ADVERTISEMENT

ನಾರಾಯಣ ಹೃದಯಾಲಯದಲ್ಲಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2011, 19:40 IST
Last Updated 25 ಸೆಪ್ಟೆಂಬರ್ 2011, 19:40 IST

ಬೆಂಗಳೂರು: ಯುವ ಹಾಗೂ ಸಂಕೀರ್ಣವಾದ ಹೃದ್ರೋಗ ಶಸ್ತ್ರ ಚಿಕಿತ್ಸೆ ನಡೆಸುವಂತಹ ತಜ್ಞ ವೈದ್ಯರ ಅನುಕೂಲಕ್ಕಾಗಿ ದೇಶದಲ್ಲಿಯೇ ಇದೇ ಪ್ರಥಮ ಬಾರಿಗೆ ನಗರದ ನಾರಾಯಣ ಹೃದಯಾಲಯದಲ್ಲಿ ಹೃದ್ರೋಗ ಶಸ್ತ್ರ ಚಿಕಿತ್ಸಾ ಪ್ರಯೋಗಾಲಯವನ್ನು ಪ್ರಾರಂಭಿಸಲಾಗಿದೆ.

ಈ ಪ್ರಯೋಗಾಲಯದಲ್ಲಿ ಏಕಕಾಲದಲ್ಲಿ 40 ಮಂದಿ ವೈದ್ಯರಿಗೆ ಪ್ರಾಯೋಗಿಕವಾಗಿ ಹೃದ್ರೋಗ ಶಸ್ತ್ರ ಚಿಕಿತ್ಸೆ ತರಬೇತಿ ನೀಡುವಂತಹ ಸೌಲಭ್ಯವಿದೆ.ಶುಕ್ರವಾರ ಪ್ರಯೋಗಾಲಯವನ್ನು ವಿದ್ಯುಕ್ತವಾಗಿ ಉದ್ಘಾಟಿಸಿದ ರಾಷ್ಟ್ರೀಯ ಪರೀಕ್ಷಾ ಮಂಡಳಿಯ ಅಧ್ಯಕ್ಷ ಡಾ. ಶ್ರೀನಾಥ್‌ರೆಡ್ಡಿ, `ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹೆಚ್ಚಿನ ಜನತೆ ಹೃದ್ರೋಗ, ಕ್ಯಾನ್ಸರ್, ಮಧುಮೇಹದಂತಹ ಕಾಯಿಲೆಗಳಿಗೆ ಗುರಿಯಾಗುತ್ತಿರುವ ಸಂದರ್ಭದಲ್ಲಿ ಇಂತಹ ಅತ್ಯಾಧುನಿಕ ಶಸ್ತ್ರ ಚಿಕಿತ್ಸಾ ಪ್ರಯೋಗಾಲಯಗಳ ಸ್ಥಾಪನೆ ಅತ್ಯವಶ್ಯ~ ಎಂದರು.

`ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ದೇಶದಲ್ಲಿಯೂ ಇಂದು ಇಂತಹ ಪ್ರಯೋಗಾಲಯಗಳನ್ನು ಪ್ರಾರಂಭಿಸಲು ಸಾಧ್ಯವಾಗಿದೆ. ಇವುಗಳ ಪ್ರಯೋಜನ ಪಡೆಯುವ ತಜ್ಞ ವೈದ್ಯರು ಅದನ್ನು ಸಾಮಾನ್ಯ ಜನರ ಸೇವೆಗೆ ಬಳಸಲು ಸಹಕಾರಿ ಎನಿಸಿದೆ~ ಎಂದರು.

ಬೆಂಗಳೂರಿನ ಸೇಂಟ್ ಜಾನ್ಸ್ ವೈದ್ಯಕೀಯ ಆಸ್ಪತ್ರೆಯಲ್ಲಿ ಮಂಡಳಿಯ ಪ್ರಾದೇಶಿಕ ಕಚೇರಿಯನ್ನು ಶೀಘ್ರದಲ್ಲಿಯೇ ಪ್ರಾರಂಭಿಸಲಾಗುತ್ತದೆ ಎಂದರು.ರಾಷ್ಟ್ರೀಯ ಪರೀಕ್ಷಾ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಬಿಪಿನ್ ಬಾತ್ರಾ, `ಬೆಂಗಳೂರಿನಲ್ಲಿ ಮಂಡಳಿಯ ಪ್ರಾದೇಶಿಕ ಕಚೇರಿ ಪ್ರಾರಂಭವಾಗಲಿರುವುದರಿಂದ ಸ್ಥಳೀಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳೊಂದಿಗೆ ಸೌಹಾರ್ದ ಸಂಬಂಧ ಬೆಳೆಸುವುದರ ಜತೆಗೆ, ಸುಲಭವಾಗಿ ಸಮಸ್ಯೆಗಳನ್ನು ಪರಿಹರಿಸಲು ಸಹಕಾರಿಯಾಗಲಿದೆ~ ಎಂದರು.

ನಾರಾಯಣ ಹೃದಯಾಲಯದ ಅಧ್ಯಕ್ಷ ಡಾ. ದೇವಿಶೆಟ್ಟಿ ಮಾತನಾಡಿ, `ನಾನು ವೈದ್ಯಕೀಯ ಶಿಕ್ಷಣ ಮುಗಿಸಿದ ನಂತರ ಇಂಗ್ಲೆಂಡ್‌ನಲ್ಲಿ ಇಂತಹ ಅತ್ಯಾಧುನಿಕ ಶಸ್ತ್ರ ಚಿಕಿತ್ಸಾ ಪ್ರಯೋಗಾಲಯದಲ್ಲಿ ತರಬೇತಿ ಪಡೆದಿದ್ದೆ. ಭಾರತದಲ್ಲಿಯೂ ಇಂತಹ ಪ್ರಯೋಗಾಲಯ ಸ್ಥಾಪಿಸಬೇಕೆಂಬ ಅಂದಿನ ನನ್ನ ಕನಸು ಇದೀಗ ನನಸಾಗಿದೆ~ ಎಂದರು.

ನಾರಾಯಣ ಹೃದಯಾಲಯದ ತಜ್ಞ ವೈದ್ಯರಾದ ಡಾ. ಕಾಲಿನ್ ಜಾನ್, ಡಾ. ಮುರಳೀಧರ್, ಪ್ರೊ. ಜೈರಾಜ್ ಮತ್ತಿತರರು ಉಪಸ್ಥಿತರಿದ್ದರು.


 


 

ADVERTISEMENT


 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.