ADVERTISEMENT

ನಮ್ಮೂರಿನ ಮರಗಳಿಗೂ ಇದೆ ಹಬ್ಬ!

​ಪ್ರಜಾವಾಣಿ ವಾರ್ತೆ
Published 3 ಜೂನ್ 2017, 19:46 IST
Last Updated 3 ಜೂನ್ 2017, 19:46 IST
ನಮ್ಮೂರಿನ ಮರಗಳಿಗೂ ಇದೆ ಹಬ್ಬ!
ನಮ್ಮೂರಿನ ಮರಗಳಿಗೂ ಇದೆ ಹಬ್ಬ!   

ಬೆಂಗಳೂರು: ವಿಶ್ವ ಪರಿಸರ ದಿನದ ಅಂಗವಾಗಿ ಹಸಿರು ಹೊದಿಕೆ ಮತ್ತು ಗಿಡಮರಗಳ ಮಹತ್ವ ಸಾರಲು ನಗರದ ಕಬ್ಬನ್‌ ಉದ್ಯಾನದಲ್ಲಿ ಪರಿಸರಾಸಕ್ತರು ಶನಿವಾರ ಒಂದೆಡೆ ಸೇರಿ ‘ಮರ ಹಬ್ಬ’ ಆಚರಿಸಿದರು.

ನಾಗರಿಕರ ಸಬಲೀಕರಣದ ಆಂದೋಲನ ನಡೆಸುತ್ತಿರುವ ಸಂಘಟನೆ ‘ಜಟ್ಕಾ ಡಾಟ್ ಆರ್ಗ್’ ಸಂಸ್ಥೆ  ಆಯೋಜಿಸಿದ್ದ ‘ಮರ ಹಬ್ಬ’ದಲ್ಲಿ ವಿಜ್ಞಾನಿಗಳು, ಪರಿಸರವಾದಿಗಳು,  ಶಿಕ್ಷಣ ತಜ್ಞರು, ಸಿನಿತಾರೆಯರು ಪಾಲ್ಗೊಂಡು ಗಿಡಮರ ಉಳಿಸುವಂತೆ ದನಿ ಎತ್ತಿದರು.
ದೀರ್ಘ ಸಮಯದಿಂದ ನೆನೆಗುದಿಗೆ ಬಿದ್ದಿರುವ ‘ಹಸಿರು ಸಮಿತಿ’ಗಳನ್ನು  ರಚಿಸುವಂತೆ ಬಿಬಿಎಂಪಿ ಒತ್ತಾಯಿಸುವ ಮನವಿ ಪತ್ರಕ್ಕೆ ನೂರಾರು ಮಂದಿ ಸಹಿ ಹಾಕಿದರು.

ಪುಟಾಣಿ ಮಕ್ಕಳು ‘ನಮಗೆ ಕಾಂಕ್ರೀಟ್‌ ಕಾಡು ಬೇಡ, ಹಕ್ಕಿಗಳಿಗೆ ಆಶ್ರಯ ಕೊಡುವ, ಶುದ್ಧ ಆಮ್ಲಜನಕ ನೀಡುವ ಗಿಡಮರ ಬೇಕು’ ಎಂಬ ಸಂದೇಶದ ಚಿತ್ರ ಬಿಡಿಸಿ ಗಮನ ಸೆಳೆದರು.
ಸೀಡ್‌ ಬಾಲ್‌ (ಸಸ್ಯ ಬೀಜದ ಚೆಂಡು), ಬೀಜಮಣ್ಣು ತುಂಬಿದ ಚಿಕ್ಕ ಪಾಟ್‌ ವಿತರಿಸಲಾಯಿತು. ಹಲವು ಪ್ರಭೇದದ ಗಿಡಮರ ಗುರುತಿಸುವ ಬಗ್ಗೆಯೂ ಮರತಜ್ಞ ಗಣೇಶ್‌ ರಾಮ್‌ ಅರಿವು ಮೂಡಿಸಿದರು.
ವೇದಿಕೆಯ ಒಂದು ಬದಿಯಲ್ಲಿ ‘ಆಕ್ಸಿಜನ್‌ ಬಾರ್‌’ ತೆರೆದು, ಶುದ್ಧ ಆಮ್ಲಜನಕ ಸೇವನೆಗೂ ಅವಕಾಶ ಕಲ್ಪಿಸಲಾಗಿತ್ತು. ಗಿಡಮರ ಉಳಿಸಿಕೊಳ್ಳದಿದ್ದರೆ ಭವಿಷ್ಯದಲ್ಲಿ ಇಂತಹ ದುಸ್ಥಿತಿ ಬರುವ ದಿನಗಳು ದೂರವಿಲ್ಲ ಎನ್ನುವ ಎಚ್ಚರಿಕೆ ಸಂದೇಶವನ್ನೂ ರವಾನಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.