ADVERTISEMENT

ನಮ್ಮ ಮೆಟ್ರೊ ಸಿಬ್ಬಂದಿಗೆ ಇಂದಿನಿಂದ ಅಗ್ನಿಶಾಮಕ ತರಬೇತಿ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2011, 20:20 IST
Last Updated 18 ಸೆಪ್ಟೆಂಬರ್ 2011, 20:20 IST

ಬೆಂಗಳೂರು: `ನಮ್ಮ ಮೆಟ್ರೊ~ದ ಮಾರ್ಗ ಮತ್ತು ನಿಲ್ದಾಣಗಳಲ್ಲಿ ತುರ್ತು ಸಂದರ್ಭಗಳಲ್ಲಿ ಅಗ್ನಿಶಾಮಕ ದುರಂತಗಳನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ ಬೆಂಗಳೂರು ಮೆಟ್ರೊ ರೈಲು ನಿಗಮದ 40 ಸಿಬ್ಬಂದಿಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು ಸೋಮವಾರದಿಂದ ತರಬೇತಿ ನೀಡಲಿದೆ.

ಇತ್ತೀಚೆಗೆ ಬೈಯಪ್ಪನಹಳ್ಳಿಯಿಂದ ಎಂ.ಜಿ. ರಸ್ತೆವರೆಗಿನ ರೀಚ್-1ರ ಮಾರ್ಗ ಪರಿಶೀಲನೆ ನಡೆಸಿದ ರೈಲ್ವೆ ಸುರಕ್ಷತಾ ಆಯುಕ್ತ ಡಿ.ಕೆ. ಸಿಂಗ್ ಅವರು ಪಟ್ಟಿ ಮಾಡಿದ್ದ ನ್ಯೂನತೆಗಳ ಅಥವಾ ಅವಲೋಕನ ಪಟ್ಟಿಯಲ್ಲಿನ 28 ಅಂಶಗಳಲ್ಲಿ ಅಗ್ನಿಶಾಮಕ ಸುರಕ್ಷತೆ ಪ್ರಶ್ನೆಯೂ ಸೇರಿತ್ತು.

`ದೆಹಲಿ ಮೆಟ್ರೊ ರೈಲು ನಿಗಮ (ಡಿಎಂಆರ್‌ಸಿ) ಈಗಾಗಲೇ 200 ಸಿಬ್ಬಂದಿಗೆ ಅಗ್ನಿಶಾಮಕ ಸುರಕ್ಷತೆ ಬಗ್ಗೆ ಈಗಾಗಲೇ ತರಬೇತಿ ನೀಡಿದೆ. ನಮ್ಮ ಇಲಾಖೆಯಿಂದ 40 ಸಿಬ್ಬಂದಿಗೆ ತರಬೇತಿ ನೀಡಲಿದ್ದೇವೆ. ಅಗ್ನಿ ಸುರಕ್ಷತೆ ತರಬೇತಿ ಒಂದು ನಿರಂತರ ಪ್ರಕ್ರಿಯೆ~ ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಉಪ ನಿರ್ದೇಶಕ ಬಿ.ಕೆ. ಹಂಪಗೋಳ್ ತಿಳಿಸಿದ್ದಾರೆ.

`ಡಿಎಂಆರ್‌ಸಿಯು ನಮ್ಮ ಮೆಟ್ರೊ ಸಿಬ್ಬಂದಿಗೆ ಸೂಕ್ತ ರೀತಿಯಲ್ಲಿ ತರಬೇತಿ ನೀಡಿದ ನಂತರವೇ ನಾವು ಅಗ್ನಿಶಾಮಕ ಸುರಕ್ಷತೆ ಬಗ್ಗೆ ಅಂತಿಮ ಅನುಮೋದನೆ ನೀಡಿದ್ದೇವೆ. ಇದೀಗ ಮೆಟ್ರೊ ನಿಲ್ದಾಣಗಳಲ್ಲಿ ಅಳವಡಿಸಿರುವ ಅಗ್ನಿ ಸುರಕ್ಷತಾ ಉಪಕರಣಗಳನ್ನು ಯಾವ ರೀತಿ ಬಳಸಬೇಕು ಹಾಗೂ ಅಪಾಯದಲ್ಲಿ ಸಿಲುಕಿದವರನ್ನು ಹೇಗೆ ರಕ್ಷಿಸಬೇಕು ಎಂಬುದರ ಬಗ್ಗೆ ತರಬೇತಿ ನೀಡುತ್ತೇವೆ~ ಎಂದು ಅವರು ಮಾಹಿತಿ ನೀಡಿದರು.

ನಗರದ ವಿವಿಧ ಕಡೆಗಳಲ್ಲಿ ನಡೆಯುತ್ತಿರುವ ಮೆಟ್ರೊ ಕಾಮಗಾರಿ ಸಂದರ್ಭಗಳಲ್ಲಿ ಸಂಭವಿಸಬಹುದಾದ ಅಗ್ನಿ ಅನಾಹುತಗಳನ್ನು ಎದುರಿಸಲು ಕೂಡ ಬಿಎಂಆರ್‌ಸಿಎಲ್ ಈ ಸಿಬ್ಬಂದಿಯನ್ನು ಬಳಕೆ ಮಾಡಿಕೊಳ್ಳಬಹುದು ಎಂದು ಅವರು ತಿಳಿಸಿದರು.

ಈ ನಡುವೆ, `ನಮ್ಮ ಮೆಟ್ರೊ~ದ ರೀಚ್-1ರ ಕಾಮಗಾರಿ ಪರಿಶೀಲನೆ ನಡೆಸಿದ ನಂತರ ನಿಗಮವು ರೈಲ್ವೆ ಸುರಕ್ಷತಾ ಆಯುಕ್ತರಿಗೆ ತನ್ನ ವರದಿಯನ್ನು ಸಲ್ಲಿಸಿದೆ. ಇದೀಗ ರೈಲ್ವೆ ಸುರಕ್ಷತಾ ಆಯುಕ್ತರ ವರದಿಗಾಗಿ ಕಾಯುತ್ತಿದ್ದೇವೆ ಎಂದು ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಎನ್. ಶಿವಶೈಲಂ ತಿಳಿಸಿದ್ದಾರೆ.

ಈ ಮಧ್ಯೆ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ರೈಲ್ವೆ ಸುರಕ್ಷತಾ ಆಯುಕ್ತ ಡಿ.ಕೆ. ಸಿಂಗ್, `ನಮ್ಮ ಕೆಲಸ ಅರ್ಧದಷ್ಟು ಮುಗಿದಿದೆ. ಇನ್ನೂ ಕೆಲವು ನ್ಯೂನತೆಗಳನ್ನು ಬಿಎಂಆರ್‌ಸಿಎಲ್ ಸರಿಪಡಿಸಬೇಕಾಗಿದೆ.

ಅದೆಲ್ಲವನ್ನೂ ವಿವರಿಸಿ ಹೇಳಲು ಸಾಧ್ಯವಿಲ್ಲ. ಬಿಎಂಆರ್‌ಸಿಎಲ್ ಕೋರ್ಟ್‌ನಿಂದ ಚೆಂಡು ಸಂಪೂರ್ಣ ನಮ್ಮ ಅಂಗಳಕ್ಕೆ ಬಂದಿಲ್ಲ ಎಂದಷ್ಟೇ ನಾನು ಹೇಳಬಲ್ಲೆ~ ಎಂದು ಪ್ರತಿಕ್ರಿಯಿಸಿದರು.

`ನಾವು ಪಟ್ಟಿ ಮಾಡಿರುವಂತೆ ನಮ್ಮ ಮೆಟ್ರೊದ ನ್ಯೂನತೆಗಳನ್ನು ಸರಿಪಡಿಸಿಕೊಂಡಿರುವ ಬಗ್ಗೆ ಬಿಎಂಆರ್‌ಸಿಎಲ್‌ನಿಂದ ಅಂತಿಮ ವರದಿ ಬಾರದ ಹೊರತು ನಾನು ಮುಖ್ಯ ರೈಲ್ವೆ ಆಯುಕ್ತರಿಗೆ ಯಾವುದೇ ದಾಖಲೆಗಳನ್ನು ಸಲ್ಲಿಸುವುದಿಲ್ಲ~ ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.