ADVERTISEMENT

ನಶೆಯಲ್ಲಿ ಬಿಎಸ್‌ಎಫ್‌ ಸಿಬ್ಬಂದಿಯ ದಾಂಧಲೆ

ಲಾಲ್‌ಬಾಗ್‌ನಲ್ಲಿ ನಡಿಗೆದಾರರು, ಭದ್ರತಾ ಸಿಬ್ಬಂದಿ ಮತ್ತು ಪೊಲೀಸರಿಗೆ ಥಳಿತ

​ಪ್ರಜಾವಾಣಿ ವಾರ್ತೆ
Published 6 ಜನವರಿ 2014, 14:13 IST
Last Updated 6 ಜನವರಿ 2014, 14:13 IST

ಬೆಂಗಳೂರು: ನಗರದ ಲಾಲ್‌ಬಾಗ್‌ಗೆ ಪ್ರವಾಸ ಬಂದಿದ್ದ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಸಿಬ್ಬಂದಿ ಪಾನಮತ್ತ­ರಾಗಿ ಉದ್ಯಾನದ ನಡಿಗೆದಾರರು, ಕಾವಲುಗಾರರು ಮತ್ತು ಪೊಲೀಸ್‌ ಸಿಬ್ಬಂದಿಯನ್ನು ಮನಸೋಇಚ್ಛೆ ಥಳಿಸಿ ದುಂಡಾವರ್ತಿ ಪ್ರದರ್ಶಿಸಿರುವ ಘಟನೆ ಭಾನುವಾರ ನಡೆದಿದೆ.

ಘಟನೆಯಲ್ಲಿ ಸಿದ್ದಾಪುರ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ಸುರೇಶ್‌, ಕಾನ್‌ಸ್ಟೆಬಲ್‌ ಹಣವೀರ್‌, ಲಾಲ್‌ಬಾಗ್‌ನ ಭದ್ರತಾ ಸಿಬ್ಬಂದಿ ಸಮದ್‌, ಪ್ರಶಾಂತ್‌ ಮತ್ತು ಸುರೇಶ್‌ ಅವರು ತೀವ್ರವಾಗಿ ಗಾಯಗೊಂಡಿ­ದ್ದಾರೆ.

ನಡಿಗೆದಾರರಲ್ಲಿ  ಮೂರ್ನಾಲ್ಕು ಮಂದಿಗೆ ಸಣ್ಣಪುಟ್ಟ ಗಾಯಗಳಿದ್ದು, ಅವರು ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.

ಲಾಲ್‌ಬಾಗ್‌ಗೆ ಸಂಜೆ ಪ್ರವಾಸ ಬಂದಿದ್ದ ಬಿಎಸ್‌­ಎಫ್‌ನ 47 ಮಂದಿ ಸಿಬ್ಬಂದಿ ಕೆಂಗಲ್‌ ಹನುಮಂತಯ್ಯ ವೃತ್ತದ ಪ್ರವೇಶದ್ವಾರದ ಬಳಿ ಉದ್ಯಾನದ ಆವರಣ­ದಲ್ಲೇ ಮದ್ಯ­ಪಾನ ಮಾಡಿ, ವಾಯುವಿಹಾರಕ್ಕೆ ಬಂದಿದ್ದ ಯುವತಿ­ಯರು ಹಾಗೂ ಮಹಿಳೆಯ­ರೊಂದಿಗೆ ಅಸಭ್ಯ­ವಾಗಿ ನಡೆದು­­ಕೊಂಡರು. ಅಲ್ಲದೇ,  ಅಮಲಿ­ನಲ್ಲಿ ಉದ್ಯಾ­­ನದ ಗಿಡಗಳಿಂದ ಹೂವುಗಳನ್ನು ಕಿತ್ತು ಅವರ ಮೇಲೆ­ಸೆದು ಮತ್ತು ಮದ್ಯ ಎರಚಿ ಅನುಚಿತವಾಗಿ ವರ್ತಿಸಿದರು.

ಬಿಎಸ್‌ಎಫ್‌ ಸಿಬ್ಬಂದಿಯ ಪುಂಡಾಟಿಕೆಯಿಂದ ರೋಸಿಹೋದ ನಡಿಗೆದಾರರು, ಉದ್ಯಾನದ ಭದ್ರತಾ ಸಿಬ್ಬಂದಿಗೆ ದೂರು ನೀಡಿದರು.

ವಿಷಯ ತಿಳಿದು ಸ್ಥಳಕ್ಕೆ ಬಂದ ಕಾವಲುಗಾರರಾದ ಸಮದ್‌, ಪ್ರಶಾಂತ್‌ ಮತ್ತು ಸುರೇಶ್‌ ಅವರೊಂದಿಗೆ ಬಿಎಸ್­ಎಫ್‌ ಸಿಬ್ಬಂದಿ ವಾಗ್ವಾದ ನಡೆಸಿದರು. ಅಲ್ಲದೇ, ಆ ಮೂರೂ ಮಂದಿಗೆ ಬೂಟು­ಗಾಲಿನಿಂದ ಒದ್ದು, ದೊಣ್ಣೆಗಳಿಂದ ಥಳಿಸಿದರು. ಭದ್ರತಾ ಸಿಬ್ಬಂದಿಯ ರಕ್ಷಣೆಗೆ ಧಾವಿಸಿದ ನಡಿಗೆದಾರರ ಮೇಲೂ ಹಲ್ಲೆ ನಡೆಸಿದರು.

ಈ ವೇಳೆ ಉದ್ಯಾನದಲ್ಲಿ ಗಸ್ತು ತಿರುಗುತ್ತಿದ್ದ ಹೆಡ್‌ ಕಾನ್‌ಸ್ಟೆಬಲ್‌ ಸುರೇಶ್‌ ಮತ್ತು ಕಾನ್‌ಸ್ಟೆಬಲ್‌ ಹಣ­ವೀರ್‌ ಅವರು ಘಟನಾ ಸ್ಥಳಕ್ಕೆ ಬಂದು, ಬಿಎಸ್‌ಎಫ್‌ ಸಿಬ್ಬಂದಿಯನ್ನು ನಿಯಂತ್ರಿ­ಸಲು ಯತ್ನಿಸಿದರು. ಆದರೆ, ಅವರಿಗೂ ಹಿಗ್ಗಾಮುಗ್ಗಾ ಥಳಿಸಿದ ಬಿಎಸ್‌ಎಫ್‌ ಸಿಬ್ಬಂದಿ ತಮ್ಮ ವಾಹನದಲ್ಲಿ ಪರಾರಿ­ಯಾಗಲು ಯತ್ನಿಸಿದರು. ನಂತರ ನಡಿಗೆ­ದಾರರು ಹಾಗೂ ಉದ್ಯಾನದ ಇತರೆ ಕಾವಲುಗಾರರು, ಪ್ರವೇಶದ್ವಾರದ ಬಳಿ ಇದ್ದ ಆಟೊ ಚಾಲಕರ ನೆರವಿನಿಂದ ಅವರ ವಾಹನವನ್ನು ಅಡ್ಡಗಟ್ಟಿ ಹೊರ ಹೋಗ­ದಂತೆ ತಡೆದರು. ಬಳಿಕ ಹಿರಿಯ ಅಧಿ­ಕಾರಿ­ಗಳು ಹೆಚ್ಚಿನ ಪೊಲೀಸರೊಂದಿಗೆ ಸ್ಥಳಕ್ಕೆ ಬಂದು, ಬಿಎಸ್‌ಎಫ್‌ ಸಿಬ್ಬಂದಿಯನ್ನು ವಶಕ್ಕೆ ತೆಗೆದುಕೊಂಡರು.

ಐವರ ಬಂಧನ
‘ಘಟನೆ ಸಂಬಂಧ ಸಮದ್‌ ಅವರು ದೂರು ಕೊಟ್ಟಿದ್ದಾರೆ. ಹಲ್ಲೆ, ಅಪ­ರಾಧ ಸಂಚು ಕರ್ತವ್ಯ ನಿರ್ವಹಣೆಗೆ ಅಡ್ಡಿ ಮತ್ತು ಶಾಂತಿ ಕದಡಿದ ಆರೋ­ಪದ ಮೇಲೆ ಪ್ರಕರಣ ದಾಖಲಿಸಿ­ಕೊಂಡು ಬಿಎಸ್‌ಎಫ್‌ನ ಐದು ಮಂದಿ­ಯನ್ನು ಬಂಧಿಸಲಾಗಿದೆ’ ಎಂದು  ದಕ್ಷಿಣ ವಿಭಾಗದ ಡಿಸಿಪಿ ಎಚ್‌.ಎಸ್‌.­ರೇವಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ದಿಲೀಪ್‌ಕುಮಾರ್‌, ಪ್ರವೀಣ್‌­ಕುಮಾರ್‌, ಚುಕ್ಮಾ, ಸಚಿನ್‌ ಲಿಪಟ್‌ ಮತ್ತು ಧರ್ಮೇಂದ್ರಸಿಂಗ್‌ ಬಂಧಿತರು. ಯಲಹಂಕದಲ್ಲಿರುವ ಬಿಎಸ್‌ಎಫ್‌ ತರಬೇತಿ ಕೇಂದ್ರದಲ್ಲಿ ನಾಲ್ಕು ತಿಂಗಳಿ­ನಿಂದ ತರಬೇತಿ ಪಡೆಯುತ್ತಿದ್ದ ಅವರು ಸಹೋದ್ಯೋಗಿಗಳೊಂದಿಗೆ ಬೆಳಿಗ್ಗೆ ವಿಧಾನ­ಸೌಧ, ಕಬ್ಬನ್‌ ಉದ್ಯಾನ ನೋಡಿ­ಕೊಂಡು ಸಂಜೆ ಲಾಲ್‌­ಬಾಗ್‌ಗೆ ಬಂದಿದ್ದರು ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.