ADVERTISEMENT

ನಾರಾಯಣ ನೇತ್ರಾಲಯ ಇನ್ನಷ್ಟು ಹೈಟೆಕ್

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2011, 19:30 IST
Last Updated 28 ಆಗಸ್ಟ್ 2011, 19:30 IST
ನಾರಾಯಣ ನೇತ್ರಾಲಯ ಇನ್ನಷ್ಟು ಹೈಟೆಕ್
ನಾರಾಯಣ ನೇತ್ರಾಲಯ ಇನ್ನಷ್ಟು ಹೈಟೆಕ್   

ಬೆಂಗಳೂರು: ನಾರಾಯಣ ನೇತ್ರಾಲಯವು ಕಾರ್ನಿಯಾ ಶಸ್ತ್ರ ಚಿಕಿತ್ಸೆ, ಕೆಟರಾಕ್ಟ್ ನಿವಾರಣೆ ಮತ್ತು ಲೆನ್ಸ್ ಅಳವಡಿಕೆಗೆ ಇದೀಗ ಅತ್ಯಾಧುನಿಕ ತಂತ್ರಜ್ಞಾನದ ನೆರವು ಪಡೆದಿದ್ದು, ಇದರಿಂದ ನೇತ್ರ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವವರ ಶಸ್ತ್ರ ಚಿಕಿತ್ಸೆಗೆ ಸಾಕಷ್ಟು ಅನುಕೂಲವಾಗಲಿದೆ.

ಹೊಸ ತಂತ್ರಜ್ಞಾನದ ನೆರವಿನೊಂದಿಗೆ ಭಾನುವಾರ ನಾರಾಯಣ ನೇತ್ರಾಲಯದಲ್ಲಿ ದೃಷ್ಟಿ ದೋಷವುಳ್ಳ ರೋಗಿಗಳಿಗೆ ತಜ್ಞ ವೈದ್ಯರ ತಂಡ ನಡೆಸಿದ ರಿಫ್ರಾಕ್ಟಿವ್ ಲೆನ್ಸ್ ಅಳವಡಿಕೆ ಹಾಗೂ ಕಾರ್ನಿಯಾ ಶಸ್ತ್ರ ಚಿಕಿತ್ಸೆಯನ್ನು ನೇರ ಪ್ರಸಾರ ಮಾಡುವ ಮೂಲಕ ಖಾಸಗಿ ಹೋಟೆಲೊಂದರಲ್ಲಿ ಏರ್ಪಡಿಸಿದ್ದ `ಸೀಯಿಂಗ್ ಈಸ್ ಬಿಲೀವಿಂಗ್~ ಎಂಬ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಸುಮಾರು 250 ಮಂದಿ ತಜ್ಞ ವೈದ್ಯರು, ಫೆಲೋಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು.

`ವಿಷನ್-2020 ಇಂಡಿಯಾ ಫೋರಂ~ನ ಅಂಕಿ-ಅಂಶಗಳ ಪ್ರಕಾರ, ಕೆಟರಾಕ್ಟ್ ಹಾಗೂ ವಕ್ರೀಭವನದ ತೊಂದರೆಗಳು ಶೇ 80ರಷ್ಟು ಗುಣಪಡಿಸಬಲ್ಲ ಅಂಧತ್ವಕ್ಕೆ ಕಾರಣವಾಗಿವೆ. ಆದರೆ, ಶಸ್ತ್ರ ಚಿಕಿತ್ಸೆ ಲಭ್ಯವಿರುವ ಕಡೆಯಲ್ಲೂ ಕೆಟರಾಕ್ಟ್ ಮತ್ತು ಗುಣಪಡಿಸಲಾಗದ ವಕ್ರೀಭವನದ ತೊಂದರೆಗಳು ಸಾಮಾನ್ಯವಾಗಿವೆ. ಅದಕ್ಕೆ ಜನಸಾಮಾನ್ಯರಲ್ಲಿ ಅರಿವಿನ ಕೊರತೆಯೇ ಕಾರಣ~ ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ. ಭುಜಂಗಶೆಟ್ಟಿ ಹೇಳಿದರು.

`ಕಾರ್ನಿಯಾ~ ವಿಭಾಗದಲ್ಲಿ ವಕ್ರೀಭವನದ ತೊಂದರೆಗಳಿಗೆ ಬ್ಲೇಡ್‌ರಹಿತ ಶಸ್ತ್ರ ಚಿಕಿತ್ಸೆ ನೆರವೇರಿಸಲು `ವೇವ್ ಲೈಟ್ ರಿಫ್ರಾಕ್ಟಿವ್ ಸೂಟ್~ ಬಳಕೆ ಮಾಡಲಾಗುತ್ತಿದೆ. ಇದರೊಂದಿಗೆ ಕಾರ್ನಿಯಾದ ಅಸಹಜ ಉಬ್ಬುವಿಕೆಯ `ಕೆರಟೋಕೋನಸ್~ ರೋಗಕ್ಕೂ ಶಸ್ತ್ರ ಚಿಕಿತ್ಸೆ ನೆರವೇರಿಸಲು ಸಹಕಾರಿಯಾಗಲಿದೆ~ ಎಂದು ಅವರು ತಿಳಿಸಿದರು.

ಇದಕ್ಕೂ ಮುನ್ನ ಕಾರ್ಯಾಗಾರವನ್ನು ಉದ್ಘಾಟಿಸಿದ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎಸ್. ಶ್ರೀಪ್ರಕಾಶ್, `ವೈದ್ಯಕೀಯ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಅದೇ ರೀತಿ, ನಾರಾಯಣ ನೇತ್ರಾಲಯ ದೃಷ್ಟಿ ದೋಷ ನಿವಾರಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

`ಮುಂದಿನ ಶೈಕ್ಷಣಿಕ ವರ್ಷದಿಂದ ನೇತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್ ಪ್ರಾರಂಭಿಸುತ್ತಿರುವ ನಾರಾಯಣ ನೇತ್ರಾಲಯ, ಭವಿಷ್ಯದಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಲು ಮುಂದಾಗಬೇಕು~ ಎಂದು ಸಲಹೆ ಮಾಡಿದರು.

ನವದೆಹಲಿಯ ಡಾ. ಸಂಜಯ್ ಚೌಧರಿ, ಹುಬ್ಬಳ್ಳಿಯ ಡಾ. ಕೃಷ್ಣಪ್ರಸಾದ್, ನಾರಾಯಣ ನೇತ್ರಾಲಯದ ಡಾ. ರೋಹಿತ್ ಶೆಟ್ಟಿ, ಡಾ. ಹಿಮಾಂಶು ಮಟಾಲಿಯಾ, ಡಾ. ಯತೀಶ್, ಸಂದೀಪ್ ದಾಸ್ ಹಾಗೂ ಡಾ. ಮ್ಯಾಥ್ಯೂ ಕುರಿಯನ್ ಶಸ್ತ್ರ ಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.