತು ಅಧ್ಯಯನ ನಡೆಸಿ, ವರದಿ ನೀಡುವುದಕ್ಕೆ ಬೆಂಗಳೂರು ಜಲಮಂಡಲಿ, ಖಾಸಗಿ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಿದೆ.

ಸರಬರಾಜು ಆಗುತ್ತಿರುವ ನೀರಿನ ಪೈಕಿ ಶೇ 35ರಿಂದ 40ರಷ್ಟು ನೀರು ಲೆಕ್ಕಕ್ಕೆ ಸಿಗುತ್ತಿಲ್ಲ. ಅದು ಎಲ್ಲಿಗೆ ಹೋಗುತ್ತಿದೆ ಎಂಬುದು ಕೂಡ ಗೊತ್ತಾಗಿಲ್ಲ. ಹೀಗಾಗಿ ಲೆಕ್ಕಕ್ಕೆ ಸಿಗದ ನೀರಿನ ಪತ್ತೆ ಮತ್ತು ಸೋರಿಕೆಯನ್ನು ತಡೆಯುವ ಸಲುವಾಗಿ ಅಧ್ಯಯನ ನಡೆಸಲು ಎಲ್ ಆಂಡ್ ಟಿ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಬೆಂಗಳೂರು ದಕ್ಷಿಣ ಭಾಗದಲ್ಲಿ ಪ್ರಾಯೋಗಿಕವಾಗಿ ಈ ಕೆಲಸ ಆರಂಭವಾಗಿದೆ ಎಂದು ಬೆಂಗಳೂರು ಜಲಮಂಡಲಿ ಸಚಿವ ಎಸ್. ಸುರೇಶಕುಮಾರ್ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

ನೀರಿನ ಅಕ್ರಮ ಸಂಪರ್ಕ, ಸೋರಿಕೆ ಮತ್ತು ಸಾರ್ವಜನಿಕ ನಲ್ಲಿಗಳಿಂದಾಗಿ ಇಂತಿಷ್ಟು ಪ್ರಮಾಣದ ನೀರು ಲೆಕ್ಕಕ್ಕೆ ಸಿಗದಿರಬಹುದು ಎಂದು ಅಂದಾಜಿಸಲಾಗಿದೆ. ನಿಖರವಾಗಿ ಇದಕ್ಕೆ ಕಾರಣ ಏನು ಎಂಬುದನ್ನು ಪತ್ತೆ ಮಾಡಿ, ನಂತರ ಅದಕ್ಕೊಂದು ಪರಿಹಾರ ಕಂಡುಕೊಳ್ಳುತ್ತೇವೆ. ನೀರು ಸೋರಿಕೆ ಪ್ರಮಾಣವನ್ನು ಕನಿಷ್ಠ ಶೇ 20ಕ್ಕೆ ಇಳಿಸಿದರೂ ಭಾರಿ ಅನುಕೂಲ ಆಗುತ್ತದೆ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.