ಬೆಂಗಳೂರು: ಮನೆ ಬಾಡಿಗೆ ಕೊಡದೆ ಬೆದರಿಕೆ ಹಾಕಿದ ಪ್ರಕರಣದ ಸಂಬಂಧ ನಟ ಯಶ್ ಮತ್ತು ಅವರ ತಾಯಿ ಪುಷ್ಪಾ ಅವರಿಗೆ ನಗರದ ಸೆಷನ್ಸ್ ನ್ಯಾಯಾಲಯವು ಸೋಮವಾರ ನೋಟಿಸ್ ಜಾರಿ ಮಾಡಿದೆ.
‘ಯಶ್ ಅವರ ಕುಟುಂಬದವರು ಬಾಡಿಗೆ ನೀಡುತ್ತಿಲ್ಲ. ಬಾಡಿಗೆ ಕೇಳಿದರೆ ಬೆದರಿಕೆ ಹಾಕಿದ್ದಾರೆ’ ಎಂದು ಆರೋಪಿಸಿ ಮನೆಯ ಮಾಲೀಕ ಆಂಧ್ರಪ್ರದೇಶ ಮೂಲದ ಡಾ.ಎಂ.ಮುನಿಪ್ರಸಾದ್ ಅವರು ನಗರದ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಸೋಮವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಜೂನ್ 20ರ ಒಳಗೆ ಈ ಬಗ್ಗೆ ಉತ್ತರ ನೀಡಬೇಕು ಯಶ್ ಮತ್ತು ಪುಷ್ಪಾ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ವಿಚಾರಣೆ ಮುಂದೂಡಿದೆ.
ಪ್ರಕರಣದ ಹಿನ್ನೆಲೆ: ‘ಬನಶಂಕರಿ ಮೂರನೇ ಹಂತದಲ್ಲಿರುವ ನಮ್ಮ ಮನೆಯನ್ನು 2010ರ ಅಕ್ಟೋಬರ್‌ನಲ್ಲಿ ಯಶ್ ಅವರ ಕುಟುಂಬ 11 ತಿಂಗಳ ಅವಧಿಗೆ ಬಾಡಿಗೆ ಪಡೆದಿದ್ದರು. 2011ರಲ್ಲಿ ಅವಧಿ ಮುಗಿದ ನಂತರ ಯಶ್ ಅವರ ಕುಟುಂಬದವರು ಬಾಡಿಗೆ ನೀಡಿಲ್ಲ. ₨ 21.37 ಲಕ್ಷ ಬಾಡಿಗೆ ಬಾಕಿ ಇದೆ. ಬಾಡಿಗೆ ಕೇಳಿದರೆ ಬೆದರಿಕೆ ಹಾಕುತ್ತಾರೆ’ ಎಂದು ಆರೋಪಿಸಿ ಮುನಿಪ್ರಸಾದ್ ಅವರು ಮಾರ್ಚ್ 20ರಂದು ಗಿರಿನಗರ ಠಾಣೆಗೆ ದೂರು ನೀಡಿದ್ದರು.
‘ಪ್ರತಿ ತಿಂಗಳು ₨ 40 ಸಾವಿರ ಬಾಡಿಗೆ ನೀಡಬೇಕು ಎಂದು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಒಪ್ಪಂದದ ಅವಧಿ ನವೀಕರಿಸಿದರೆ ಪ್ರತಿ ವರ್ಷ ಶೇ 5 ರಷ್ಟು ಬಾಡಿಗೆ ಹೆಚ್ಚಿಸಲಾಗುವುದು ಎಂದು ಒಪ್ಪಂದದಲ್ಲಿ ಹೇಳಲಾಗಿತ್ತು. ಒಪ್ಪಂದದ ಅವಧಿ ಮುಗಿದ ನಂತರ ಬಾಡಿಗೆ ನೀಡಿಲ್ಲ’ ಎಂದು ಅವರು ದೂರಿನಲ್ಲಿ ತಿಳಿಸಿದ್ದರು.
‘ಮನೆ ಬಾಡಿಗೆ ಪಡೆದಿರುವ ಪಡೆದಿರುವ ಬಗ್ಗೆ ಮಾಡಿಕೊಂಡಿರುವ ಒಪ್ಪಂದವನ್ನು ನವೀಕರಿಸಿಲ್ಲ. ಅಲ್ಲದೇ, ನಮ್ಮ ಅನುಮತಿ ಪಡೆಯದೆ ಮನೆಯ ಒಳಾಂಗಣ ವಿನ್ಯಾಸವನ್ನು ಬದಲಾಯಿಸಿದ್ದಾರೆ. ಮನೆ ಖಾಲಿ ಮಾಡಲು ಹೇಳಿದರೆ ಬೆದರಿಕೆ ಹಾಕುತ್ತಾರೆ’ ಎಂದು ಅವರು ಆರೋಪಿಸಿದ್ದರು.
‘ಬಾಡಿಗೆ ಕೊಡುವುದಿಲ್ಲ ಎಂದು ನಾವು ಯಾವತ್ತೂ ಹೇಳಿಲ್ಲ. ಬಾಡಿಗೆ ಕಟ್ಟಲು ನಾವು ಸಿದ್ಧರಿದ್ದೇವೆ. ಮನೆ ಮಾಲೀಕರು ಬಾಡಿಕೆ ಸ್ವೀಕರಿಸಲು ಬಂದಿಲ್ಲ. ಏಕಾಏಕಿ ಮನೆ ಖಾಲಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ಮನೆ ಖಾಲಿ ಮಾಡಲು ಕಾಲಾವಕಾಶ ಕೇಳಿದ್ದೆವು’ ಎಂದು ಪುಷ್ಪಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.