ADVERTISEMENT

ನಟ ಪ್ರಣವ್, ಆರೋಪಿ ತಮ್ಮನ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2017, 19:29 IST
Last Updated 2 ಅಕ್ಟೋಬರ್ 2017, 19:29 IST

ಬೆಂಗಳೂರು: ಉದ್ಯಮಿ ದಿ.ಆದಿಕೇಶವಲು ಅವರ ಮೊಮ್ಮಗ ಗೀತಾವಿಷ್ಣು ವಿರುದ್ಧ ದಾಖಲಾಗಿರುವ ಅಪಘಾತ ಹಾಗೂ ಎಡಿಪಿಎಸ್‌ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಯನಗರ ಪೊಲೀಸರು ಸೋಮವಾರ ನಟ ಪ್ರಣವ್ ದೇವರಾಜ್, ಆರೋಪಿಯ ತಮ್ಮ ಆದಿನಾರಾಯಣ ಸೇರಿ ಆರು ಮಂದಿಯನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡರು.

ಸೆ.27ರ ರಾತ್ರಿ ಸೌತ್‌ ಎಂಡ್ ವೃತ್ತದಲ್ಲಿ ಗೀತಾವಿಷ್ಣುವಿನ ಎಸ್‌ಯುವಿಯು ಓಮ್ನಿ ವ್ಯಾನ್‌ಗೆ ಡಿಕ್ಕಿ ಹೊಡೆದು ಆರು ಮಂದಿ ಗಾಯಗೊಂಡಿದ್ದರು. ಎಸ್‌ಯುವಿಯಲ್ಲಿ 110 ಗ್ರಾಂ ಗಾಂಜಾ ಸಹ ಸಿಕ್ಕಿತ್ತು. ಇದಕ್ಕೂ ಮೊದಲು ಆತ ಜಯನಗರದಲ್ಲಿರುವ ತನ್ನ ಒಡೆತನದ ‘ಈಡನ್‌ಪಾರ್ಕ್‌’ ಹೋಟೆಲ್‌ನಲ್ಲಿ ಸ್ನೇಹಿತರ ಜತೆ ಪಾರ್ಟಿ ಮಾಡಿ ಪಾನಮತ್ತನಾಗಿದ್ದ ಎಂಬುದು ತನಿಖೆಯಿಂದ ಗೊತ್ತಾಗಿತ್ತು. ಹೀಗಾಗಿ, ಆರೋಪಿ ಜತೆ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿದ್ದೆವು ಎಂದು ಪೊಲೀಸರು ಹೇಳಿದ್ದಾರೆ.

‘ನಟ ಪ್ರಣವ್ ದೇವರಾಜ್, ಆದಿನಾರಾಯಣ, ಸ್ನೇಹಿತರಾದ ಜುನೈದ್, ಫೈಜಲ್, ಕೈಸರ್ ಹಾಗೂ ಶಶಾಂಕ್ ಅವರಿಗೆ ನೋಟಿಸ್ ಕಳುಹಿಸಿದ್ದೆವು. ಆರೂ ಮಂದಿ ಸೋಮವಾರ ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದಾರೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ADVERTISEMENT

ಸ್ಥಳದಲ್ಲಿದ್ದಿದ್ದು ನಿಜ: ವಿಚಾರಣೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಪ್ರಣವ್, ‘ಗೀತಾವಿಷ್ಣು ನನ್ನ ಗೆಳೆಯ. ಸೆ.27ರ ರಾತ್ರಿ ಎಲ್ಲರೂ ಒಟ್ಟಿಗೆ ಊಟ ಮಾಡಿದ್ದೆವು. ನಂತರ ಆತ ಮನೆಗೆ ಹೊರಟಿದ್ದ. ಆದರೆ, ಮಾರ್ಗಮಧ್ಯೆ ಆತನ ಕಾರು ಅಪಘಾತಕ್ಕೀಡಾದ ವಿಚಾರ ತಿಳಿಯಿತು. ಕೂಡಲೇ ಸ್ಥಳಕ್ಕೆ ಹೋದೆ. ಅಂದ ಮಾತ್ರಕ್ಕೆ ನಾನೂ ಆ ಕಾರಿನಲ್ಲಿದ್ದೆ ಎಂದು ಹೇಳುತ್ತಿರುವುದು ಸರಿಯಲ್ಲ’ ಎಂದು ಹೇಳಿದರು.

ಲುಕ್‌ಔಟ್ ನೋಟಿಸ್: ಜಯನಗರ ಪೊಲೀಸರು ಗೀತಾವಿಷ್ಣು ವಿರುದ್ಧ ಸೋಮವಾರ ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ. ‘ಆರೋಪಿಯು ವಿದೇಶಕ್ಕೆ ಪ್ರಯಾಣಿಸಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಬೆಂಗಳೂರು, ಆಂಧ್ರಪ್ರದೇಶ, ಕೇರಳ ಹಾಗೂ ತಮಿಳುನಾಡಿನ ವಿಮಾನನಿಲ್ದಾಣಗಳ ಅಧಿಕಾರಿಗಳಿಗೆ ಆತನ ಭಾವಚಿತ್ರ ಹಾಗೂ ವಿವರಗಳನ್ನು ಕಳುಹಿಸಿದ್ದೇವೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಹೈದರಾಬಾದ್‌ನಲ್ಲಿ ಗೀತಾವಿಷ್ಣು ಕುಟುಂಬದ ಮಾಲೀಕತ್ವದಲ್ಲಿ ಪಂಚತಾರ ಹೋಟೆಲ್‌ ಇದೆ. ಆರೋಪಿ ಹಾಗೂ ಆತನ ಅಕ್ಕ ಚೈತನ್ಯನಾಯ್ಡು ಅವರು ಸೋಮವಾರ ಬೆಳಿಗ್ಗೆ ಆ ಹೋಟೆಲ್‌ ವ್ಯವಸ್ಥಾಪಕ ಶ್ರೀನಿವಾಸ್‌ ರೆಡ್ಡಿ ಅವರ ಮನೆಯಲ್ಲಿ ಅಡಗಿದ್ದರು ಎಂಬ ಮಾಹಿತಿ ಸಿಕ್ಕಿತ್ತು. ಅವರ ಮನೆಗೆ ತೆರಳುವಷ್ಟರಲ್ಲಿ ಆರೋಪಿಗಳು ಪರಾರಿಯಾಗಿದ್ದರು’ ಎಂದು ತನಿಖಾಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಚೈತನ್ಯ ಅವರು ಇತ್ತೀಚೆಗೆ ಖರೀದಿಸಿದ್ದ ವೋಲ್ವೊ ಕಾರಿನಲ್ಲಿ ತಮ್ಮನನ್ನು ಹೈದರಾಬಾದ್‌ಗೆ ಕರೆದುಕೊಂಡು ಹೋಗಿದ್ದಾರೆ. ಆ ವಾಹನವಿನ್ನೂ ನೋಂದಣಿ ಆಗಿಲ್ಲ. ಆ ಕಾರನ್ನು ಪತ್ತೆ ಮಾಡಲು ಟೋಲ್‌ಗೇಟ್‌ಗಳ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

ಮೂರು ದಿನ ಗಡುವು

‘ಅಪಘಾತ ಸಂಭವಿಸಿದಾಗ ಆರೋಪಿಯ ಕಾರಿನಲ್ಲಿ ನಟ ಪ್ರಜ್ವಲ್ ಹಾಗೂ ದಿಗಂತ್ ಸಹ ಇದ್ದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಠಾಣೆಗೆ ಹಾಜರಾಗಿ ಸ್ಪಷ್ಟನೆ ನೀಡುವಂತೆ ಆ ನಟರಿಬ್ಬರಿಗೂ ನೋಟಿಸ್ ಜಾರಿಗೊಳಿಸಿದ್ದೇವೆ. ಮೂರು ದಿನಗಳೊಳಗೆ ಹೇಳಿಕೆ ನೀಡುವಂತೆ ಸೂಚಿಸಿದ್ದೇವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪಾದಚಾರಿ ಮಾರ್ಗಕ್ಕೆ ಹಾನಿ: ಪಾಲಿಕೆಯಿಂದ ದೂರು

ಗೀತಾವಿಷ್ಣು ವಿರುದ್ಧ ಜಯನಗರ ಠಾಣೆಗೆ ಸೆ.28ರಂದು ದೂರು ಕೊಟ್ಟಿರುವ ಬಿಬಿಎಂಪಿ ಬನಶಂಕರಿ ಉಪವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್, ‘ಪಿವೈ 05 ಸಿ 7479 ನೋಂದಣಿ ಸಂಖ್ಯೆಯ ಬೆನ್ಜ್‌ ಎಸ್‌ಯುವಿ ಮಾಲೀಕರು, ಅಜಾಗರೂಕತೆಯಿಂದ ವಾಹನ ಚಲಾಯಿಸಿ ತೀ.ನಂ.ಶ್ರೀ ವೃತ್ತದಲ್ಲಿರುವ ಪಾದಚಾರಿ ಮಾರ್ಗವನ್ನು ಹಾಳುಗೆಡವಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ಪಾಲಿಕೆ ವತಿಯಿಂದ ನಿರ್ಮಿಸಲಾಗಿದ್ದ ವಿಶ್ವದರ್ಜೆ ಮಟ್ಟದ ಪಾದಚಾರಿ ಮಾರ್ಗದ 20 ಮೀಟರ್‌ ಅಪಘಾತದಿಂದಾಗಿ ಧ್ವಂಸವಾಗಿದೆ. ವಾಹನ ಮಾಲೀಕರು ‍ಪಾಲಿಕೆಯ ಬೊಕ್ಕಸಕ್ಕೆ ₹ 5 ಲಕ್ಷ ನಷ್ಟ ಉಂಟು ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಬೇಕು. ಆಗಿರುವ ನಷ್ಟವನ್ನು ಅವರಿಂದಲೇ ಭರಿಸಿಕೊಡಬೇಕು’ ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.