ADVERTISEMENT

ನಗರದೆಲ್ಲೆಡೆ ಕ್ರಿಸ್‌ಮಸ್ ಸಂಭ್ರಮೋಲ್ಲಾಸ, ಸೌಹಾರ್ದ, ಶಾಂತಿಗಾಗಿ ಪ್ರಾರ್ಥನೆ

ಅಶಕ್ತರಿಗೆ ನೆರವು, ಮನೆಗಳಲ್ಲಿ ವಿಶೇಷ ಖಾದ್ಯ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 20:22 IST
Last Updated 25 ಡಿಸೆಂಬರ್ 2018, 20:22 IST
ಹಬ್ಬದ ಪ್ರಯುಕ್ತ ಗಾಡ್ ಚರ್ಚ್ ವರ್ಶಿಪ್ ಸೆಂಟರ್ ವತಿಯಿಂದ ಇಂದಿರಾ ನಗರ 6ನೇ ಮುಖ್ಯ ರಸ್ತೆಗೆ ಮಾಡಿದ್ದ ದೀಪಾಲಂಕಾರ ಕಣ್ಮನ ಸೆಳೆಯಿತು
ಹಬ್ಬದ ಪ್ರಯುಕ್ತ ಗಾಡ್ ಚರ್ಚ್ ವರ್ಶಿಪ್ ಸೆಂಟರ್ ವತಿಯಿಂದ ಇಂದಿರಾ ನಗರ 6ನೇ ಮುಖ್ಯ ರಸ್ತೆಗೆ ಮಾಡಿದ್ದ ದೀಪಾಲಂಕಾರ ಕಣ್ಮನ ಸೆಳೆಯಿತು   

ಬೆಂಗಳೂರು: ವಿದ್ಯುತ್‌ ದೀಪಗಳು ಹಾಗೂ ಹೂವುಗಳಿಂದ ಅಲಂಕೃತಗೊಂಡಿದ್ದ ಯೇಸು ಕ್ರಿಸ್ತರ ಆಲಯಗಳು, ಅವುಗಳಲ್ಲಿ ವಿಶೇಷ ಪ್ರಾರ್ಥನೆಯ ಮೆಲುಧ್ವನಿ ಹಾಗೂ ಕ್ಯಾರಲ್‌ ಹಾಡುಗಳ ನಾದ, ಬಗೆ–ಬಗೆಯ ಕೇಕ್‌ಗಳ ಸ್ವಾದ...

ಕ್ರಿಸ್‌ಮಸ್ ಹಬ್ಬದ ಅಂಗವಾಗಿ ನಗರದಲ್ಲಿ ಮಂಗಳವಾರಸಂಭ್ರಮ, ಸಡಗರ ಮನೆಮಾಡಿತ್ತು. ಕ್ರೈಸ್ತ ಬಾಂಧವರು ಚರ್ಚ್‌ಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬೆಳಿಗ್ಗೆ 6ರಿಂದ 10ರವರೆಗೆ ನಗರದ ಚರ್ಚ್‌ಗಳು ಭಕ್ತರಿಂದ ಗಿಜಿಗುಡುತ್ತಿದ್ದವು. ಬಹುತೇಕ ಚರ್ಚ್‌ಗಳಲ್ಲಿ ಮೊದಲು ಕನ್ನಡದಲ್ಲಿ ಪ್ರಾರ್ಥನೆ ಜರುಗಿತು. ಇಂಗ್ಲಿಷ್‌, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲೂ ಪ್ರಾರ್ಥನೆಗೆ ವ್ಯವಸ್ಥೆ ಮಾಡಲಾಗಿತ್ತು. ಧರ್ಮಗುರುಗಳು ಸಾಮಾಜಿಕ ಬಾಂಧವ್ಯ, ಸೌಹಾರ್ದ ಮತ್ತು ವಿಶ್ವಶಾಂತಿಯ ಸಂದೇಶಗಳನ್ನು ಸಾರಿದರು.

ಹೊಸ ಉಡುಗೆಗಳನ್ನು ತೊಟ್ಟಿದ್ದ ಕ್ರೈಸ್ತರು, ಬಂಧು–ಮಿತ್ರರೊಂದಿಗೆ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಕೇಕ್‌ಗಳನ್ನು ಹಂಚಿಕೊಂಡರು. ಅಶಕ್ತರಿಗೆ ಕೈಲಾದಷ್ಟು ಹಣ, ಬಟ್ಟೆಗಳನ್ನು ದಾನ ಮಾಡಿದರು.

ADVERTISEMENT

ಯೇಸುವಿನ ಜನ್ಮ ವೃತ್ತಾಂತವನ್ನು ಬಿಂಬಿಸುವ ಚಿತ್ತಾಕರ್ಷಕ ಗೋದಲಿಗಳನ್ನು ಚರ್ಚ್‌ಗಳ ಆವರಣಗಳಲ್ಲಿ ನಿರ್ಮಿಸಲಾಗಿತ್ತು. ಕ್ರೈಸ್ತರ ಮನೆಯಂಗಳದಲ್ಲೂ ಕ್ರಿಸ್‌ಮಸ್‌ ಟ್ರೀಗಳು ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿದ್ದವು. ಕೇಕ್‌, ಗಲ್‌ಗಲಾ, ರೋಜ್‌ ಕುಕ್ಕೀಸ್‌ಮತ್ತು ಬಿರಿಯಾನಿ ಖಾದ್ಯಗಳ ಘಮ ಅವರ ಮನೆಗಳಿಂದಹೊರಹೊಮ್ಮುತ್ತಿತ್ತು.

ಕ್ರೈಸ್ತ ಸಂಸ್ಥೆಗಳು ನಡೆಸುವ ಶಾಲಾ–ಕಾಲೇಜುಗಳ ಆವರಣಗಳಲ್ಲೂ ದೀಪಾಲಂಕಾರ ಮಾಡಲಾಗಿತ್ತು. ಅವುಗಳಲ್ಲಿನ ನಕ್ಷತ್ರಾಕಾರದ ಆಕಾಶ ಬುಟ್ಟಿಗಳು ಗಮನ ಸೆಳೆದವು. ಕೆಲವು ವಿದ್ಯಾಸಂಸ್ಥೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

ವಸ್ತು ವಿತರಣೆ: ಕಬ್ಬನ್‌ ಉದ್ಯಾನ ನಡಿಗೆದಾರರ ಸಂಘವು ಹಬ್ಬದ ಪ್ರಯುಕ್ತ ಡೇರಿ ವೃತ್ತ‌ ಸಮೀಪದ ಎಸ್‌ಆರ್‌ ನಗರ ಕೊಳೆಗೇರಿಯ ಕೆಲವು ನಿವಾಸಿಗಳಿಗೆ ಬಟ್ಟೆ, ನೋಟ್‌ಬುಕ್‌, ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ವಿತರಿಸಿತು.

ಚಾಮರಾಜಪೇಟೆಯ ಸೇಂಟ್‌ ಜೋಸೆಫ್ ಚರ್ಚ್‌ನಲ್ಲಿನ ಸಾಮೂಹಿಕ ಪ್ರಾರ್ಥನೆಯಲ್ಲಿ ಮಂಗಳವಾರ ಭಾಗವಹಿಸಿದ್ದ ಸಾರ್ವಜನಿಕರು

ಬೈಬಲ್‌ ಪಠಣ– ಯೇಸುವಿನ ಗುಣಗಾನ

ಶಿವಾಜಿನಗರದ ಸೇಂಟ್‌ ಮೇರಿ ಬೆಸಿಲಿಕಾ ಚರ್ಚ್‌, ಕಾಕ್ಸ್‌ಟೌನ್‌ನ ಸೇಂಟ್‌ ಫ್ರಾನ್ಸಿಸ್‌ ಕ್ಸೇವಿಯರ್‌ ಚರ್ಚ್‌, ಅಶೋಕ ನಗರದ ಸೇಂಟ್‌ ಪ್ಯಾಟ್ರಿಕ್ಸ್‌ ಚರ್ಚ್‌, ಲಿಂಗರಾಜಪುರದ ಹೋಲಿ ಗೋಸ್ಟ್‌ ಚರ್ಚ್‌, ಹಲಸೂರಿನ ಹೋಲಿ ಟ್ರಿನಿಟಿ ಚರ್ಚ್‌, ಲೂರ್ಥ್‌ ಮದರ್‌ ಚರ್ಚ್‌, ಎಂ.ಜಿ. ರಸ್ತೆಯ ಈಸ್ಟ್‌ ಪರೇಡ್‌ ಚರ್ಚ್‌, ರಿಚ್‌ಮಂಡ್‌ ರಸ್ತೆಯ ಸೇಕ್ರೆಡ್‌ ಹಾರ್ಟ್‌ ಚರ್ಚ್‌, ಸಂಪಂಗಿರಾಮನಗರದ ಹಡ್ಸನ್‌ ಸ್ಮಾರಕ ಚರ್ಚ್‌, ಚಾಮರಾಜಪೇಟೆಯ ಸೇಂಟ್‌ ಜೋಸೆಫ್‌ ಚರ್ಚ್‌, ಸೇಂಟ್‌ ಲ್ಯೂಕ್‌ ಚರ್ಚ್‌, ಟಿ.ಸಿ.ಪಾಳ್ಯದ ಸೇಂಟ್‌ ಅಂಥೋನಿ ಚರ್ಚ್‌ಗಳಲ್ಲಿ ಜರುಗಿದ ವಿಶೇಷ ಪ್ರಾರ್ಥನಾ ಸಭೆಗಳಲ್ಲಿ ಸಾವಿರಾರು ಜನ ಭಾಗವಹಿಸಿದ್ದರು. ಬೈಬಲ್‌ನ ಸಾಲುಗಳನ್ನು ಪಠಿಸಿದರು. ಯೇಸುವಿನ ಮಹಿಮೆಗಳನ್ನು ಸಾರುವ ಗೀತೆಗಳನ್ನು ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.