ADVERTISEMENT

ನಗರದ 25 ರಸ್ತೆಗಳು ಮೇಲ್ದರ್ಜೆಗೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 19:20 IST
Last Updated 7 ಅಕ್ಟೋಬರ್ 2011, 19:20 IST

ಬೆಂಗಳೂರು: ನಗರದ 25 ರಸ್ತೆಗಳನ್ನು ಒಟ್ಟು 81 ಕೋಟಿ ರೂಪಾಯಿ ವೆಚ್ಚದಲ್ಲಿ `ಟೆಂಡರ್ ಶ್ಯೂರ್~ ಯೋಜನೆಯಡಿ ಮೇಲ್ದರ್ಜೆಗೆ ಏರಿಸಲು ಸರ್ಕಾರ ತೀರ್ಮಾನಿಸಿದೆ. `ಬೆಂಗಳೂರು ಸಿಟಿ ಕನೆಕ್ಟ್~ ಸಂಸ್ಥೆಯ ಸಹಭಾಗಿತ್ವದಲ್ಲಿ ಅನುಷ್ಠಾನಗೊಳ್ಳಲಿರುವ ಈ ಯೋಜನೆಯಿಂದ ನಗರದ ಸಂಚಾರ ಸಮಸ್ಯೆಯಲ್ಲಿ ಸುಧಾರಣೆ ತರುವ ಇರಾದೆ ಸರ್ಕಾರದ್ದು.

ಸಿಟಿ ಕನೆಕ್ಟ್ ಸಂಸ್ಥೆಯ ಸದಸ್ಯರಾದ ಸ್ವಾತಿ ರಾಮನಾಥನ್, ಕಿರಣ್ ಮಜುಂದಾರ್ ಷಾ, ಕ್ರಿಸ್ ಗೋಪಾಲಕೃಷ್ಣನ್, ನಗರಾಭಿವೃದ್ಧಿ ಸಚಿವ ಎಸ್.ಸುರೇಶ್ ಕುಮಾರ್, ವಸತಿ ಸಚಿವ ವಿ. ಸೋಮಣ್ಣ ಮತ್ತಿತರರೊಂದಿಗೆ ಗೃಹ ಕಚೇರಿ `ಕೃಷ್ಣಾ~ದಲ್ಲಿ ಶುಕ್ರವಾರ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, `ಬೆಂಗಳೂರಿನ 25 ರಸ್ತೆಗಳು ಮತ್ತು ರಾಜ್ಯದ ಏಳು ಮಹಾನಗರಪಾಲಿಕೆಗಳ ವ್ಯಾಪ್ತಿಯ 25 ರಸ್ತೆಗಳನ್ನು ಟೆಂಡರ್ ಶ್ಯೂರ್ ಯೋಜನೆಯಡಿ ಮೇಲ್ದರ್ಜೆಗೆ ಏರಿಸಲಾಗುವುದು~ ಎಂದು ಅವರು ತಿಳಿಸಿದರು.
ಮೇಲ್ದರ್ಜೆಗೆ ಏರಿಸಲು ನಿರ್ಧರಿಸಲಾಗಿರುವ ರಸ್ತೆಗಳ ಪೈಕಿ ಕೆಲವನ್ನು ಇನ್ನೂ ಗುರುತಿಸಿಲ್ಲ. ಅವುಗಳನ್ನೂ ಶೀಘ್ರದಲ್ಲೇ ಗುರುತಿಸಲಾಗುವುದು ಎಂದು ಅವರು ತಿಳಿಸಿದರು.

ಏನಿದು ಟೆಂಡರ್ ಶ್ಯೂರ್?: ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ನಿರ್ಮಾಣದಲ್ಲಿ ನಿರ್ದಿಷ್ಟ ತಾಂತ್ರಿಕ ಮಾನದಂಡಗಳನ್ನು ಅನುಸರಿಸಲಾಗುತ್ತಿದೆ. ಆದರೆ ಅತ್ಯಂತ ಸಂಕೀರ್ಣವಾಗಿರುವ ನಗರಗಳ ರಸ್ತೆ ನಿರ್ಮಾಣದಲ್ಲಿ ಇಂಥ ಯಾವುದೇ ಮಾನದಂಡಗಳ ಬಳಕೆ ಇಲ್ಲ. ಇದರಿಂದಾಗಿ ನಗರದ ರಸ್ತೆಗಳನ್ನು ಅವುಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಸಿಟಿ ಕನೆಕ್ಟ್ ಸಂಸ್ಥೆಯ ಸ್ವಾತಿ ರಾಮನಾಥನ್.

ರಾಜ್ಯ ಸರ್ಕಾರ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಭೂಸಾರಿಗೆ ನಿರ್ದೇಶನಾಲಯ, ಲೋಕೋಪಯೋಗಿ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳು ಮತ್ತು ತಾಂತ್ರಿಕ ಸಂಸ್ಥೆಗಳಿಂದ ಟೆಂಡರ್ ಶ್ಯೂರ್ ಕುರಿತಂತೆ ಅಭಿಪ್ರಾಯ ಸಂಗ್ರಹಿಸಲಾಗಿದೆ.

ಈ ಮಾದರಿಯಲ್ಲಿ ಲಭ್ಯ ಜಾಗವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಪಾದಚಾರಿ ಮಾರ್ಗ, ಪಾರ್ಕಿಂಗ್ ಸ್ಥಳ, ವಾಹನ ಸಂಚಾರಕ್ಕೆ ವಿಶಾಲವಾದ ಜಾಗ ನೀಡಲಾಗುವುದು ಎಂದು ಸ್ವಾತಿ ಅವರು ವಿವರಿಸಿದರು.
ಸರಳೀಕೃತ ಗುತ್ತಿಗೆ ಒಪ್ಪಂದ, ಗುಣಮಟ್ಟದ ಪರಿಶೀಲನೆ, ಯೋಜನೆಯ ಉಸ್ತುವಾರಿಯಲ್ಲಿ ಸ್ಥಳೀಯರ ಪಾಲ್ಗೊಳ್ಳುವಿಕೆ ಹೆಚ್ಚಿಸುವುದೂ ಟೆಂಡರ್ ಶ್ಯೂರ್‌ನ ಅಂಶಗಳಲ್ಲಿ ಒಂದು. ಖಾಸಗಿ ಸಹಭಾಗಿತ್ವದ ಯೋಜನೆಗಳಿಗೆ ಇದು ಮಾದರಿಯಾಗಲಿದೆ ಎಂದು ಅವರು ತಿಳಿಸಿದರು.

131 ಕೋಟಿ ರೂಪಾಯಿ: ಬೆಂಗಳೂರಿನ 25 ರಸ್ತೆಗಳ ಅಭಿವೃದ್ಧಿಗೆ ಒಟ್ಟು 81 ಕೋಟಿ ರೂಪಾಯಿ ಮತ್ತು ರಾಜ್ಯದ ಇತರ ಏಳು ಮಹಾನಗರ ಪಾಲಿಕೆಗಳ ವ್ಯಾಪ್ತಿಯ 25 ರಸ್ತೆಗಳ ಅಭಿವೃದ್ಧಿಗೆ ಒಟ್ಟು 50 ಕೋಟಿ ರೂಪಾಯಿ ವೆಚ್ಚವಾಗಲಿದ್ದು, ಇದನ್ನು ನಗರಾಭಿವೃದ್ಧಿ ಇಲಾಖೆ ಭರಿಸಲಿದೆ. ಕೆಲವು ರಸ್ತೆಗಳನ್ನು ಬಿಬಿಎಂಪಿ ಮೂಲಕ ಇನ್ನು ಕೆಲವು ರೆಸ್ತೆಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಮೂಲಕ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.