ADVERTISEMENT

ನಾಪತ್ತೆಯಾಗಿದ್ದ ಅಪರಾಧಿ ಬಂಧನ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 19:40 IST
Last Updated 5 ಡಿಸೆಂಬರ್ 2012, 19:40 IST

ಬೆಂಗಳೂರು: ಪ್ರೇಯಸಿಯನ್ನೇ ಕೊಲೆ ಮಾಡಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ತಲೆಮರೆಸಿಕೊಂಡಿದ್ದ ಕೇರಳ ಮೂಲದ ರಾಜೇಶ್‌ಕುಮಾರ್ ಕೈಮಲ್ ಅಲಿಯಾಸ್ ರಾಜೇಶ್ (40) ಎಂಬಾತನನ್ನು ಸಂಪಂಗಿರಾಮನಗರ ಪೊಲೀಸರು ಬಂಧಿಸಿದ್ದಾರೆ.

ನಗರದ ರಾಜಾರಾಂ ಮೋಹನ್‌ರಾಯ್ ರಸ್ತೆಯಲ್ಲಿರುವ `ಕಂದನ್‌ದಾಲೆ ಕೃಷ್ಣರಾವ್ ಮೆಮೊರಿಯಲ್ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್' ಸಂಸ್ಥೆಯಲ್ಲಿ 1996ರಲ್ಲಿ ವಿದ್ಯಾರ್ಥಿಯಾಗಿದ್ದ ರಾಜೇಶ್, ಸಹಪಾಠಿ ದೆಹಲಿ ಮೂಲದ ಪೂಜಾ ಖೇರ್ (24) ಎಂಬ ವಿದ್ಯಾರ್ಥಿನಿಯನ್ನು ಕೊಲೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಅವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಪೂಜಾ ಅವರು ಸಹಪಾಠಿ ವಿದ್ಯಾರ್ಥಿಗಳೊಂದಿಗೆ ಸಲುಗೆಯಿಂದ ಇರುತ್ತಿದ್ದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ರಾಜೇಶ್, ಪ್ರೇಯಸಿಗೆ ವರ್ತನೆಯನ್ನು ಬದಲಿಸಿಕೊಳ್ಳುವಂತೆ ತಾಕೀತು ಮಾಡಿದ್ದ. ಆದರೂ ಪೂಜಾ ಅವರು ಸಹಪಾಠಿಗಳೊಂದಿಗೆ ಸಲುಗೆಯಿಂದಿರುವುದನ್ನು ಮುಂದುವರಿಸಿದ್ದರು. ಇದರಿಂದ ಕೋಪಗೊಂಡಿದ್ದ ಆತ, 1996ರ ಮಾ.30ರಂದು ವಿದ್ಯಾರ್ಥಿನಿಲಯದಲ್ಲಿನ ಪೂಜಾ ಅವರ ಕೊಠಡಿಗೆ ನುಗ್ಗಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡು 1996ರಲ್ಲೇ ಆತನನ್ನು ಬಂಧಿಸಲಾಗಿತ್ತು. ನ್ಯಾಯಾಲಯಕ್ಕೆ ದೋಷಾರೋಪಣಾಪಟ್ಟಿ ಸಹ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನಗರದ ನ್ಯಾಯಾಲಯವೊಂದು ಆತನನ್ನು 2001ರಲ್ಲಿ ಖುಲಾಸೆಗೊಳಿಸಿ ಆದೇಶ ಹೊರಡಿಸಿತ್ತು. ಸರ್ಕಾರ ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಬಳಿಕ ಹೈಕೋರ್ಟ್ ಅಧೀನ ನ್ಯಾಯಾಲಯದ ಆದೇಶವನ್ನು 2008ರಲ್ಲಿ ರದ್ದುಪಡಿಸಿತ್ತು. ಅಲ್ಲದೇ, ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಹೈಕೋರ್ಟ್‌ನ ಈ ತೀರ್ಪಿನ ಅನ್ವಯ ಸಿಟಿ ಸಿವಿಲ್ ನ್ಯಾಯಾಲಯದ (ಸಿಸಿಎಚ್-24) ನ್ಯಾಯಾಧೀಶ ಸುಧೀಂದ್ರರಾವ್ ಅವರು ಆತನ ಬಂಧನಕ್ಕೆ ವಾರೆಂಟ್ ಜಾರಿ ಮಾಡಿದ್ದರು. ಆದರೆ, ರಾಜೇಶ್ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಡಿ.5ರೊಳಗೆ ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನ್ಯಾಯಾಧೀಶರು ಆದೇಶಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣದಿಂದ ಖುಲಾಸೆಗೊಂಡ ನಂತರ ದುಬೈನಲ್ಲಿ ತಲೆಮರೆಸಿಕೊಂಡಿದ್ದ ರಾಜೇಶ್, 20 ದಿನಗಳ ರಜೆಯ ಮೇಲೆ ಇತ್ತೀಚೆಗೆ ಕೇರಳಕ್ಕೆ ಬಂದಿದ್ದ. ಕಾಲೇಜಿನ ಆಡಳಿತ ಮಂಡಳಿ ಸದಸ್ಯರು ಹಾಗೂ ಪಾಸ್‌ಪೋರ್ಟ್ ಕಚೇರಿ ಅಧಿಕಾರಿಗಳು ನೀಡಿದ ಮಾಹಿತಿ ಆಧರಿಸಿ ಕೇರಳಕ್ಕೆ ತೆರಳಿದ ಪೊಲೀಸರು ಆತನನ್ನು ಬಂಧಿಸಿದರು. ನ್ಯಾಯಾಧೀಶರು ರಾಜೇಶ್‌ನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದ್ದು, ಆತನನ್ನು ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೇಂದ್ರ ವಿಭಾಗದ ಡಿಸಿಪಿ ಬಿ. ಆರ್. ರವಿಕಾಂತೇಗೌಡ, ಹಲಸೂರುಗೇಟ್ ಉಪ ವಿಭಾಗದ ಎಸಿಪಿ ನ್ಯಾಮಗೌಡ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಬಿ.ರಾಮಮೂರ್ತಿ ಮತ್ತು ಸಿಬ್ಬಂದಿ ಆರೋಪಿಯನ್ನು ಬಂಧಿಸಿದ್ದಾರೆ.

ನಕಲಿ ಚಿನ್ನ ಮಾರಾಟ: ನಕಲಿ ಚಿನ್ನವನ್ನು ಅಸಲಿ ಚಿನ್ನವೆಂದು ನಂಬಿಸಿ ಜನರಿಗೆ ಮಾರಾಟ ಮಾಡಿ ವಂಚಿಸಲು ಯತ್ನಿಸುತ್ತಿದ್ದ ಆಂಧ್ರಪ್ರದೇಶ ಮೂಲದ ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಶ್ರೀನಿವಾಸ್‌ನಾಯ್ಡು (65), ಸಿರಾಜ್ ಅಹಮ್ಮದ್ (50), ಅನಿಲ್‌ಕುಮಾರ್ (35), ವೆಂಕಟೇಶ (30) ಮತ್ತು ಇಮ್ತಿಯಾಜ್ (30) ಬಂಧಿತರು. ಆರೋಪಿಗಳು ವಿಲ್ಸನ್‌ಗಾರ್ಡನ್‌ನ ರಾಣಿ ಉದ್ಯಾನದ ಬಳಿ ಕಾರಿನಲ್ಲಿ ನಕಲಿ ಚಿನ್ನ ಇಟ್ಟುಕೊಂಡು ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ನಂಬಿಸಿ ಜನರಿಗೆ ವಂಚಿಸಲು ಪ್ರಯತ್ನಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.