ಬೆಂಗಳೂರು: `ಕುಮುದ್ವತಿ ನದಿಯನ್ನು ಪುನಶ್ಚೇತನಗೊಳಿಸಿದರೆ ಬೆಂಗಳೂರಿಗೆ ಸಾಕಷ್ಟು ಪ್ರಮಾಣದ ಕುಡಿಯುವ ನೀರನ್ನು ಒದಗಿಸಲು ಸಾಧ್ಯವಿದೆ' ಎಂದು ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಹೇಳಿದರು.
ಕುಮುದ್ವತಿ ನದಿಯ ಪುನಶ್ಚೇತನದ ಬಗ್ಗೆ ಅರಿವು ಮೂಡಿಸಲು ಆರ್ಟ್ ಆಫ್ ಲಿವಿಂಗ್ ನಗರದಲ್ಲಿ ಶನಿವಾರ ಆಯೋಜಿಸಿದ್ದ ಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು.
`ನದಿಗಳನ್ನು ರಕ್ಷಿಸಲು ಜನರು ಮುಂದಾಗಬೇಕು. ನದಿ ಪಾತ್ರಗಳಲ್ಲಿ ನಡೆಯುವ ಅಕ್ರಮ ಮರಳುಗಾರಿಕೆಯನ್ನು ನಿಲ್ಲಿಸಲು ಸರ್ಕಾರ ಮುಂದಾಗಬೇಕು. ನದಿಗಳನ್ನು ಉಳಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಸಬೇಕು' ಎಂದರು.
`ವಿಜ್ಞಾನಿಗಳ ಹಾಗೂ ತಜ್ಞರ ತಂಡವು ಕಳೆದ ಎರಡು ತಿಂಗಳಿಂದ ನಡೆಸಿದ ಸತತ ಪ್ರಯತ್ನದಿಂದ ಕುಮುದ್ವತಿ ನದಿ ಪಾತ್ರದ ಎಂಟು ಹಳ್ಳಿಗಳ ಕಲ್ಯಾಣಿ ಹಾಗೂ ಬಾವಿಗಳನ್ನು ಪುನಶ್ಚೇತನಗೊಳಿಸಲಾಗಿದೆ' ಎಂದು ಅವರು ತಿಳಿಸಿದರು.
`ಮೂರು ವರ್ಷಗಳ ಕುಮುದ್ವತಿ ನದಿ ಪುನಶ್ಚೇತನ ಯೋಜನೆಯಡಿ ಕಳೆದ ಮೂರು ತಿಂಗಳಲ್ಲಿ 78 ಚೆಕ್ ಡ್ಯಾಮ್‌ಗಳು, 5 ಇಂಗು ಗುಂಡಿಗಳು ಹಾಗೂ 17 ಕಲ್ಯಾಣಿಗಳನ್ನು ಅಭಿವೃದ್ಧಿಗೊಳಿಸಲಾಗಿದೆ' ಎಂದು ಯೋಜನೆಯ ಮೇಲ್ವಿಚಾರಕ ನಾಗರಾಜ್ ಗಂಗೊಳ್ಳಿ ಹೇಳಿದರು.
ಜಾಗೃತಿ ಜಾಥಾ ಮಹಾತ್ಮ ಗಾಂಧಿ ರಸ್ತೆಯಿಂದ ಆರಂಭಗೊಂಡು ಕ್ವೀನ್ಸ್ ರಸ್ತೆ, ಕಬ್ಬನ್ ಉದ್ಯಾನ, ಕೆ.ಆರ್. ವೃತ್ತದ ಮಾರ್ಗವಾಗಿ ಸಾಗಿ ಸ್ವಾತಂತ್ರ್ಯ ಉದ್ಯಾನ ತಲುಪಿತು. ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಕುಮುದ್ವತಿ ನದಿಯ ದಡದ ಗ್ರಾಮಗಳ ಜನರು, ಹಾಗೂ ಸ್ವಯಂ ಸೇವಕರು ಜಾಥಾದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.