ADVERTISEMENT

ನಗರ ಅಭಿವೃದ್ಧಿಗೆ ಸಲಹೆ, ಸೂಚನೆ: ಮಾಜಿ ಮೇಯರ್‌ಗಳ ಸಭೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2012, 19:30 IST
Last Updated 4 ಜೂನ್ 2012, 19:30 IST

ಬೆಂಗಳೂರು: ನಗರದ ಅಭಿವೃದ್ಧಿ ಹಾಗೂ ಸಂಪನ್ಮೂಲ ಕ್ರೋಢೀಕರಣಕ್ಕೆ ಸಂಬಂಧಿಸಿದಂತೆ ಮೇಯರ್ ಡಿ. ವೆಂಕಟೇಶಮೂರ್ತಿ ಸೋಮವಾರ ತಮ್ಮ ಕಚೇರಿಯಲ್ಲಿ ಮಾಜಿ ಮೇಯರ್‌ಗಳೊಂದಿಗೆ ಸಭೆ ನಡೆಸಿದರು.

ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಅಳವಡಿಸಿಕೊಳ್ಳಬಹುದಾದ ಅಂಶಗಳ ಬಗ್ಗೆಯೂ ಮೇಯರ್ ಅವರು ಮಾಜಿ ಮೇಯರ್‌ಗಳೊಂದಿಗೆ ಸಲಹೆ- ಮಾರ್ಗದರ್ಶನ ಪಡೆದರು.

ರಾಜ್ಯ ಸರ್ಕಾರದಿಂದ ಒಂದೇ ಬಾರಿಗೆ 2ರಿಂದ 3 ಸಾವಿರ ಕೋಟಿ ರೂಪಾಯಿವರೆಗೆ ಅನುದಾನ ಪಡೆದು ಸಾಲ ತೀರಿಸುವ ಮೂಲಕ ನಗರದ ನಾಗರಿಕರನ್ನು ಸಾಲ ಮುಕ್ತರನ್ನಾಗಿ ಮಾಡಬೇಕು. ಅಗತ್ಯ ಬಿದ್ದರೆ ಮುಖ್ಯಮಂತ್ರಿಗಳ ಬಳಿ ನಗರ ಶಾಸಕರು ಹಾಗೂ ಪಾಲಿಕೆ ಸದಸ್ಯರ ನಿಯೋಗ ಕೊಂಡೊಯ್ದು ಹೆಚ್ಚಿನ ಅನುದಾನ ಪಡೆಯಲು ಪ್ರಯತ್ನಿಸಬೇಕು ಎಂದು ಮಾಜಿ ಮೇಯರ್‌ಗಳು ಸಲಹೆ ಮಾಡಿದರು.

ಅಭಿವೃದ್ಧಿಪಡಿಸಿದ ರಸ್ತೆಗಳಿಗೇ ಪದೇ ಪದೇ ಡಾಂಬರು ಹಾಕುವುದನ್ನು ನಿಲ್ಲಿಸಿ ಹಾಳಾದ ರಸ್ತೆಗಳನ್ನು ಮಾತ್ರ ದುರಸ್ತಿ ಮಾಡಲು ಪಾಲಿಕೆ ಮುಂದಾಗಬೇಕು. ಇದರಿಂದ ಕೋಟ್ಯಂತರ ರೂಪಾಯಿ ದುಂದು ವೆಚ್ಚವಾಗುವುದನ್ನು ತಡೆಯಬಹುದು ಎಂದರು.

ಆಸ್ತಿ ತೆರಿಗೆಯನ್ನು ಕಟ್ಟುನಿಟ್ಟಾಗಿ ವಸೂಲಿ ಮಾಡಲು ಪಾಲಿಕೆ ಕ್ರಮ ಕೈಗೊಂಡಲ್ಲಿ ಕಟ್ಟಡಗಳನ್ನು ಸಾಲಕ್ಕಾಗಿ ಅಡಮಾನವಿಡುವ ಪರಿಸ್ಥಿತಿ ಉದ್ಭವಿಸುವುದಿಲ್ಲ. ಅ್ಲ್ಲಲದೆ, ಜಾಹೀರಾತು ವಿಭಾಗದಿಂದಲೂ ಹೆಚ್ಚಿನ ವರಮಾನ ಸಂಗ್ರಹಿಸಲು ಮುಂದಾಗಬೇಕು.
 
ಒಟ್ಟಿನಲ್ಲಿ ಪಾಲಿಕೆ ತನ್ನ ಸಂಪನ್ಮೂಲದಿಂದಲೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಷ್ಟು ಸಶಕ್ತವಾಗಬೇಕು ಎಂದು ಅವರು ಸಲಹೆ ಮಾಡಿದರು. ಮಾಜಿ ಮೇಯರ್‌ಗಳಾದ ಕೆ. ಲಕ್ಕಣ್ಣ, ಪದ್ಮಾವತಿ ಗಂಗಾಧರಗೌಡ, ಜೆ. ಹುಚ್ಚಪ್ಪ, ಎಂ. ರಾಮಚಂದ್ರಪ್ಪ, ಕೆ.ಎಚ್.ಎನ್. ಸಿಂಹ, ಪಿ.ಆರ್. ರಮೇಶ್, ಕೆ.ಚಂದ್ರಶೇಖರ್, ಕೆ.ಸಿ. ವಿಜಯಕುಮಾರ್  ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.